Advertisement

ಕಾಂಗ್ರೆಸ್‌ಗೆ ಮಧ್ಯಾಂತರ ಚುನಾವಣೆ ಚಿಂತೆ; ರಾಜ್ಯದ ವಿದ್ಯಮಾನ- ಹೈಕಮಾಂಡ್‌ಗೆ ಆತಂಕ

12:12 AM Mar 27, 2022 | Team Udayavani |

ಬೆಂಗಳೂರು: ರಾಜ್ಯ ರಾಜಕೀಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ದಿಲ್ಲಿ ಕಾಂಗ್ರೆಸ್‌ ವಲಯದಲ್ಲೂ ಚರ್ಚೆಯಾಗುತ್ತಿದ್ದು, ಎಪ್ರಿಲ್‌ನಲ್ಲಿ ಮತ್ತೂಮ್ಮೆ ರಾಜ್ಯ ನಾಯಕರ ಜತೆ ಹೈಕಮಾಂಡ್‌ ಸಮಾಲೋಚನೆಗೆ ಮುಂದಾಗಿದೆ.

Advertisement

ಹಿಜಾಬ್‌ ಸಂಘರ್ಷ, ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ, ಕಾಶ್ಮೀರಿ ಫೈಲ್ಸ್‌ ಸಿನೆಮಾ ಪ್ರಭಾವ ವಿಚಾರಗಳ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಎದುರಿಸಲು ಅನುಸರಿಸಬೇಕಾದ ಪರ್ಯಾಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಜತೆಗೆ, ಅವಧಿಪೂರ್ವ ಚುನಾವಣೆ ವಿಚಾರವೂ ಬಿಜೆಪಿ ವರಿಷ್ಠರ ಮಟ್ಟದಲ್ಲೇ ಚರ್ಚೆಯಾಗುತ್ತಿದೆ. ಒಂದೊಮ್ಮೆ ಅದು ನಿಜವಾದರೆ ಕಾಂಗ್ರೆಸ್‌ ಸಿದ್ಧತೆ ಏನು ಎಂಬುದು ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್‌ ಜತೆ ಕರ್ನಾಟಕದಲ್ಲೂ ಚುನಾವಣೆ ನಡೆಸುವುದು ಸೂಕ್ತ ಎಂಬುದು ಬಿಜೆಪಿ ವರಿಷ್ಠರ ಚಿಂತನೆ. ಇದರಿಂದ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಷಯ ತನ್ನಿಂತಾನೇ ತೆರೆಮರೆಗೆ ಸರಿಯುತ್ತದೆ. ಎಲ್ಲರೂ ಚುನಾವಣೆಗೆ ಸಜ್ಜಾಗುತ್ತಾರೆ ಹಾಗೂ ಮತ್ತೂಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಕ್ರಿಯರಾಗುತ್ತಾರೆ ಎಂಬ ಮಾತುಕತೆಗಳು ನಡೆಯುತ್ತಿರುವ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ಗೂ ಮಾಹಿತಿ ಇದೆ.

ಆದರೆ ಮಧ್ಯಾಂತರ ಚುನಾವಣೆ ಬಗ್ಗೆ ರಾಜ್ಯ ನಾಯಕರಿಗೂ ಮನಸ್ಸಿಲ್ಲ ಹಾಗೂ ಅದಕ್ಕೆ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ. ಅನಿವಾರ್ಯವಾದರೆ ಸಜ್ಜಾಗಬೇಕಾಗುತ್ತದೆ. ಹೀಗಾಗಿ, ರಾಜ್ಯ ನಾಯಕರ ಜತೆ ಆ ಬಗ್ಗೆ ಚರ್ಚಿಸಲಿದೆ ಎನ್ನಲಾಗಿದೆ.

