ಮೈಸೂರು: ಕಾಂಗ್ರಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜಾತಿ ಧರ್ಮಗಳ ನಡುವೆ ಎತ್ತಿ ಕಟ್ಟುವುದರಲ್ಲಿ ಕಾಂಗ್ರೆಸ್ ಮೊದಲಿಗರು. ಕಾಂಗ್ರೆಸ್ ನವರು ಕಂಡ ಕಂಡಲ್ಲಿ ಚೀಲ ಹಿಡಿದುಕೊಂಡು ನಿಂತಿದ್ದಾರೆ. ಮನೆಯ ಕುಟುಂಬಸ್ಥರೇ ಏಜೆಂಟ್ – ಬ್ರೋಕರ್ಸ್‌ಗಳಾಗಿದ್ದಾರೆ. ಇದು ಭಂಡಗೆಟ್ಟ ಸರ್ಕಾರ. ಕಾಂಗ್ರೆಸ್ ನಿರ್ನಾಮ ಮಾಡಲು ಬೇರೆ ಯಾರು ಬೇಡ, ಕಾಂಗ್ರೆಸ್‌ನವರೇ ಕಾಂಗ್ರೆಸ್ ನಿರ್ನಾಮ ಮಾಡುತ್ತಾರೆ ಎಂದು ಮಾಜಿ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಯಾವುದೇ ನಿರೀಕ್ಷೆಯಿಲ್ಲ. ಆಡಳಿತ ಪಕ್ಷದ ಶಾಸಕರಿಗೆ ತೃಪ್ತಿ ಇಲ್ಲ. ಒಬ್ಬರ ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬ ರೀತಿಯಾಗಿದೆ. ಇಂಥವರು ಮಂಡಿಸುವ ಬಜೆಟ್ ಮೇಲೆ ಯಾವ ನಿರೀಕ್ಷೆಯೂ ಇಲ್ಲ. ಏನೇ ಘೋಷಣೆ ಆದರೂ ಅದು ಕೇವಲ ಪೇಪರ್ ಮೇಲೆ ಇರುತ್ತದೆ ಎಂದರು.
ನಾಲ್ವಡಿ ಕಾಲದ ರೀತಿ ಅಭಿವೃದ್ದಿ: ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು ಎನ್ನುವುದು ಎಲ್ಲರ ಆಶಯವಾಗಿದೆ. 400ಕ್ಕೂ ಹೆಚ್ಚು ಸೀಟುಗಳನ್ನು ಎನ್ ಡಿಎ ಮೈತ್ರಿ ಗೆಲ್ಲುತ್ತದೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸವಿದೆ. ಮೈಸೂರು ಜಿಲ್ಲೆಯಲ್ಲಿ ಅನುಭವಿಗಳಿದ್ದಾರೆ. ಮೈಸೂರಿನ ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಅಶ್ವಥ್ ನಾರಾಯಣ ಹೇಳಿದರು.
ಸಂಸದ ಪ್ರತಾಪ ಸಿಂಹ ಅದ್ಬುತವಾಗಿ ಕೆಲಸ ಮಾಡಿದ್ದಾರೆ. ರೈಲ್ವೇ, ಆರೋಗ್ಯ, ಶಿಕ್ಷಣ, ಕುಡಿಯವ ನೀರು ಸೇರಿ ಎಲ್ಲಾ ಕಡೆ ನಾಲ್ವಡಿ ಕಾಲದ ರೀತಿಯಲ್ಲಿ ಪ್ರತಾಪ ಸಿಂಹ ಕೆಲಸ ಮಾಡಿದ್ದಾರೆ. ಕೊಡಗು ಮೈಸೂರು ಎಲ್ಲಾ ಕ್ಷೇತ್ರದಲ್ಲೂ ಮತ್ತೊಮ್ಮೆ ನಮ್ಮ ಅಭ್ಯರ್ಥಿ ಆಯ್ಕೆಯಾಗಬೇಕು. ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆಯಬೇಕು ಎಂದರು.
ರಾಮಮಂದಿರದ ಶಿಲ್ಪಿ, ಕಲ್ಲು ಮೈಸೂರಿನದ್ದೇ. ಮೈಸೂರು ಅಂದರೆ ಇಡೀ ವಿಶ್ವದ ಗಮನ ಸೆಳೆಯುತ್ತದೆ. ಸಂಸದ ಪ್ರತಾಪಸಿಂಹ ಹಿಂದಿನ ಅವಧಿಯ ಕೆಲಸದ ದಾಖಲೆ ಇಟ್ಟಿದ್ದಾರೆ. ಅದಕ್ಕಾಗಿ ಬುಕ್‌ಲೆಟ್ ಮಾಡಿಸಿದ್ದಾರೆ ಎಂದರು.
ಮಂಗಳೂರು ಶಾಸಕರ ವಿರುದ್ಧ ಎಫ್ ಐ ಆರ್ ದಾಖಲಾದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಕಾನೂನು ದುರ್ಬಳಕೆ ಮಾಡುತ್ತಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ. ದೇಶ ವಿಭಜನೆ ಹೇಳಿಕೆ ಕೊಟ್ಟ ಡಿ ಕೆ ಸುರೇಶ್ ವಿರುದ್ದ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ನಮ್ಮವರ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ. ನಮ್ಮ ಸಂಸ್ಕೃತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರ ಎಂದರು.