Advertisement

ಸಂವಿಧಾನ ರಕ್ಷಣೆಗೆ ಕಟಿಬದ್ಧರಾಗಬೇಕು-

10:01 AM Dec 04, 2018 | |

ಮಂಗಳೂರು: ದೇಶದ ಸಂವಿಧಾನವು ಎಲ್ಲ ಧರ್ಮಗಳ ಸಾರ. ಅದನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿದ್ದು, ಅದಕ್ಕೆ ಅವಕಾಶ ನೀಡಬಾರದು. ಸಂವಿಧಾನದ ರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

Advertisement

ಕರ್ನಾಟಕ ಕಲ್ಚರಲ್‌ ಫೌಂಡೇಶನ್‌ (ಕೆಸಿಎಫ್‌), ಸುನ್ನಿ ಸ್ಟೂಡೆಂಟ್ಸ್‌ ಫೆಡರೇಶನ್‌ (ಎಸ್‌ಎಸ್‌ಎಫ್‌) ಮತ್ತು ಸುನ್ನಿ ಯುವಜನ ಸಂಘ (ಎಸ್‌ವೈಎಸ್‌)ದ ಸಹಭಾಗಿತ್ವದಲ್ಲಿ ನಗರದ ನೆಹರೂ ಮೈದಾನದಲ್ಲಿ ಸೋಮವಾರ ನಡೆದ “ಕನೆಕ್ಟ್- 2018 ಸಾಮುದಾಯಿಕ ಸಮ್ಮಿಲನ’ದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ದಯೆ ಮತ್ತು ಮಾನವೀಯತೆ ಎಲ್ಲ ಧರ್ಮಗಳ ಸಾರ. ಅವಿಲ್ಲದ ಧರ್ಮವು ಧರ್ಮವೇ ಅಲ್ಲ ಎಂದ ಅವರು, ಮುಖ್ಯಮಂತ್ರಿ ಸಂವಿಧಾನಕ್ಕೆ ಅನುಗುಣವಾಗಿ ಸರಕಾರ ನಡೆಸಬೇಕು. ಈ ಸಿದ್ಧಾಂತದಡಿಯಲ್ಲಿ ಆಡಳಿತ ಮಾಡಿದ್ದೇನೆ. ನಾನು ಜಾರಿಗೆ ತಂದಿದ್ದ ಯೋಜನೆಗಳು ಎಲ್ಲರ ಹಿತ ಗುರಿಯಾಗಿಟ್ಟುಕೊಂಡು ರೂಪಿಸಿರುವಂಥವು.ಆದರೆ ಧರ್ಮ, ದೇವರ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಒಂದು ವರ್ಗ ಮಾಡುತ್ತಿದೆ ಎಂದು ಟೀಕಿಸಿದರು. 

ಅಖೀಲ ಭಾರತ ಸುನ್ನೀ ಜಂಇಯ್ಯತ್ತುಲ್‌ ಉಲಮಾದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್‌ ಉಲಮಾ ಎ.ಪಿ. ಅಬೂಬಕರ್‌ ಮುಸ್ಲಿಯಾರ್‌ ಕಾಂತಪುರಂ ಮಾತನಾಡಿ, ದಯೆ, ಮಾನವೀಯತೆ, ಪ್ರೀತಿ ಇಸ್ಲಾಂನ ಮೂಲ ಸಂದೇಶ ಎಂದರು.

ಸಚಿವ ಯು.ಟಿ. ಖಾದರ್‌ ಅವರು ಮಾತನಾಡಿ, ಶಾಂತಿ, ಸಾಮರಸ್ಯದಿಂದ ಕೂಡಿದ ಸಮೃದ್ಧ ಭಾರತ ನಿರ್ಮಾಣದಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದರು.ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಪ್ರೀತಿ, ವಿಶ್ವಾಸ, ಸಾಮರಸ್ಯಭರಿತ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಬೇಕು ಎಂದರು. ಯೇನಪೊಯ ವಿವಿ ಕುಲಾಧಿಪತಿ ವೈ. ಅಬ್ದುಲ್ಲ ಕುಂಞಿ ಅವರು ಕೆಸಿಎಫ್‌, ಎಸ್‌ಎಸ್‌ಎಫ್‌ ಹಾಗೂ ಎಸ್‌ವೈಎಸ್‌ನ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲಾ ಸಂಯುಕ್ತ ಜಮಾಅತ್‌ ಖಾಝಿ, ಶೈಖುನಾ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್‌ ಬೇಕಲ್‌ ಅವರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು. ಮೇಯರ್‌ ಭಾಸ್ಕರ್‌ ಕೆ., ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಮುಖಂಡರಾದ ಕಣಚೂರು ಮೋನು, ಎಸ್‌.ಎಂ. ರಶೀದ್‌, ಮಹಮ್ಮದ್‌ ಮಸೂದ್‌, ಹಾಜಿ ಮುಮ್ತಾಜ್‌ ಆಲಿ, ಮಾಜಿ ಶಾಸಕ ಮೊದಿನ್‌ ಬಾವಾ, ಹೈದರ್‌ ಪರ್ತಿಪ್ಪಾಡಿ ಎಂ.ಎಸ್‌. ಮಹಮ್ಮದ್‌, ಎನ್‌.ಎಸ್‌. ಕರೀಂ, ಬಿ.ಎಚ್‌. ಖಾದರ್‌ ಉಪಸ್ಥಿತರಿದ್ದರು. ಡಾ| ಅಬ್ದುಲ್‌ ರಶೀದ್‌ ಸಖಾಫಿ ಝೈನಿ ಕಾಮಿಲ್‌ ಸ್ವಾಗತಿಸಿದರು. ಶಾಫಿ ಸಅದಿ ನಿರೂಪಿಸಿದರು. 

Advertisement

ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಇದ್ದ 4 ಕೋ.ರೂ. ಅನುದಾನವನ್ನು ನಾನು ಮುಖ್ಯಮಂತ್ರಿಯಾದ ಬಳಿಕ 3,000 ಕೋ.ರೂ.ಗೆ ಏರಿಸಿದ್ದೆ. ಮರಳಿ ಅಧಿಕಾರಕ್ಕೆ ಬಂದರೆ ಆ ಅನುದಾನವನ್ನು 10,000 ಕೋ.ರೂ.ಗೇರಿಸುವ ಚಿಂತನೆ ಇರಿಸಿಕೊಂಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next