ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಗೊಂದಲ ಬಗೆಹರಿಸಲು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಭಾನುವಾರ ಕರೆದಿದ್ದ ಸಭೆಯಿಂದ ಮಂಡ್ಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳು ದೂರ ಉಳಿದಿದ್ದು, ಮಂಡ್ಯದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿರುವುದಕ್ಕೆ ಅಸಹಕಾರ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಜೆಡಿಎಸ್ ವಿರುದ್ಧದ ತಮ್ಮ ಅಸಮಾಧಾನ ಬಗ್ಗೆ ಪಕ್ಷದ ನಾಯಕರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಮಂಡ್ಯದಲ್ಲಿ ಯಾವುದೇ ಕಾರಣಕ್ಕೂ ಸುಮಲತಾ ಪರವಾಗಿ ನಿಲ್ಲದೆ, ಮೈತ್ರಿ ಪಕ್ಷದ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಪರ ಸಕ್ರಿಯ ರಾಗಿ ತೊಡಗಿಸಿಕೊಳ್ಳುವಂತೆ ಸೂಚಿಸಲು ಸಚಿವ ಡಿಕೆಶಿಯವರು ಭಾನುವಾರ ಸಂಜೆ ತಮ್ಮ ನಿವಾಸದಲ್ಲಿ ಮಂಡ್ಯ ಜಿಲ್ಲಾ ಮುಖಂಡರ ಸಭೆ ಕರೆದಿದ್ದರು. ಆದರೆ, ಮಂಡ್ಯದಲ್ಲಿ ಜೆಡಿಎಸ್ ಎದುರು ಸೋತ ಕಾಂಗ್ರೆಸ್ ಅಭ್ಯರ್ಥಿಗಳಾದ ಎನ್.ಚಲುವರಾಯ ಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಂಡಿ ಸಿದ್ದೇಗೌಡ, ರವಿ ಗಣಿಗ, ಚಂದ್ರಶೇಖರ್ ಸಭೆಯಿಂದ ದೂರ ಉಳಿದಿದ್ದು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ, ಮಲ್ಲಾ ಜಮ್ಮ, ಸಚ್ಚಿದಾನಂದ, ಅಮರಾವತಿ ಚಂದ್ರಶೇಖರ್ ಸೇರಿದಂತೆ ಜಿಲ್ಲೆಯ ಕೆಲವು ಮುಖಂಡರು ಮಾತ್ರ ಸಭೆಗೆ ಹಾಜರಾಗಿದ್ದರು.
ಬೆಂಗಳೂರಿನಲ್ಲಿಯೇ ಇದ್ದರೂ, ಸಭೆಗೆ ಹಾಜರಾಗದೆ, ಸಭೆ ಮುಕ್ತಾಯವಾದ ನಂತರ ಸಚಿವರನ್ನು ಭೇಟಿ ಮಾಡಿರುವ ಮಂಡ್ಯದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಗಳು, ನಾವು ನಿಮ್ಮೊಂದಿಗೆ ಮತ್ತೂಂದು ಬಾರಿ ಸುದೀರ್ಘವಾಗಿ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ, ಪರೋಕ್ಷವಾಗಿ ಸದ್ಯದ ಮಂಡ್ಯ ರಾಜಕೀಯ ವಿಚಾರದಲ್ಲಿ ಡಿ.ಕೆ.ಶಿವಕುಮಾರ್‌ಗೆ ಮಧ್ಯಸ್ಥಿಕೆ ವಹಿಸದೆ ದೂರ ಉಳಿಯುವಂತೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಭೆ ನಂತರ ಮಾತನಾಡಿದ ಡಿಕೆಶಿ, ಬಹಳ ದಿನಗಳಿಂದ ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಮಾತನಾಡಬೇಕಿತ್ತು. ನಾನೇನು ದೊಡ್ಡ ಲೀಡರ್ ಅಲ್ಲ. ನಾನೂ ಕೂಡ ಕಾರ್ಯಕರ್ತ. ಅವರೆಲ್ಲ ನನ್ನ
ಕಷ್ಟ ಕಾಲದಲ್ಲಿ ಜೊತೆಗಿದ್ದವರು. ಹೀಗಾಗಿ, ಅವರ ಜೊತೆ ಮಾತುಕತೆ ನಡೆಸುತ್ತಿದ್ದೇನೆ ಎಂದರು