ತಿಪಟೂರು: ಕಾಂಗ್ರೆಸ್ ಪಕ್ಷ ಕುಟುಂಬ ಪರಿವಾರಕ್ಕೆ ಮಾತ್ರ ಸೀಮಿತವಾಗಿದ್ದು ಕ್ರಿಮಿನಲ್, ಭ್ರಷ್ಟಾಚಾರದ ಪಕ್ಷವಾಗಿದೆ. ರಾಹುಲ್‌ಗಾಂಧಿ ಪಾದಯಾತ್ರೆ ಮಾಡಿದರೂ ಚುನಾವಣೆಯಲ್ಲಿ ಒಂದು ಸೀಟನ್ನೂ ಗೆಲ್ಲುವುದಿಲ್ಲ. ಪ್ರಧಾನಿ ಮೋದಿಯವರ “ಕಮಾಲ್ ಮುಂದೆ ಕಾಂಗ್ರೆಸ್ ಶೂನ್ಯ’. ಕಾಂಗ್ರೆಸ್‌ನ್ನು ರಾಜ್ಯದಿಂದ ಕಿತ್ತೂಗೆಯುವ ಕೆಲಸವನ್ನು ನೀವು ಮಾಡಬೇಕೆಂದು ಕಾರ್ಯಕರ್ತರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.
ತಿಪಟೂರಿಗೆ ಶನಿವಾರ ಆಗಮಿಸಿದ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದಿಂದ ಮಾತ್ರ ದೇಶದ ವಿಕಾಸ ಮತ್ತು ಪರಿವರ್ತನೆ ಸಾಧ್ಯವಿದ್ದು, ಈ ಬಾರಿ ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಖಚಿತ. ಮೋದಿಯವರ ಆಡಳಿತ ಎಲ್ಲರಲ್ಲೂ ಚೈತನ್ಯ ಮೂಡಿಸಿದ್ದು, ಅವರ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನಮಂತ್ರಿ ಗರೀಬ್ ಯೋಜನೆ ಸೇರಿ ರೈತರು, ಮಹಿಳೆಯರು, ಆದಿವಾಸಿ, ದಲಿತರನ್ನು ಗಮನದಲ್ಲಿಟ್ಟುಕೊಂಡು ಹಲವು ಮಹತ್ವಾಂಕ್ಷಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಿಜೆಪಿ ಸದೃಢವಾಗಿ ಬೆಳೆದಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ತಿರುಕನ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ರಾಜ್ಯದಲ್ಲಿ ಬಿಜೆಪಿ ಮತ್ತೂಮ್ಮೆ ಅಧಿಕಾರ ಹಿಡಿಯುವ ಮೂಲಕ ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿಸುವುದು ನಮ್ಮ ಗುರಿ ಎಂದರು.
ರಾಜ್ಯದೆಲ್ಲೆಡೆ ವಿಜಯ ಸಂಕಲ್ಪ ರಥಯಾತ್ರೆಗೆ ಅದ್ಧೂರಿ ಸ್ವಾಗತ ದೊರೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ರೈತಪರ, ಜನಪರ ಹಾಗೂ ಎಲ್ಲಾ ವರ್ಗದ ಹಿತ ಕಾಪಾಡುವಂತಹ ಯೋಜನೆಗಳನ್ನು ಜಾರಿಗೆ ತಂದು ಎಲ್ಲರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರ ಎಂಟೂವರೆ ವರ್ಷದ ಜನಪರ ಆಡಳಿತಕ್ಕೆ ದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.
Related Articles
ಎಲ್ಲಾ ಕ್ಷೇತ್ರದಲ್ಲೂ ಗೆಲುವು:
ರಾಜ್ಯದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತೇವೆಂಬ ಭಯ ಕಾಂಗ್ರೆಸ್‌ಗಿದೆ. ಬಿಜೆಪಿ ಪಕ್ಷ ಜನಸಾಮಾನ್ಯರ ಪಕ್ಷವಾಗಿದ್ದು, ಪಕ್ಷದ ಸಾಧನೆ ಏನು ಎಂಬುದು ರಾಜ್ಯದ ಜನತೆಗೆ ತಿಳಿದಿದೆ ಎಂದರು. ತುಮಕೂರು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದ್ದು, ಮುಂಬರುವ ಚುನಾವಣೆಯಲ್ಲಿ ನಿಮ್ಮೆಲ್ಲರ ಸಹಕಾರದಿಂದ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
ರಥಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಕಂದಾಯ ಸಚಿವ ಆರ್. ಅಶೋಕ್, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಜಿಲ್ಲಾಧ್ಯಕ್ಷ ಹೆಬ್ಟಾಕ ರವಿ ಸೇರಿದಂತೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ನಗರದ ಬಂಡೀಹಳ್ಳಿಯಿಂದ ಯಾತ್ರೆ ಪ್ರಾರಂಭವಾಗಿ ನಂತರ ನೀಲಕಂಠಸ್ವಾಮಿ ಸರ್ಕಲ್, ಸಿಂಗ್ರಿ ನಂಜಪ್ಪ ವೃತ್ತದ ಬಳಿ ಸಮಾವೇಶಗೊಂಡಿತು.