Advertisement

ಮಾಸ್ಕ್ ವಿತರಿಸಿ ಕಾಂಗ್ರೆಸ್ಸಿಗರ ಪ್ರತಿಭಟನೆ

11:13 AM Nov 08, 2019 | Team Udayavani |

ಹುಬ್ಬಳ್ಳಿ: ಮಹಾನಗರ ಪಾಲಿಕೆ ರಸ್ತೆಗಳು ಧೂಳಿನಿಂದ ತುಂಬಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ರಸ್ತೆ ದುರಸ್ತಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿರುವ ಪಾಲಿಕೆ ಹಾಗೂ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

Advertisement

ಚನ್ನಮ್ಮ ವೃತ್ತ ಸೇರಿದಂತೆ ವಿವಿಧೆಡೆ ಕಾಂಗ್ರೆಸ್‌ ಕಾರ್ಯಕರ್ತರು ಮಾಸ್ಕ್ ವಿತರಿಸಿ ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಡಿಸಿದರು. ಧೂಳುಮಯ ರಸ್ತೆಗಳ ಕುರಿತು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರು ನಿತ್ಯ ನರಕ ಅನುಭವಿಸುತ್ತಿದ್ದು, ಹು-ಧಾ ಮಹಾನಗರವನ್ನು ರಾಜ್ಯ ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಆರೋಪಿಸಿ ದ್ವಿಚಕ್ರ ವಾಹನ ಸವಾರರು, ಬೀದಿ ಬದಿ ವ್ಯಾಪಾರಿಗಳು, ಪಾದಚಾರಿಗಳಿಗೆ ಮಾಸ್ಕ್ ವಿತರಿಸಿದರು.

ಹದಗೆಟ್ಟ ರಸ್ತೆಗಳಿಂದಾಗಿ ಸಂಚಾರ ವ್ಯವಸ್ಥೆ ಮತ್ತಷ್ಟು ಬಿಗಡಾಯಿಸಿದ್ದು ಕಲುಷಿತ ಧೂಳಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಶ್ವಾಸಕೋಶ, ಚರ್ಮ ಮತ್ತು ಕಣ್ಣಿಗೆ ಸಂಬಂಧಿಸಿದ ರೋಗಗಳು ಕಲುಷಿತ ಧೂಳಿನಿಂದಾಗಿ ಉಲ್ಬಣಿಸಿ ನಾಗರಿಕರ ಹಾಗೂ ಪ್ರವಾಸಿಗರ ಆರೋಗ್ಯ ಹಾಳುಮಾಡುತ್ತಿದೆ. ಹೂಬಳ್ಳಿ ಖ್ಯಾತಿಯ ಹುಬ್ಬಳ್ಳಿ ಹೋಗಿ ಧೂಳಿನ ನಗರಿಯಾಗಿ ಅಪಖ್ಯಾತಿ ಪಡೆದಿದೆ.ವಿಷ ಮಿಶ್ರಿತ ಧೂಳು ಹುಬ್ಬಳ್ಳಿಯ ಸಂಕೇತವಾಗಿದೆ. ಇಂತಹ ಸಮಸ್ಯೆಗಳ ಕುರಿತು ಪಾಲಿಕೆ ಮೌನ ವಹಿಸಿರುವುದು ಸಮಸ್ಯೆಗಳ ಉಲ್ಬಣಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಮುಖಂಡರಾದ ಶಾಕೀರ್‌ ಸನದಿ, ರಾಜಶೇಖರ ಮೆಣಸಿನಕಾಯಿ, ಅನಿಲಕುಮಾರ ಪಾಟೀಲ, ಇಲಿಯಾಸ್‌ ಮನಿಯರ್‌, ಮದನ ಕುಲಕರ್ಣಿ, ಬಾಬಾಜಾನ್‌ ಮುಧೋಳ, ನವೀದ್‌ ಮುಲ್ಲಾ, ಇಮ್ರಾನ್‌ ಎಲಿಗಾರ್‌, ಸಂತೋಷ ಜಕ್ಕಪ್ಪನವರ, ಡಾ| ಎಂ.ಜಿ. ಜೇಡರ, ಸಮದ್‌ ಗುಲ್ಬರ್ಗ, ಮೊಹಮ್ಮದ್‌ ಗೌಸ್‌, ಕಾಶಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next