ಮುಂಬೈ: ಕಳೆದ ಏಕದಿನ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡವು ಈ ಬಾರಿಯ ವಿಶ್ವಕಪ್ ಕೂಟದಲ್ಲಿ ತಾನು ಹಾಲಿ ಚಾಂಪಿಯನ್ ಎನ್ನುವುದನ್ನು ಮರೆತು ಆಡುತ್ತಿದೆ. ಆಡಿದ ಆರು ಪಂದ್ಯಗಳಲ್ಲಿ ಐದನ್ನು ಸೋತ ಜೋಸ್ ಬಟ್ಲರ್ ಪಡೆಯು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಕ್ರಿಕೆಟ್ ವಿಶ್ವಕಪ್ ನಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿದ ಉದಾಹರಣೆ ಹೊಂದಿಲ್ಲದ ನೆದರ್ಲ್ಯಾಂಡ್ ಕೂಡಾ ಈ ಬಾರಿ ಎರಡು ಪಂದ್ಯಗಳನ್ನು ಗೆದ್ದುಕೊಂಡು ಅಂಕಪಟ್ಟಿಯಲ್ಲಿ ಮೇಲಿದೆ.
ಈ ವಿಶ್ವಕಪ್ ಹೀನಾಯ ಪ್ರದರ್ಶನದ ಬಳಿಕ ಇದೀಗ ಮುಂದಿನ ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಬೀಳುವ ಆತಂಕ ಎದುರಿಸುತ್ತಿದೆ ಇಂಗ್ಲೆಂಡ್. 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಕೂಟ ನಡೆಯಲಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಈ ಕೂಟದಲ್ಲಿ ಎಂಟು ತಂಡಗಳು ಭಾಗಿಯಾಗಲಿದೆ.
ಈ ಹಿಂದೆ ಐಸಿಸಿ ರ್ಯಾಂಕಿಂಗ್ ನಲ್ಲಿ ಅಗ್ರ ಎಂಟು ಸ್ಥಾನ ಹೊಂದಿದ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಅವಕಾಶ ಪಡೆಯುತ್ತಿದ್ದವು. ಆದರೆ ಇತ್ತೀಚೆಗೆ ಐಸಿಸಿ ತನ್ನ ನಿಯಮದಲ್ಲಿ ಬದಲಾವಣೆ ಮಾಡಿದೆ. ಐಸಿಸಿ ಏಕದಿನ ವಿಶ್ವಕಪ್ ನ ಅಂಕಪಟ್ಟಿಯಲ್ಲಿ ಅಗ್ರ ಎಂಟರಲ್ಲಿ ಬರುವ ತಂಡಗಳು ಮಾತ್ರ ಚಾಂಪಿಯನ್ಸ್ ಟ್ರೋಫಿ ಆಡಬಹುದು ಎಂದು ನಿಯಮ ಮಾಡಿದೆ. ಸದ್ಯಕ್ಕೆ ಅಂಕಪಟ್ಟಿಯಲ್ಲಿ ಕೊನೆಯ ಅಂದರೆ ಹತ್ತನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಚಾಂಪಿಯನ್ಸ್ ಟ್ರೋಫಿ ಆಡುವ ಸಾಧ್ಯೆತೆಯಿಲ್ಲ.
ಇದನ್ನೂ ಓದಿ:State Politics: ಬೆಳಗಾವಿ ರಾಜಕಾರಣದಿಂದಲೇ ಸರ್ಕಾರ ಪತನ: ಶಾಸಕ ರಮೇಶ ಜಾರಕಿಹೊಳಿ
ಈ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಇನ್ನು ಆಸ್ಟ್ರೇಲಿಯಾ, ನೆದರ್ಲ್ಯಾಂಡ್ ಮತ್ತು ಪಾಕಿಸ್ತಾನ ತಂಡಗಳನ್ನು ಎದುರಿಸಲಿದೆ. ಕೊನೆಯ ಪಕ್ಷ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಪಡೆಯಲಾದರೂ ಇಂಗ್ಲೆಂಡ್ ಈ ಪಂದ್ಯಗಳನ್ನು ಗೆಲ್ಲಬೇಕಿದೆ.