ಹೈಕಮಾಂಡ್‌ ದೂರು
ಹಿಜಾಬ್‌, ಭಗವದ್ಗೀತೆ, ಕಾಶ್ಮೀರಿ ಫೈಲ್ಸ್‌ ವಿಚಾರವನ್ನು ರಾಜ್ಯ ಕಾಂಗ್ರೆಸ್‌ ನಾಯಕರು ಸರಿಯಾಗಿ ನಿರ್ವಹಿಸಿಲ್ಲ. ಇದರ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ವಿಪಕ್ಷ ನಾಯಕರಿಂದ ಭಿನ್ನ ಮಾತು ಕೇಳಿ ಬಂದಿದೆ. ಇತರ ನಾಯಕರು ತರೇಹವಾರಿ ಹೇಳಿಕೆ ಮೂಲಕ ಬಿಜೆಪಿಗೆ ಸಹಕಾರಿಯಾಗುವಂತೆ ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯದ ಶಾಸಕರು ಬೇರೆಯೇ ನಿಲುವು ತಾಳಿದರು ಎಂದು ಕಾಂಗ್ರೆಸ್‌ ನಾಯಕರ ತಂಡವೊಂದು ಹೈಕಮಾಂಡ್‌ಗೆ ದೂರು ಸಲ್ಲಿಸಿದೆ ಎನ್ನಲಾಗಿದೆ.

Advertisement

ಚುನಾವಣೆ ವರ್ಷದಲ್ಲಿ ಪ್ರತಿ ವಿಷಯದ ಬಗ್ಗೆ ಹಿಂದುಮುಂದು ಯೋಚಿಸಿ ಯಾವ ನಿಲುವು ತಾಳಬೇಕು ಎಂದು ಕೆಪಿಸಿಸಿ ಅಧ್ಯಕ್ಷರು, ವಿಪಕ್ಷದ ನಾಯಕರು ಚರ್ಚಿಸಿ ಇತರ ನಾಯಕರಿಗೆ ಸಂದೇಶ ರವಾನಿಸಬೇಕಿತ್ತು. ಆದರೆ, ಈ ಮೂರೂ ವಿಷಯಗಳಲ್ಲಿ ಹಾಗಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದರ ಜತೆಗೆ, ಜೆಡಿಎಸ್‌ನತ್ತ ಮುಖ ಮಾಡಿರುವ ಸಿ.ಎಂ.ಇಬ್ರಾಹಿಂ ಅವರನ್ನು ಉಳಿಸಿಕೊಳ್ಳಬಹುದಿತ್ತು. ಆ ನಿಟ್ಟಿನಲ್ಲಿ ಗಟ್ಟಿ ಪ್ರಯತ್ನವನ್ನೇ ಮಾಡಲಿಲ್ಲ. ಚುನಾವಣೆ ಸಮಯದಲ್ಲಿ ಅವರು ಜೆಡಿಎಸ್‌ಗೆ ಹೋದರೆ ಕಾಂಗ್ರೆಸ್‌ಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಹೈಕಮಾಂಡ್‌ಗೆ ಹಿರಿಯ ನಾಯಕರು ತಿಳಿಸಿದ್ದಾರೆ.

ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲ ರಾಜ್ಯ ನಾಯಕರನ್ನು ಸಂಪರ್ಕಿಸಿ ಎಪ್ರಿಲ್‌ನಲ್ಲಿ ವರಿಷ್ಠರ ಸಮ್ಮುಖದಲ್ಲಿ ಮಾತುಕತೆ ಪ್ರಸ್ತಾವ ಮಾಡಿದ್ದಾರೆ ಎಂದು ಹೇಳಲಾಗಿದೆ.

ಬಾಯಿಗೆ ಬೀಗ
ವಿವಾದಾತ್ಮಕ, ಸೂಕ್ಷ್ಮ ಹಾಗೂ ಭಾವನಾತ್ಮಕ ವಿಷಯಗಳ ಬಗ್ಗೆ ತೋಚಿದಂತೆ ಮಾತನಾಡಬೇಡಿ ಎಂದು ಕಾಂಗ್ರೆಸ್‌ ಹೈಕಮಾಂಡ್‌ ತಾಕೀತು ಮಾಡಿದೆ. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಯಾವ ನಿಲುವು ತಾಳಬೇಕು ಎಂಬುದು ಕೆಪಿಸಿಸಿ ಅಧ್ಯಕ್ಷರು, ವಿಪಕ್ಷ ನಾಯಕರು ಜತೆಗೂಡಿಯೇ ನಿರ್ಧರಿಸಿ. ಅದನ್ನು ಎಲ್ಲರೂ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ.

 -ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next