ನವದೆಹಲಿ: ಕಾಂಗ್ರೆಸ್ ಮುಖಂಡ ಕೀರ್ತಿ ಆಜಾದ್ ಮಂಗಳವಾರ(ನವೆಂಬರ್ 23) ರಾಜಧಾನಿ ದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ದೆಹಲಿ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ಆರೋಪಿಸಿ ಕೇಂದ್ರ ವಿತ್ತ ಖಾತೆ ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧ ಆಜಾದ್ ಬಹಿರಂಗವಾಗಿ ಆರೋಪಿಸಿದ್ದರು. ನಂತರ 2015ರ ಡಿಸೆಂಬರ್ 23ರಂದು ಆಜಾದ್ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. 2018ರಲ್ಲಿ ಕೀರ್ತಿ ಆಜಾದ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು ಎಂದು ವರದಿ ತಿಳಿಸಿದೆ.
ಮಾಜಿ ಕ್ರಿಕೆಟಿಗ, ರಾಜಕಾರಣಿ ಕೀರ್ತಿ ಆಜಾದ್ ಬಿಹಾರದ ದರ್ಭಾಂಗ್ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಬಿಜೆಪಿ ಟಿಕೆಟ್ ನಿಂದ ಆಜಾದ್ ಸ್ಪರ್ಧಿಸಿದ್ದರು. 1983ರಲ್ಲಿ ವಿಶ್ವಕಪ್ ಗೆದ್ದಿದ್ದ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಜಾದ್ ಕೂಡಾ ಇದ್ದಿದ್ದರು.
ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜಧಾನಿ ದೆಹಲಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಬ್ಯಾನರ್ಜಿ ನವೆಂಬರ್ 25ರವರೆಗೆ ದೆಹಲಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮಮತಾ ಬ್ಯಾನರ್ಜಿ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ದೆಹಲಿಗೆ ಆಗಮಿಸಿದ್ದ ವೇಳೆ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.