ಬೆಂಗಳೂರು: ಅಕ್ಟೋಬರ್‌ವರೆಗೆ ಮೂರು ತಿಂಗಳ ಮಟ್ಟಿಗೆ 627510145 ಲಕ್ಷ ರೂ.ಗಳ ಲೇಖಾನುದಾನ, 3327.85 ಕೋಟಿ ರೂ. ಪೂರಕ ಅಂದಾಜುಗಳ ಮೊದಲ ಕಂತನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿ ಸದನದ ಅನುಮೋದನೆ ಪಡೆದರು. ಈ ಮೂಲಕ ಹೊಸದಾಗಿ ಬಜೆಟ್ ಮಂಡಿಸುವ ಸುಳಿವನ್ನೂ ನೀಡಿದರು. ಈ ಹಿಂದೆ ಪೂರ್ಣ ಪ್ರಮಾಣದ ಬಜೆಟ್ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಜುಲೈ ಅಂತ್ಯದವರೆಗೆ ಲೇಖಾನುದಾನ ಪಡೆಯಲಾಗಿತ್ತು.
ಇದೀಗ ಮತ್ತೆ ಮೂರು ತಿಂಗಳ ಮಟ್ಟಿಗೆ ಲೇಖಾನುದಾನ ಯಾಕೆ ಪಡೆಯಲಾಗಿದೆ? ಆರ್ಥಿಕ ವರ್ಷದ ಅಂತ್ಯದವರೆಗೆ ಪಡೆದುಕೊಳ್ಳಿ. ಆ ನಂತರ ಏನು ಬೇಕಾದರೂ ಬದಲಾವಣೆ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಆದರೆ, ಮೂರು ತಿಂಗಳ ಮಟ್ಟಿಗೆ ಲೇಖಾನುದಾನ ಪಡೆದುಕೊಳ್ಳಲು ಸರ್ಕಾರ ಸಜ್ಜಾಗಿ ಬಂದಿದೆ. ಸರ್ಕಾರ ನಡೆಸೋರು ಅವರು ಮಾಡಿಕೊಳ್ಳಲಿ ಬಿಡಿ ಎಂದು ಸ್ಪೀಕರ್ ರಮೇಶ್‌ಕುಮಾರ್ ಹೇಳಿದರು. ಹೀಗಾಗಿ, ಲೇಖಾನುದಾನಕ್ಕೆ ಒಪ್ಪಿಗೆ ನೀಡಲಾಯಿತು.
ಪೂರಕ ಅಂದಾಜು ಮಂಡನೆ ಸಂದರ್ಭದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಸಿಎಂ ಯಡಿಯೂರಪ್ಪ, ಬಿಜೆಪಿಯ ಮಾಧುಸ್ವಾಮಿ ಅವರು, ಬರ ಇದೆ. ಕೇಂದ್ರದಿಂದ ಎನ್‌ಡಿಆರ್‌ಎಫ್ ಹಣ, ರಾಜ್ಯದ ಪಾಲಿನ ಹಣ ವೆಚ್ಚಕ್ಕೆ ಪೂರಕ ಅಂದಾಜಿಗೆ ಒಪ್ಪಿಗೆ ಸಿಗಲೇಬೇಕಿದೆ. ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂದು ಹೇಳಿದರು.
ಆದರೂ ಸಿದ್ದರಾಮಯ್ಯ ಅವರು ಒಪ್ಪದೆ, ರಾಜ್ಯ ಸರ್ಕಾರದ ಖಜಾನೆಯಿಂದ ಹಣ ಭರಿಸಿ ಆ ನಂತರ ಹೊಂದಾಣಿಕೆ ಮಾಡಿಕೊಳ್ಳಿ. ಪೂರಕ ಅಂದಾಜು ಚರ್ಚೆ ಇಲ್ಲದೆ ಹೇಗೆ ಅನುಮೋದನೆ ಕೊಡುವುದು? ಪೂರಕ ಅಂದಾಜಿಗೆ ನನ್ನ ವಿರೋಧವಿಲ್ಲ, ಆದರೆ, ಮತ್ತೆ ಅಧಿವೇಶನ ಕರೆದು ಚರ್ಚಿಸಿ ಅಂಗೀಕಾರ ಪಡೆದುಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ಹಾಗೂ ಬಂಡೆಪ್ಪ ಕಾಶೆಂಪುರ್ ಅವರು ಬಿಜೆಪಿ ಪರವೇ ಬ್ಯಾಟಿಂಗ್ ಮಾಡಿ, ನಮ್ಮದೇ ಸರ್ಕಾರ ಇದ್ದಾಗ ಸಿದ್ಧಪಡಿಸಿದ ಪೂರಕ ಅಂದಾಜು, ಒಪ್ಪಿಗೆ ತೆಗೆದುಕೊಳ್ಳಲಿ ಬಿಡಿ. ಬರ ಇದೆ ಕಾಮಗಾರಿ ನಿಲ್ಲಬಾರದು ಎಂದು ಹೇಳಿದರು. ಅಂತಿಮವಾಗಿ ಸಿದ್ದರಾಮಯ್ಯ ಅವರು ಒಪ್ಪಿ ಪೂರಕ ಅಂದಾಜು ಸಹ ಅಂಗೀಕಾರಗೊಂಡಿತು.
ಕರ್ನಾಟಕ ಧನ ವಿನಿಯೋಗ (ಲೇಖಾನುದಾನ ಸಂಖ್ಯೆ 2) ಹಾಗೂ ಪೂರಕ ಅಂದಾಜು 2019-20 ಮೊದಲ ಕಂತು ಅಂಗೀಕಾರಗೊಂಡಿತು. ಇದಾದ ನಂತರ ವಿಧಾನಪರಿಷತ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಧನವಿನಿಯೋಗ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆದು ಮತ್ತೆ ವಿಧಾನಸಭೆಯಲ್ಲಿ ಪರಿಷತ್‌ನಲ್ಲಿ ಅಂಗೀಕಾರಗೊಂಡಿರುವುದು ಪ್ರಕಟಿಸಲಾಯಿತು.