Advertisement

CM Siddaramaiah: ಆತ್ಮಸಾಕ್ಷಿಯೇ ಸರ್ವ ಶ್ರೇಷ್ಠ ನ್ಯಾಯಾಲಯ

01:19 AM Oct 03, 2024 | Team Udayavani |

ಬೆಂಗಳೂರು: ಮುಡಾ ಹಗರಣದ ಉರುಳು ಬಿಗಿಯಾಗುತ್ತಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ “ಆತ್ಮಸಾಕ್ಷಿ’ಯ ಮಂತ್ರ ಜಪಿಸಿದ್ದಾರೆ.

Advertisement

ಜತೆಗೆ ಗಾಂಧೀಜಿಯವರ ಮಾತನ್ನು ಉದ್ಧರಿಸುತ್ತ, “ಇಂದಿನ ನ್ಯಾಯಾಲಯ ಗಳಲ್ಲಿ ನ್ಯಾಯ ಸಿಗದೆ ಹೋಗ ಬಹುದು. ಆದರೆ ನಾವು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳ ಬೇಕು. ಏಕೆಂದರೆ ಎಲ್ಲ ನ್ಯಾಯಾಲಯ ಗಳಿಗಿಂತ ಮೇಲೆ ಅತ್ಯುನ್ನತವಾದ ಆತ್ಮ ಸಾಕ್ಷಿಯ ನ್ಯಾಯಾಲಯವಿದೆ’ ಎಂದು ಮಾರ್ಮಿಕ ವಾಗಿ ನುಡಿದಿದ್ದಾರೆ.

ಅತ್ತ ಪತ್ನಿ ಪಾರ್ವತಿ 14 ನಿವೇಶನ ಹಿಂದಿರುಗಿಸುವ ವೇಳೆ ಬರೆದ ಪತ್ರದಲ್ಲಿ ಭಾವನಾತ್ಮಕ ಅಂಶಗಳನ್ನು ಉಲ್ಲೇಖೀಸಿದ್ದು, ಇತ್ತ ಸಿಎಂ ಕೂಡ “ಆತ್ಮ ಸಾಕ್ಷಿ’ಯ ಮಾತನಾಡಿ ಮತ್ತೂಂದು ರೀತಿಯ ದಾಳ ಉರುಳಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಗಾಂಧಿ ಜಯಂತಿಯ ಅಂಗವಾಗಿ ಗಾಂಧಿ ಭವನ ಹಾಗೂ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 2 ಕಾರ್ಯಕ್ರಮಗಳಲ್ಲಿ ತಮ್ಮ ಭಾಷಣದುದ್ದಕ್ಕೂ ಗಾಂಧೀಜಿಯ ಮಾತನ್ನು ಉಲ್ಲೇಖಿಸಿದ ಸಿಎಂ “ಆತ್ಮಸಾಕ್ಷಿ’ಯ ಬಗ್ಗೆ ಮಾತನಾಡಿದ್ದಾರೆ.

ವಿಪಕ್ಷ ಟೀಕೆ: ಸಿಎಂ ಅವರ “ಆತ್ಮಸಾಕ್ಷಿ’ಯ ಮಾತಿಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ, ಆರಂಭದಲ್ಲೇ ನಿವೇಶನ ವಾಪಸ್‌ ಕೊಟ್ಟಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈಗ ಆತ್ಮಸಾಕ್ಷಿ ಇತ್ಯಾದಿ ಮಾತುಗಳನ್ನು ಆಡುವುದು ಎಷ್ಟು ಸರಿ ಅನ್ನುವುದನ್ನು ಸಿಎಂ ಸಿದ್ದರಾಮಯ್ಯ ಅವರೇ ಹೇಳಬೇಕು ಎಂದಿದೆ.

