ನವದೆಹಲಿ: ಉತ್ತರಾಖಂಡದ ನೈನಿತಾಲ್‌ನಲ್ಲಿರುವ ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅವರ ಮನೆ ಮೇಲೆ ಸೋಮವಾರ ಗುಂಪೊಂದು ದಾಳಿ ನಡೆಸಿ, ಮನೆಗೆ ಬೆಂಕಿ ಹಚ್ಚಿದೆ.
ಅಯೋಧ್ಯೆಗೆ ಸಂಬಂಧಿಸಿ ಖುರ್ಷಿದ್ ಅವರು ಬರೆದಿರುವ ಹೊಸ ಪುಸ್ತಕವು ವಿವಾದ ಸೃಷ್ಟಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಹಿಂದುತ್ವ ಮತ್ತು ಇಸ್ಲಾಮಿಕ್ ತೀವ್ರಗಾಮಿಗಳ ನಡುವೆ ಸಾಮ್ಯತೆ ಇದೆ ಎಂದು ಅವರು ಕೃತಿಯಲ್ಲಿ ಉಲ್ಲೇಖೀಸಿರುವ ಅಂಶ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ತಮ್ಮ ಮನೆಯಲ್ಲಿ ದಾಂದಲೆ ನಡೆಸಿ, ಬೆಂಕಿ ಹಚ್ಚಿರುವ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಖುರ್ಷಿದ್ ಅವರೇ ಅಪ್‌ಲೋಡ್ ಮಾಡಿದ್ದು, ಅದರಲ್ಲಿ ಮನೆಯ ಬಾಗಿಲು, ಕಿಟಕಿಯಲ್ಲಿ ಬೆಂಕಿ ಹೊತ್ತಿಕೊಂಡಿರುವುದು, ಕಿಟಕಿ ಗಾಜುಗಳು ಒಡೆದಿರುವುದು ಮತ್ತು ಬೆಂಕಿ ನಂದಿಸಲು ಇಬ್ಬರು ಯತ್ನಿಸುತ್ತಿರುವ ದೃಶ್ಯಾವಳಿ ಇದೆ.
ಇದನ್ನೂ ಓದಿ:ಅಂತೂ ಚಾಮರಾಜನಗರ ಜಿಲ್ಲಾಧಿಕಾರಿ ಡಾ. ರವಿ ವರ್ಗಾವಣೆ
ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸಲ್ಮಾನ್ ಖುರ್ಷಿದ್, “ಇದು ಹಿಂದುತ್ವವಾಗಿರಲು ಸಾಧ್ಯವಿಲ್ಲ ಎಂದು ನಾನು ಹೇಳುವುದು ಈಗಲೂ ತಪ್ಪಾಗುತ್ತದೆಯೇ? ಇಲ್ಲಿ ನಾಚಿಕೆ (ಶೇಮ್) ಎನ್ನುವುದು ಪರಿಣಾಮಕಾರಿಯಲ್ಲದ ಪದ. ಮುಂದೊಂದು ದಿನವಾದರೂ ನಾವು ಒಟ್ಟಿಗೇ ಕುಳಿತು ಒಂದು ವಿಚಾರವನ್ನು ಒಪ್ಪುವ ಅಥವಾ ಒಪ್ಪದೇ ಇರುವ ಬಗ್ಗೆ ಚರ್ಚಿಸಬಹುದು ಎಂದು ಆಶಿಸುತ್ತೇನೆ’ ಎಂದು ಹೇಳಿದ್ದಾರೆ.
ಇದೇ ವೇಳೆ, ಮನೆಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಶಶಿ ತರೂರ್, ದಿಗ್ವಿಜಯ್ ಸಿಂಗ್ ಸೇರಿದಂತೆ ಅನೇಕ ನಾಯಕರು ಖಂಡಿಸಿದ್ದಾರೆ.