ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಕಿ-ಅಂಶಗಳ ಪ್ರಕಾರ 515 ಕೆರೆಗಳಿದ್ದು, ವಿವಿಧ ಇಲಾಖೆಗಳ ಅಧೀನದಲ್ಲಿ ನಿರ್ವಹಣೆಯಾಗುತ್ತಿರುವ ಈ ಕೆರೆಗಳು ಎಲ್ಲೆಲ್ಲಿ ಇವೆ ಮತ್ತು ಅವುಗಳ ವಸ್ತು ಸ್ಥಿತಿ ಕುರಿತಂತೆ ಪರಿಶೀಲಿಸಿ 3 ದಿನಗಳೊಳಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ನಡೆದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು.
ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ಹೈಕೋರ್ಟಿನಲ್ಲಿ ಇದೇ ಫೆ. 15 ರಂದು ವಿಚಾರಣೆಗೆ ಬರಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಜಿಲ್ಲೆಯ ಕೆರೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸರಕಾರಕ್ಕೆ ಸಲ್ಲಿಸ ಬೇಕಾಗಿದೆ. ಹಾಗಾಗಿ ಈ ಸಭೆಯನ್ನು ನಡೆಸ ಬೇಕಾಯಿತು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ರಾಷ್ಟ್ರ ಮಟ್ಟದ 6 ನೇ ಸಣ್ಣ ನೀರಾವರಿ ಗಣತಿ ಮತ್ತು ನೀರಿನಾಸರೆಗಳ ಗಣತಿ ಕಾರ್ಯ ನಡೆಯ ಬೇಕಾಗಿದ್ದು, ಈ ಪ್ರಕ್ರಿಯೆಗೂ ಈಗ ಸಂಗ್ರಹಿಸಲಾಗುವ ಮಾಹಿತಿ ಪೂರಕವಾಗಲಿದೆ. ಕೆರೆಗಳ ಒತ್ತುವರಿ ಮತ್ತು ಮಾಲಿನ್ಯವನ್ನು ತಡೆದು ಅವುಗಳನ್ನು ಸಂರಕ್ಷಿಸಿ ನೀರಿನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ 5 ವರ್ಷಗಳಿಗೊಮ್ಮೆ ಕೆರೆಗಳ ಮತ್ತು ನೀರಿನಾಸರೆಗಳ ಗಣತಿ ಕಾರ್ಯ ನಡೆಸಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಗೋಕುಲ್‌ದಾಸ್ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿದ್ದರು.