ಮೈಸೂರು: ಪದೇ ಪದೆ ಅನಾರೋಗ್ಯದ ನೆಪವೊಡ್ಡಿ ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಮುಂದೂಡುತ್ತಿರುವ ಮೇಯರ್ ವಿರುದ್ಧ ನಗರ ಪಾಲಿಕೆಯ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಪ್ರತ್ಯೇಕವಾಗಿ ಬುಧವಾರ ಪ್ರತಿಭಟಿಸಿದರು.
ನಗರಪಾಲಿಕೆ ವಿಪಕ್ಷ ನಾಯಕರ ಕಚೇರಿ ಎದುರು ಕಾಂಗ್ರೆಸ್ ಸದಸ್ಯರು ಹಾಗೂ ಪಾಲಿಕೆಯ ದ್ವಾರದಲ್ಲಿ ಜೆಡಿಎಸ್ ಸದಸ್ಯರು ಪ್ರತಿಭಟಿಸುವ ಮೂಲಕ ಮೇಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎರಡು ಬಾರಿ ಮುಂದೂಡಲಾಗಿದೆ: ನಾಲ್ಕು ಸ್ಥಾಯಿ ಸಮಿತಿಗಳಾದ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಮತ್ತು ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಚುನಾವಣೆಯನ್ನು ಎರಡು ಬಾರಿ ಮುಂದೂಡಲಾಗಿದೆ ಎಂದು ದೂರಿದರು.
ಅನಾರೋಗ್ಯದ ನೆಪ: ಎರಡು ಬಾರಿಯು ಮೇಯರ್ ಅವರು ಅನಾರೋಗ್ಯದ ನೆಪ ಹೇಳಿಕೊಂಡು ಮುಂದೂಡಿದ್ದಾರೆ. ಮಾರ್ಚ್ ಅಂತ್ಯದೊಳಗೆ ನಗರ ಪಾಲಿಕೆ ಬಜೆಟ್ ಮಂಡಿಸಬೇಕು. ಆದರೆ ಈವರೆಗೂ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ನೇಮಿಸಿಲ್ಲ. ಇದರಿಂದಾಗಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಅವರು ಆರೋಪಿಸಿದರು. ಸಭೆ ಮುಂದೂಡಿಕೊಂಡು ಕಾಲಹರಣ: ಸ್ಥಾಯಿ ಸಮಿತಿ ಚುನಾವಣೆ ಮಾತ್ರವಲ್ಲದೆ, ಕೌನ್ಸಿಲ್ ಸಭೆಯನ್ನು ಮುಂದೂಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಮುಂದಿನ ತಿಂಗಳಿಂದ ಯಾವುದೇ ಹೊಸ ಕಾಮಗಾರಿ ನಡೆಸಲು ಅಥವಾ ನೌಕರರಿಗೆ ವೇತನ ಪಾವತಿಸಲು ಆಗುವುದಿಲ್ಲ ಎಂದು ಅವರು ದೂರಿದರು.
ಕೂಡಲೇ ಸ್ಥಾಯಿ ಸಮಿತಿ ಚುನಾವಣೆ ನಡೆಸಬೇಕು ಎಂದ ಪ್ರತಿಭಟನಾಕಾರರು, ಮೇಯರ್ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಅಯೂಬ್ ಖಾನ್, ಮಾಜಿ ಉಪ ಮೇಯರ್‌ಗಳಾದ ಶಾಂತಕುಮಾರಿ, ಶ್ರೀಧರ್, ಅನ್ವರ್‌ಬೇಗ್, ಸದಸ್ಯರಾದ ಶೋಭಾ ಸುನಿಲ್, ಪ್ರದೀಪ್, ಎಂ.ಶಿವಕುಮಾರ್ ಇದ್ದರು. ಜೆಡಿಎಸ್ ಪ್ರತಿಭಟನೆಯಲ್ಲಿ ನಾಗರಾಜು, ಎಸ್ ಬಿಎಂ ಮಂಜು, ಅಶ್ವಿನಿ ಅನಂತು, ತಸ್ಲೀಂ, ಎಂ.ಎಸ್. ಶೋಭಾ, ಸಾವೂದ್ ಖಾನ್ ಮೊದಲಾದವರು ಇದ್ದರು.