Advertisement
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಎರಡೂವರೆ ವರ್ಷ ಅಧಿಕಾರ ಹಂಚಿಕೆಯ “ಸೂತ್ರ’ ರೂಪಿಸಿದ್ದು, ಅದಕ್ಕೆ ಇಬ್ಬರೂ ಸಹಮತ ವ್ಯಕ್ತಪಡಿಸಿದ ಅನಂತರವಷ್ಟೇ ಕಗ್ಗಂಟು ಬಗೆಹರಿದಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ 12.30ಕ್ಕೆ ಸಿದ್ದರಾಮಯ್ಯ -ಡಿ.ಕೆ. ಶಿವಕುಮಾರ್ ಜತೆ ಹಲವು ಸಚಿವರ ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ನಿಗದಿಯಾಗಿದೆ.
Related Articles
Advertisement
ಸೋನಿಯಾ ಮಧ್ಯಪ್ರವೇಶ
ಸಿದ್ದರಾಮಯ್ಯ-ಡಿಕೆಶಿ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಬುಧವಾರ ಮಧ್ಯರಾತ್ರಿ ವೇಳೆಗೆ ಸ್ವತಃ ಸೋನಿಯಾ ಗಾಂಧಿ ಅವರೇ ಮಧ್ಯಪ್ರವೇಶ ಮಾಡಿದರು. “ಪಕ್ಷದ ಬೆಳವಣಿಗೆಯಲ್ಲಿ ನಿಮ್ಮ ಶ್ರಮ ಹೆಚ್ಚಿದೆ. ಆದರೆ ದೇಶದ ರಾಜಕಾರಣ ಹಾಗೂ ಪಕ್ಷದ ಭವಿಷ್ಯದಿಂದ ಸಹಕರಿಸಿ’ ಎಂದು ಡಿಕೆಶಿಯವರಿಗೆ ಸೂಚಿಸಿದರು. ಎರಡೂವರೆ ವರ್ಷದ ಅಧಿಕಾರ ಹಂಚಿಕೆಯ ಒಳ ಒಪ್ಪಂದ ಮತ್ತು “2ನೇ ಅವಧಿಗೆ ಮುಖ್ಯಮಂತ್ರಿ ಸ್ಥಾನ ಕೊಡಿಸುವುದು ನನ್ನ ಜವಾಬ್ದಾರಿ’ ಎಂದು ಖುದ್ದು ಸೋನಿಯಾ ಗಾಂಧಿ ಭರವಸೆ ಕೊಟ್ಟ ಬಳಿಕ ಡಿಕೆಶಿ ತಣ್ಣಗಾದರು ಎನ್ನಲಾಗಿದೆ. ಜತೆಗೆ ಹೈಕಮಾಂಡ್‌ನ ಸಂಧಾನ ಸೂತ್ರಕ್ಕೆ ಒಪ್ಪಿದರು. ಅದೇ ರೀತಿ ಸಿದ್ದರಾಮಯ್ಯ ಜತೆಗೂ ಮಾತನಾಡಿರುವ ಸೋನಿಯಾ ಗಾಂಧಿ, ಅಧಿಕಾರ ಹಂಚಿಕೆ ಸೂತ್ರಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕೆಂದು ಸೂಚಿಸಿದ್ದು, ಸಿದ್ದರಾಮಯ್ಯ ಸಮ್ಮತಿಸಿದರು ಎನ್ನಲಾಗಿದೆ.
ಇದಾದ ತತ್‌ಕ್ಷಣವೇ ದಿಲ್ಲಿಯಿಂದಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜಭವನಕ್ಕೆ ಕಾಂಗ್ರೆಸ್ ಸರಕಾರ ರಚನೆ ಬಗ್ಗೆ ಪತ್ರ ರವಾನಿಸಿದರು. ಜತೆಗೆ ಗುರುವಾರ ಬೆಳಗ್ಗೆ ಮಾಜಿ ಉಪ ಮುಖ್ಯಮಂತ್ರಿ ಡಾ| ಪರಮೇಶ್ವರ್ ಅವರು ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹೊÉàಟ್ ಅವರನ್ನು ಭೇಟಿ ಮಾಡಿ ಅಧಿಕೃತ ಮಾಹಿತಿ ತಲುಪಿಸಿದರು.
