ಬೆಂಗಳೂರು: ಉಡುಪಿಯ ಹೆಜಮಾಡಿ ಮೀನುಗಾರಿಕೆ ಬಂದರು 180.84 ಕೋ. ರೂ. ವೆಚ್ಚದಲ್ಲಿ ಮತ್ತು ಗಂಗೊಳ್ಳಿ ಬಂದರಿನ ಮೀನುಗಾರಿಕೆ ಜೆಟ್ಟಿ ಪುನರ್ ನವೀಕರಣಕ್ಕಾಗಿ 12 ಕೋ. ರೂ. ಮೊತ್ತದ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಕುರಿತು “ಉದಯವಾಣಿ’ಯೊಂದಿಗೆ ಪ್ರತಿಕ್ರಿಯಿಸಿದ ಬಂದರು ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯವು 320 ಕಿ.ಮೀ. ಕರಾವಳಿ ತೀರ ಹೊಂದಿದ್ದು 21,891 ಮೀನುಗಾರಿಕಾ ದೋಣಿಗಳಿದ್ದು ದಟ್ಟಣೆ ಕಡಿಮೆ ಮಾಡಿ ಸುಗಮ ಸಂಚಾರ ಕಲ್ಪಿಸಲು ಎಂಟು ಮೀನುಗಾರಿಕೆ ಬಂದರು ಮತ್ತು 26 ಮೀನುಗಾರಿಕೆ ಇಳಿದಾಣ ಕೇಂದ್ರಗಳ ಅಭಿವೃದ್ಧಿಗೆ ಉಡುಪಿಯ ಹೆಜಮಾಡಿ ಕೋಡಿಯಲ್ಲಿ 30 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮೀನುಗಾರಿಕಾ ಬಂದರನ್ನು 180.84 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ಇಲ್ಲಿಯವರೆಗೆ ಹೆಜಮಾಡಿ ಪ್ರದೇಶದ ಮೀನುಗಾರರು ಮಂಗಳೂರು ಅಥವಾ ಮಲ್ಪೆ ಮೀನುಗಾರಿಕೆ ಬಂದರು ಆಶ್ರಯಿಸಬೇಕಿತ್ತು. ಹೆಜಮಾಡಿ ಬಂದರು ನಿರ್ಮಾಣದಿಂದ ಸ್ಥಳೀಯ ಮೀನುಗಾರರಿಗೆ ಅನುಕೂಲವಾಗಲಿದೆ. ಎರಡು ತಿಂಗಳುಗಳ ಹಿಂದೆ ನಾನು ಸ್ಥಳಕ್ಕೆ ಭೇಟಿ ನೀಡಿದ್ದಾಗ ಯೋಜನೆಗೆ ಅನುಮತಿ ಕೊಡಿಸುವ ಭರವಸೆ ನೀಡಿದ್ದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಯೋಜನೆಗೆ ಅವಶ್ಯವಿರುವ 32 ಎಕರೆ ಸರಕಾರಿ ಜಮೀನು ಈಗಾಗಲೇ ಕಂದಾಯ ಇಲಾಖೆಯಿಂದ ನಮ್ಮ ಇಲಾಖೆಗೆ ವರ್ಗಾವಣೆ ಮಾಡಿದೆ. ಖಾಸಗಿ ಒಡೆತನದ 12 ಎಕರೆ ಜಮೀನು ಅಗತ್ಯವಿದ್ದು, ಭೂ ಸ್ವಾಧೀನಕ್ಕೆ 13.24 ಕೋ. ರೂ. ಒಟ್ಟಾರೆ ಮೊತ್ತದಲ್ಲಿ ಮೀಸಲಿಡಲಾಗಿದೆ. ಲಾಲಾಜಿ ಮೆಂಡನ್ ಅವರ ಬಹುದಿನಗಳ ಬೇಡಿಕೆ ಈಡೇರಿರುವುದು ಹರ್ಷ ತಂದಿದೆ ಎಂದು ಹೇಳಿದರು. ಉಡುಪಿ ಜಿಲ್ಲೆ ಗಂಗೊಳ್ಳಿ ಬಂದರಿ ನಲ್ಲಿ ಇತ್ತೀಚೆಗೆ ಕುಸಿದಿರುವ ಮೀನುಗಾರಿಕೆ ಜೆಟ್ಟಿಯ ಪುನರ್ ನಿರ್ಮಾಣದ 12 ಕೋ. ರೂ. ಮೊತ್ತದ ಯೋಜನೆಗೆ ಕೂಡ ಸಚಿವ ಸಂಪುಟದ ಆಡಳಿ ತಾತ್ಮಕ ಅನುಮೋದನೆ ದೊರೆತಿದೆ ಎಂದು ಸಚಿವ ಕೋಟ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಎಡಪದವು-ಕುಪ್ಪೆಪದವು-ಅರಾ- ಸೊರ್‍ನಾಡು ಮಾರ್ಗದಲ್ಲಿ 7.40 ಕಿ.ಮೀ.ಗಳಷ್ಟು ಸೇತುವೆ ನಿರ್ಮಾಣದ 13.90 ಕೋ. ರೂ. ಮೊತ್ತದ ಯೋಜನೆಗೆ ಕೂಡ ಸಂಪುಟ ಒಪ್ಪಿಗೆ ನೀಡಿದೆ.
ಇ – ಆಸ್ಪತ್ರೆಗೆ ಸಚಿವ ಸಂಪುಟ ಅಸ್ತು
ಇನ್ನು ಮುಂದೆ ರಾಜ್ಯದ ಯಾವುದೇ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಹೋದ ವ್ಯಕ್ತಿಯ ಪೂರ್ಣ ಆರೋಗ್ಯ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಇದರಿಂದಾಗಿ ಇನ್ನೊಂದು ಆಸ್ಪತ್ರೆಗೆ ತೆರಳಿದಾಗ ಆನ್‌ಲೈನ್ ಮೂಲಕವೇ ಆ ವ್ಯಕ್ತಿಯ “ಆರೋಗ್ಯ ಚರಿತ್ರೆ’ ತಿಳಿದುಕೊಳ್ಳಲು ವೈದ್ಯರಿಗೆ ಸಹಾಯವಾಗುತ್ತದೆ. ಇದಕ್ಕೆ ಸಂಬಂಧಿಸಿದ ಇ- ಆಸ್ಪತ್ರೆ ಯೋಜನೆ ಜಾರಿಗೊಳಿಸುವ ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ರಾಷ್ಟ್ರೀಯ ಹೆಲ್ತ್ ಮಿಷನ್‌ನಡಿ 50 ಸಮುದಾಯ ಆರೋಗ್ಯ ಕೇಂದ್ರಗಳು, 122 ತಾಲೂಕು ಆಸ್ಪತ್ರೆಗಳಲ್ಲಿ 56.79 ಕೋಟಿ ರೂ. ಮೊತ್ತದಲ್ಲಿ ಯೋಜನೆ ಜಾರಿಯಾಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೂ ವಿಸ್ತರಣೆಯಾಗಲಿದೆ.