Advertisement

ಜೆಸಿಬಿಯಿಂದ ಸಂಪರ್ಕ ರಸ್ತೆ ಅಗೆದ ಕಿಡಿಗೇಡಿಗಳು

09:20 PM Jun 08, 2019 | Team Udayavani |

ದೇವನಹಳ್ಳಿ: ತಾಲೂಕಿನ ಕಸಬ ಹೋಬಳಿ ಅಣ್ಣೇಶ್ವರ ಗ್ರಾಮದಿಂದ ಯರಪ್ಪನ ಹಳ್ಳಿ ಮತ್ತು ದೊಡ್ಡ ಸಣ್ಣೆ ಗ್ರಾಮಗಳನ್ನು ಸಂಪರ್ಕಿಸುವ ಭುವನಹಳ್ಳಿ ರಸ್ತೆಯನ್ನು ಶುಕ್ರವಾರ ರಾತ್ರಿ ಕಿಡಿಗೇಡಿಗಳು ಜೆಸಿಬಿಯಿಂದ ಅಗೆದಿದ್ದಾರೆ. ಇದರಿಂದ ವಾಹನ ಸವಾರರು ಸುತ್ತಿ ಬಳಸಿ ಹೋಗುವಂತಾಯಿತು.

Advertisement

ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ಅಡಿ ಕಳೆದ ಒಂದು ವರ್ಷದ ಡಾಂಬರೀಕರಣ ಮಾಡಲಾಗಿತ್ತು. ಕಿಡಿಗೇಡಿಗಳ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಣ್ಣೇಶ್ವರ ಗ್ರಾಮದಿಂದ ಯರಪ್ಪನ ಹಳ್ಳಿ ಮತ್ತು ದೊಡ್ಡಸಣ್ಣೆ ಗ್ರಾಮಗಳಿಗೆ ಹೋಗುವ ಭುವನಹಳ್ಳಿ ಸಂಪರ್ಕ ರಸ್ತೆ ಮಧ್ಯದಲ್ಲಿ ಗುಂಡಿ ತೋಡಿರುವುದು ಖಂಡನೀಯ. ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸಿ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಕಾಮಗಾರಿ ವೆಚ್ಚ ವಸೂಲಿ ಮಾಡಿ: ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಗುಂಡಿ ತೋಡಿರುವುದರಿಂದ ಜನರು ಓಡಾಡಲು ಕಷ್ಟಪಡಬೇಕು. ವಾಹನ ಚಲಾಯಿಸಲು ಒದ್ದಾಡಬೇಕಿದೆ. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಾಮಗಾರಿ ವೆಚ್ಚವನ್ನು ಆರೋಪಿಗಳಿಂದ ವಸೂಲಿ ಮಾಡಿ ಕಾನೂನು ಶಿಕ್ಷೆಗೆ ಒಳಪಡಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಗ್ರಾಮಸ್ಥ ಮುನಿಯಪ್ಪ ಆಗ್ರಹಿಸಿದರು.

ಜಿಪಂ ಸದಸ್ಯ ಹೇಳಿಕೆ: ಸರ್ಕಾರ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಹಲವಾರು ಬಾರಿ ಒತ್ತಡ ತಂದು ಲಕ್ಷಾಂತರ ರೂ. ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಮಾಡಿಸುತ್ತೇವೆ. ಮೂಲಸೌಲಭ್ಯ ವಿನಾಕಾರಣ ನಾಶ ಮಾಡಿದರೆ ಸ್ಥಳೀಯರು ಜವಾಬ್ದಾರರು. ವೈಯಕ್ತಿಕ ದ್ವೇಷಕ್ಕೆ ಸಾರ್ವಜನಿಕ ರಸ್ತೆ ಹಾಳು ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಜಿಪಂ ಸದಸ್ಯ ಕೆಸಿ ಮಂಜುನಾಥ್‌ ತಿಳಿಸಿದರು.

ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ರಾತ್ರಿ ವೇಳೆ ಗುಂಡಿ ತೋಡಿರುವವರ ವಿರುದ್ಧ ಇಲಾಖೆಯ ವತಿಯಿಂದ ಪೊಲೀಸ್‌ ಠಾಣೆಗೆ ದೂರು ನೀಡಲಾಗುವುದು.
-ಮುರುಡಯ್ಯ ತಾಪಂ ನಿರ್ವಹಣಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next