ನಾಲ್ಕು ದಿನಗಳ ಬಳಿಕ ಮುಖಾಮುಖೀ
ನಾಲ್ಕು ದಿನಗಳಿಂದ ನಿರಂತರವಾಗಿ ನಡೆದ ಸಭೆ, ಸಂಧಾನ, ಚರ್ಚೆಯ ಪ್ರತಿಫಲ ಎಂಬಂತೆ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ರೂಪಿಸಿದ ಸಂಧಾನ ಸೂತ್ರಕ್ಕೆ ಡಿ.ಕೆ. ಶಿವಕುಮಾರ್ ಒಪ್ಪಿಗೆ ನೀಡಿದರು. ಬುಧವಾರ ಮಧ್ಯರಾತ್ರಿ 1.30ಕ್ಕೆ ಸಂಧಾನ ಯಶಸ್ವಿಯಾದ ಅನಂತರ ಗುರುವಾರ ಬೆಳಗ್ಗೆ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ನಡೆದ ಉಪಾಹಾರ ಕೂಟದಲ್ಲಿ ಈ ನಾಲ್ಕು ದಿನಗಳಲ್ಲಿಯೇ ಮೊದಲ ಬಾರಿಗೆ ಸಿದ್ದರಾಮಯ್ಯ-ಡಿಕೆಶಿ ಮುಖಾಮುಖೀಯಾದರು. ಅಲ್ಲಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ನಿವಾಸಕ್ಕೆ ಒಂದೇ ಕಾರಿನಲ್ಲಿ ಪ್ರಯಾಣ ಮಾಡಿದರು. ಅಲ್ಲಿ ಖರ್ಗೆ ಅವರು ಸಿದ್ದರಾಮಯ್ಯ-ಶಿವಕುಮಾರ್ ಅವರ ಕೈ ಹಿಡಿದೆತ್ತಿ ಒಗ್ಗಟ್ಟು ಪ್ರದರ್ಶನ ಮಾಡಿದರು.
ಅನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುಜೇìವಾಲಾ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿಕೆಶಿ ಉಪಮುಖ್ಯಮಂತ್ರಿ ಎಂದು ಘೋಷಿಸಿದರು. ಈ ಮಧ್ಯೆ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಬಲ ಖಾತೆಗಳಾದ ಜಲಸಂಪನ್ಮೂಲ ಮತ್ತು ಇಂಧನ ಅಥವಾ ಬೆಂಗಳೂರು ನಗರಾಭಿವೃದ್ಧಿ ಖಾತೆ ಖಾತರಿ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪಕ್ಷ ಕೈಗೊಂಡ ತೀರ್ಮಾನಕ್ಕೆ ನಾವೆಲ್ಲ ಬದ್ಧ. ಕನ್ನಡಿಗರ ಹಿತಾಸಕ್ತಿಯ ರಕ್ಷಣೆಗಾಗಿ ನಾವು ಕೈಜೋಡಿಸುತ್ತೇವೆ. ಪಾರದರ್ಶಕ, ಭ್ರಷ್ಟಾಚಾರರಹಿತ ಆಡಳಿತ ನೀಡಲು, ಗ್ಯಾರಂಟಿಗಳನ್ನು ಜಾರಿ ಮಾಡಲು ನಾವು ಒಂದು ಕುಟುಂಬದಂತೆ ಕಾರ್ಯನಿರ್ವಹಿಸುತ್ತೇವೆ.
– ಸಿದ್ದರಾಮಯ್ಯ, ನಿಯೋಜಿತ ಮುಖ್ಯಮಂತ್ರಿ
ಗಾಂಧಿ ಕುಟುಂಬದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಹೈಕಮಾಂಡ್ ರೂಪಿಸಿದ ಸೂತ್ರಕ್ಕೆ ಒಪ್ಪಿದ್ದೇನೆ. ನನಗೆ ಪಕ್ಷ ಮುಖ್ಯ, ನಾವು ರಾಜ್ಯದ ಜನತೆಗೆ ಕೊಟ್ಟಿರುವ ಭರವಸೆ ಈಡೇರಿಕೆ ಮುಖ್ಯ.
– ಡಿ.ಕೆ. ಶಿವಕುಮಾರ್, ನಿಯೋಜಿತ ಉಪಮುಖ್ಯಮಂತ್ರಿ