ತಿಪಟೂರು: ನಗರದ ಐಬಿ ಸರ್ಕಲ್‌ನಿಂದ ಗೋವಿನಪುರ ಬಡಾವಣೆ ಮಾರ್ಗವಾಗಿ ಹಾಲ್ಕುರಿಕೆ-ಹುಳಿಯಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ತೀರಾ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರ ಓಡಾಟ ನರಕಯಾತನೆ ಯಾಗಿದೆ.
ಆದರೂ ತಾಲೂಕು ಆಡಳಿತ, ನಗರಸಭೆ ಹಾಗೂ ಲೋಕಪಯೋಗಿ ಇಲಾಖೆ ತಲೆಕೆಡಿಸಿಕೊಂಡಿಲ್ಲ. ನಗರದ ಎನ್.ಎಚ್. 206ರಲ್ಲಿ ಐ.ಬಿ. ಸರ್ಕಲ್‌ನಿಂದ ಪ್ರಾರಂಭವಾಗುವ ರಸ್ತೆಯು ನಗರದ ಗೋವಿನಪುರ ಸೇರಿ ಆರೇಳು ಬಡಾವಣೆ ಹಾಗೂ ತಾಲೂಕಿನ ನೂರಾರು ಗ್ರಾಮಗಳು ಸೇರಿ ಹುಳಿಯಾರು ಸಂಪರ್ಕಿಸತ್ತದೆ. ದಿನನಿತ್ಯ ನೂರಾರು ಬಸ್, ಲಾರಿ, ಸಾವಿರಾರು ದ್ವಿಚಕ್ರ ವಾಹನಗಳು ಸಂಚರಿ ಸುವುದರಿಂದ ಯಾವಾಗಲೂ ವಾಹನ ಸಂಚಾರ ದಟ್ಟವಾಗಿರುತ್ತದೆ. ರಸ್ತೆ ಡಾಂಬರ್ ಸಂಪೂರ್ಣ ಹಾಳಾಗಿ ದೊಡ್ಡ ಗುಂಡಿಗಳು ಬಿದ್ದಿವೆ. ಅಲ್ಲದೇ ಮಣ್ಣಿನ ರಸ್ತೆಯಂತಾಗಿ ಬದಲಾಗಿದೆ.
ನಗರದ ಒಳಗಡೆ ಅನೇಕ ಕಡೆ ಆಳ ಕಂದಕಗಳು ಉಂಟಾಗಿ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂಅಪಘಾತವಾಗಿ ಕೈಕಾಲು, ಪ್ರಾಣ ಕಳೆದು ಕೊಳ್ಳುವ ಅಪಾಯ ಇದೆ. ಮಳೆ ಬಂದರೆ ಕೆಸರು ಗದ್ದೆಯಾದರೆ, ಬಿಸಿಲು ಕಾದರೆ ಧೂಳು ಮಯವಾಗುವ ನಿತ್ಯ ರಸ್ತೆಯಲ್ಲಿ ಸಂಚಾರ ವಾಹನ ಸವಾರರು, ಸಾರ್ವಜನಿಕರು, ರಸ್ತೆ ಅಕ್ಕಪಕ್ಕದ ಮನೆಯವರು ಯಮ ಯಾತನೆ ಎಂಬಂತಾಗಿದೆ. ಇನ್ನಿಲ್ಲದ ಸರ್ಕಸ್ ಮಾಡಿಕೊಂಡೆ ವಾಹನ ಚಲಾಯಿಸುವ ಪರಿಸ್ಥಿತಿ ತಲೆ ದೋರಿದೆ. ಇದೇ ರಸ್ತೆಯಲ್ಲಿ ಮೂರ್‍ನಾಲ್ಕು ಶಾಲೆಗಳಿದ್ದು, ಮಕ್ಕಳಿಗೂ ತೊಂದರೆ ಯಾಗಿದೆ. ಮಳೆ ಬಂದರಂತೂ ಗುಂಡಿ ಗಳು ಕಾಣಿಸ ದಂತಾಗಿ ಒಂದಲ್ಲೊಂದು ಅವಘಡಗಳು ಸಂಭವಿಸುತ್ತಿವೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತಾಲೂಕು ಆಡಳಿತ, ನಗರಸಭೆ ಮತ್ತು ಪ್ರಮುಖವಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರಹಿಡಿಶಾಪ ತಪ್ಪಿಲ್ಲ.
ಫುಟ್‌ಪಾತ್ ಒತ್ತುವರಿ: ಐ.ಬಿ. ಸರ್ಕಲ್, ಗೋವಿನಪುರ ಸರ್ಕಲ್‌ನಿಂದ ಈ ರಸ್ತೆಯ ಎರಡೂ ಬದಿಗಳಲ್ಲಿ 2 ಕಿ.ಮೀ.ನಷ್ಟು ಉದ್ದಕ್ಕೂ ಸಾಕಷ್ಟು ಪೆಟ್ಟಿಗೆ ಅಂಗಡಿಗಳು, ಗುಜರಿ ಅಂಗಡಿ ವ್ಯಾಪಾರಿಗಳು ರಸ್ತೆಯನ್ನೇ ಆಕ್ರಮಿಸಿ ಕೊಂಡು ಪಾದಾಚಾರಿಗಳಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದ್ದಾರೆ. ನಗರಸಭೆ ಹಾಗೂ ಲೋಕೋಪಯೋಗಿ ಅಧಿಕಾರಿಗಳು ವ್ಯಾಪಾರಿಗಳು ನೀಡುವ ಮಾಮೂಲಿ ಕಾಸಿಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರ, ವಾಹನ ಸವಾರರ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ರಸ್ತೆಯಲ್ಲಿ ನಿತ್ಯ ಒಂದಲ್ಲೊಂದು ಅಪಘಾತ, ಅವಘಡಗಳು ಸಂಭವಿಸುತ್ತಿದ್ದರೂ, ನಗರಸಭೆ, ಪೊಲೀಸ್ ಇಲಾಖೆ ನಮಗೂ, ಇದಕ್ಕೂ ಸಂಬಂಧವಿಲ್ಲವೆಂಬಂತೆ ಜಾಣ ಕುರುಡು ತೋರಿಸುತ್ತಿರುವುದು ಪ್ರಯಾಣಿಕರ, ಪಾದಚಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ನಗರಸಭೆ ಗಮನಹರಿಸಿ ರಸ್ತೆ ದುರಸ್ತಿ ಹಾಗೂ ಫುಟ್ ಪಾತ್ ತೆರವು ಕಾರ್ಯ ಮಾಡಬೇಕಿದೆ.
-ಬಿ. ರಂಗಸ್ವಾಮಿ