Advertisement

ಕಾನೂನು ಬಿಟ್ಟು ತಮ್ಮದೇ ನಡೆ ಸಲ್ಲದು
ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಬಿಬಿಎಂಪಿ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜನ್ಮ ದಿನಾಚರಣೆ ಮತ್ತು ಸ್ವತ್ಛತಾ ಆಂದೋಲನ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಗಾಂಧೀಜಿಯವರು ನಮ್ಮೆಲ್ಲ ನ್ಯಾಯಾಲಯಗಳ ಮೇಲೆ ಒಂದು ಅತ್ಯುನ್ನತವಾದ ನ್ಯಾಯಾಲಯವಿದೆ; ಅದೇ ಆತ್ಮಸಾಕ್ಷಿಯ ನ್ಯಾಯಾಲಯ ಎಂದಿದ್ದರು. ಆದ್ದರಿಂದ ನಾವು ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವ ಪ್ರಯತ್ನ ನಡೆಸಬೇಕು’ ಎಂದರಲ್ಲದೆ, “ಇವತ್ತು ಅನೇಕ ಜನರು ನ್ಯಾಯಾಲಯದ ಕಾನೂನುಗಳನ್ನು ಬಿಟ್ಟು ತಮ್ಮದೇ ಆದ ರೀತಿಯಲ್ಲಿ ನಡೆಯುತ್ತಿದ್ದಾರೆ. ಹೀಗಾಗಿ ನಾವು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವ ಪ್ರಯತ್ನ ಮಾಡಬೇಕಾಗುತ್ತದೆ. ಇದು ನಾವು ಮಹಾತ್ಮಾ ಗಾಂಧಿ ಅವರಿಗೆ ಸಲ್ಲಿಸಬಹುದಾದ ಗೌರವ’ ಎಂದರು.

ಹೊಗಳಲಿ, ತೆಗಳಲಿ…
ಇತ್ತ ಗಾಂಧಿಭವನದ ಕಾರ್ಯ ಕ್ರಮದಲ್ಲಿ ಮಾತನಾಡುವಾಗಲೂ ಇವೇ ಮಾತುಗಳನ್ನು ಪುನರುಚ್ಚರಿಸಿದ ಸಿಎಂ, “ಯಾರಾದರೂ ಹೊಗಳಲಿ, ತೆಗಳಲಿ; ಟೀಕೆ ಮಾಡಲಿ, ಬಿಡಲಿ. ಉಳಿದವರು ಗುರುತಿಸಲಿ ಬಿಡಲಿ, ಪ್ರತಿಯೊಬ್ಬರೂ ಆತ್ಮಸಾಕ್ಷಿಯ ನ್ಯಾಯಾಲಯದಲ್ಲಿ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು. ಆತ್ಮಸಾಕ್ಷಿಯ ನ್ಯಾಯಾಲಯ ಎಲ್ಲ ನ್ಯಾಯಾಲಯಗಳಿಗಿಂತ ಮಿಗಿಲು. ಆಅದೇ ಗಾಂಧಿಯವರಿಗೆ ನಾವು ಸಲ್ಲಿಸುವ ದೊಡ್ಡ ಗೌರವ’ ಎಂದಿದ್ದಾರೆ.

ಎಲ್ಲ ನ್ಯಾಯಾಲಯಗಳ ಮೇಲೊಂದು ಅತ್ಯುನ್ನತ ನ್ಯಾಯಾಲಯ ಇದೆ. ಅದು ಆತ್ಮಸಾಕ್ಷಿಯ ನ್ಯಾಯಾಲಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗಾಂಧೀಜಿ ಅವರ ಈ ಅರ್ಥಪೂರ್ಣ ಮಾತುಗಳನ್ನೇ ಸಿಎಂ ಕೂಡ
ಪುನರುಚ್ಚರಿಸಿದ್ದಾರೆ.
– ಎಚ್‌.ಕೆ. ಪಾಟೀಲ್‌, ಕಾನೂನು ಸಚಿವ

Advertisement

Udayavani is now on Telegram. Click here to join our channel and stay updated with the latest news.

Next