Advertisement
ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ವಿವಿಧ ಇಲಾಖೆಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರ ನಿರ್ವಹಣೆ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬರ ನಿರ್ವಹಣೆ ಗಂಭೀರವಾಗಿ ಪರಿಗಣಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲೆಯ ಏಳು ತಾಲೂಕುಗಳ ಪೈಕಿ ಆರು ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಇದಕ್ಕಾಗಿ ಬಿಡುಗಡೆಯಾಗಿರುವ ಅನುದಾನವನ್ನು ನೀರು ಮತ್ತು ಮೇವಿಗೆ ಸಮರ್ಪಕವಾಗಿ ಖರ್ಚು ಮಾಡಿ. ಅಗತ್ಯವಿದ್ದಲ್ಲಿ ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಜಿಲ್ಲೆಗೆ ಮಂಜೂರಾದ 546 ಕುಡಿಯುವ ನೀರು ಶುದ್ಧೀಕರಣ ಘಟಕಗಳ ಪೈಕಿ 353 ಕಾರ್ಯನಿರ್ವಹಿಸುತ್ತಿದ್ದು, ಪ್ರಗತಿಯಲ್ಲಿರುವ ಉಳಿದ ಘಟಕಗಳನ್ನು ಡಿಸೆಂಬರ್ ಅಂತ್ಯಕ್ಕೆ ಮುಗಿಸಬೇಕು. ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರವಾಗುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.
Related Articles
Advertisement
ವಸತಿ ಯೋಜನೆಯತ್ತ ಗಮನಹರಿಸಿ: ಸೂರಿಲ್ಲದವರಿಗೂ ಸೂರು ಕಲ್ಪಿಸಬೇಕೆಂಬ ಸರ್ಕಾರದ ಸದಾಶಯವನ್ನರಿತು ವಿವಿಧ ವಸತಿ ಯೋಜನೆಗಳ ಉದ್ದೇಶಕ್ಕಾಗಿ ಹಳ್ಳಿಗಳಲ್ಲಿ ಹಾಗೂ ಪಟ್ಟಣ ಪ್ರದೇಶದಲ್ಲಿ ಭೂಮಿ ಖರೀದಿಸಿ ಮನೆ ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಂಚಬೇಕು. ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಯೋಜನೆ ಸಂಬಂಧ ಮಾಹಿತಿಯನ್ನು ಆಗಾಗ ರಾಜೀವ ಗಾಂಧಿ ವಸತಿ ನಿಗಮದ ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡಬೇಕೆಂದು ವಸತಿ ಇಲಾಖೆ ಕಾರ್ಯದರ್ಶಿಯೂ ಆಗಿರುವ ಡಾ| ಜೆ. ರವಿಶಂಕರ ಅಧಿಕಾರಿಗಳಿಗೆ ಸೂಚಿಸಿದರು.
ಪ್ರೈಜ್ ಮನಿ ಇನ್‌ಟೈಮ್ ಕೊಡಿ: ಸಮಾಜ ಕಲ್ಯಾಣ ಇಲಾಖೆಯಿಂದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸುಗಳಲ್ಲಿ ಪ್ರಥಮ ಬಾರಿಗೆ ಮೊದಲನೇ ದರ್ಜೆಯಲ್ಲಿ ಉತ್ತೀರ್ಣರಾಗುವ ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳು ನಗದು ಬಹುಮಾನ ಕೋರಿ ಅರ್ಜಿ ಸಲ್ಲಿಸಿದವರಿಗೆ ವಿಳಂಬ ಮಾಡದೆ ಪ್ರೈಜ್ ಮನಿ ಇನ್‌ಟೈಮ್‌ನಲ್ಲಿ ಕೊಡಿ. ಇದರಿಂದ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಿ ಉತ್ತಮ ಫಲಿತಾಂಶ ಪಡೆಯಲು ನೆರವಾಗಬಹುದು. ವಿದ್ಯಾರ್ಥಿಗಳಿಗೆ ಶೂನ್ಯ ದರದಲ್ಲಿ ಬ್ಯಾಂಕ್ ಖಾತೆ ತೆರೆಯಲು ಅಲ್ಲಲ್ಲಿ ಸಮಸ್ಯೆ ಕಂಡುಬರುತ್ತಿದ್ದು, ಕೂಡಲೇ ಬ್ಯಾಂಕರ್ ಸಭೆ ಕರೆದು ಪರಿಹಾರ ಸೂಚಿಸಿ ಎಂದು ಜಿಲ್ಲಾ ಪಂಚಾಯತ್ ಸಿಇಒಗೆ ನಿರ್ದೇಶನ ನೀಡಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಜಾ ಪಿ. ಮಾತನಾಡಿ. ಬರಪೀಡಿತ ಪ್ರತಿ ತಾಲೂಕಿನಲ್ಲಿ ಬರ ನಿರ್ವಹಣೆ ಕಾಮಗಾರಿ ಕೈಗೊಳ್ಳಲು 50 ಲಕ್ಷ ರೂ. ಅನುದಾನ ಮಂಜೂರಾಗಿದೆ. ಮೊದಲನೇ ಹಂತವಾಗಿ ತಲಾ 25 ಲಕ್ಷ ರೂ. ಅನುದಾನ ಸರ್ಕಾರ ಹಂಚಿಕೆ ಮಾಡಲಾಗಿದೆ. ಅದರಂತೆ ಬರ ಪರಿಹಾರ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 2002 ಬೇಸ್ಡ್ಲೈನ್ ಸರ್ವೇ ಪ್ರಕಾರ ಶೇ.100ರಷ್ಟು ಶೌಚಾಲಯ ನಿರ್ಮಾಣ ಮಾಡಲಾಗಿದೆ. ಬರ ಹಿನ್ನೆಲೆಯಲ್ಲಿ ನರೇಗಾ ಕೂಲಿ ದಿನ ಹೆಚ್ಚಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಕೃಷಿ, ಗ್ರಾಮೀಣ ನೀರು ಸರಬರಾಜು, ತೋಟಗಾರಿಕೆ, ಅಲ್ಪಸಂಖ್ಯಾತ, ಹಿಂದುಳಿದ, ಪಶು ಸಂಗೋಪನೆ, ಸಮಾಜ ಕಲ್ಯಾಣ, ರೇಷ್ಮೆ, ವಸತಿ ಯೋಜನೆಗಳು, ಆರೋಗ್ಯ, ಮಹಿಳಾ ಮತು ಮಕ್ಕಳ ಕಲ್ಯಾಣ ಸೇರಿದಂತೆ ಇನ್ನಿತರ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎನ್. ಜಯಪ್ರಕಾಶ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. ನವೀನ ಪರಿಕಲ್ಪನೆ-ತಂತ್ರಜ್ಞಾನದತ್ತ ಗಮನ ಹರಿಸಿ
ಡಿಸೆಂಬರ್ ತಿಂಗಳಿನಲ್ಲಿ ಮತ್ತೆ ಮಾಸಿಕ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಅಷ್ಟರೊಳಗೆ ಆಯಾ ಇಲಾಖೆಗೆ ನಿಗದಿಪಡಿಸಿದ ಕ್ರಿಯಾ ಯೋಜನೆ ಅನ್ವಯ ಭೌತಿಕ ಮತು ಆರ್ಥಿಕ ಪ್ರಗತಿ ಸಾಧಿಸಬೇಕು. ಪ್ರಸ್ತುತ ಇರುವ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಫಲಾನುಭವಿಗಳಿಗೆ ತಲುಪಿಸಬಲ್ಲ ನವೀನ ಪರಿಕಲ್ಪನೆ, ತಂತ್ರಜ್ಞಾನದ ಬಗ್ಗೆ ಚಿಂತನೆ ಮಾಡಿ ಸೂಕ್ತ ಯೋಜನೆ ರೂಪಿಸಿ. ಜಿಲ್ಲೆಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತನ್ನಿ. ಆಯಾ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಸರ್ಕಾರಕ್ಕೆ ಕಳುಹಿಸುವ ಪ್ರಸ್ತಾವನೆಯ ಪ್ರತಿಯನ್ನು ನನಗೂ ಕಳುಹಿಸಿದಲ್ಲಿ ಸರ್ಕಾರದ ಮಟ್ಟದಲ್ಲಿ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು.
ಡಾ| ಜೆ. ರವಿಶಂಕರ, ವಸತಿ ಇಲಾಖೆ ಕಾರ್ಯದರ್ಶಿ