Advertisement

ರಾಗಾ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ತಾಲೀಮು

09:58 AM Mar 30, 2018 | Team Udayavani |

ದಾವಣಗೆರೆ: ಬಿಜೆಪಿ ಜಿಲ್ಲಾಧ್ಯಕ್ಷರ ಮನೆಗೆ ನಾಗಾ ಸಾಧುಗಳ ದಿಢೀರ್‌ ಭೇಟಿ..ಹೊನ್ನಾಳಿ ತಾಲೂಕು ಕುಂದೂರಿನಲ್ಲಿ ಮುಷ್ಟಿ ಧಾನ್ಯ ಅಭಿಯಾನ ನಡೆಸುತ್ತಿದ್ದ ಮಾಜಿ ಸಚಿವ ರೇಣುಕಾಚಾರ್ಯಗೆ ನೀತಿ ಸಂಹಿತೆ ಉಲ್ಲಂಘನೆ ಕಿರಿಕಿರಿ…., ಜಿಲ್ಲಾ ಕಾಂಗ್ರೆಸ್‌ನಿಂದ ದಿನವಿಡೀ ರಾಹುಲ್‌ ಗಾಂಧಿ ಕಾರ್ಯಕ್ರಮದ ತಯಾರಿ…. ಇವು ಗುರುವಾರ ನಡೆದ ಪ್ರಮುಖ ರಾಜಕೀಯ ಚಟುವಟಿಕೆ.

Advertisement

ಚುನಾವಣೆಗೆ ದಿನಾಂಕ ಘೋಷಣೆಯಾದ 3ನೇ ದಿನದ ನಂತರ ರಾಜಕೀಯ ನಾಯಕರು ವಿಶೇಷ ಅನ್ನಿಸುವ ಕಾರ್ಯಗಳಲ್ಲಿ ಪಾಲ್ಗೊಳ್ಳದೇ ಇದ್ದರೂ ದಿನವಿಡೀ ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿಕೊಂಡರು. ಕಾಂಗ್ರೆಸ್‌ ಮುಖಂಡ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮನೆಯಲ್ಲಿ ನಾಯಕರ ಜೊತೆ ಚರ್ಚಿಸಿದರು. ನಂತರ ಕೃಷಿ ತಜ್ಞ, ಭಾರತೀಯ ರೈತ ಸಂಘದ ಅಧ್ಯಕ್ಷ ಪ್ರೊ| ಎಚ್‌. ನರಸಿಂಹಪ್ಪನವರ ಮೊಮ್ಮಗಳ ಮದುವೆಯಲ್ಲಿ ಭಾಗಿಯಾದರು. 

ಈ ವೇಳೆ ನರಸಿಂಹಪ್ಪನವರ ಜೊತೆಗೆ ಕೆಲ ಹೊತ್ತು ಮಾತುಕತೆ ನಡೆಸಿದರು. ಮಧ್ಯಾಹ್ನ ತಮ್ಮ ನಿವಾಸದಲ್ಲಿ ಹಲವು ನಾಯಕರ ಜೊತೆ ಮಾತುಕತೆ ನಡೆಸಿ, ಏ. 3ರಂದು ಜಿಲ್ಲೆಗೆ ಆಗಮಿಸುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ರೋಡ್‌ ಶೋ ಬಗ್ಗೆ ಚರ್ಚೆ ನಡೆಸಿದರು. ರೋಡ್‌ ಶೋ ಸಾಗುವ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಚರ್ಚಿಸಿದರು. ರೋಡ್‌ ಶೋ ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಲು ಶುಕ್ರವಾರ ಪಕ್ಷದ ಪದಾಧಿಕಾರಿಗಳ ಸಭೆ ಸಹ ಕರೆಯಲಾಗಿದೆ.

ಇತ್ತ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ಮನೆಗೆ ನಾಗಾ ಸಾಧುಗಳು ದಿಢೀರ್‌ ಬಂದು ಆಶೀರ್ವದಿಸಿದ್ದಾರೆ. ಇದಾದ ನಂತರ ಜಾಧವ್‌ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಪ್ರತಿನಿಧಿಗಳ ಜೊತೆ ಮಾತನಾಡಿದರು. ಸಂಜೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ನೇತೃತ್ವದಲ್ಲಿ ಪಕ್ಷದ ಎಲ್ಲಾ ಪದಾಧಿಕಾರಿಗಳ ಸಭೆ ನಡೆಸಿ, ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು. ಉಳಿದಂತೆ
ಜಗಳೂರಿನಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯಕರ್ತರ ಸಭೆ ತಯಾರಿ ಕುರಿತು ಸಹ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.

ಹರಿಹರದ ಜೆಡಿಎಸ್‌ ಘಟಕದಲ್ಲಿ ಕೆಲ ಬೆಳವಣಿಗೆ ಆಗಿವೆ. ಕೆಜೆಪಿಯಿಂದ ಸ್ಪರ್ಧಿಸಿ, ನಗರಸಭೆ ಆಯ್ಕೆಯಾದ, ಕೆಜೆಪಿ-ಬಿಜೆಪಿ ವಿಲೀನವಾದ ನಂತರ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ನಗರ ಸಭೆ ಸದಸ್ಯರೊಬ್ಬರು ಬಿಜೆಪಿ ತೊರೆದು ಗುರುವಾರ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಜಗಳೂರು ಶಾಸಕ ಎಚ್‌.ಪಿ. ರಾಜೇಶ್‌, ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ತಮ್ಮ ಕ್ಷೇತ್ರಗಳ ಕೆಲ ಗ್ರಾಮಗಳಿಗೆ ಭೇಟಿ ನೀಡಿ, ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ್ದಾರೆ.

Advertisement

ಇಂದಿರಾ ಗಾಂಧಿ ಫೋಟೊ ಮುಚ್ಬೇಕು 
ಇಂದಿರಾ ಕ್ಯಾಂಟೀನ್‌ಗಳ ಬಳಿ ಹಾಕಲಾಗಿದ್ದ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭಾವಚಿತ್ರ ಮುಚ್ಚುವ
ಕುರಿತು ಬೆಳಗ್ಗೆಯಿಂದ ಅಧಿಕಾರಿಗಳು ಗೊಂದಲದಲ್ಲಿದ್ದರು. ಈ ಕುರಿತು ರಾಜ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದು ಸಲಹೆ ಕೇಳಿದ್ದರು. ಕೊನೆಗೆ ರಾಜ್ಯ ಮಟ್ಟದ ಅಧಿಕಾರಿಗಳು ಮುಚ್ಚಿಸಲು ತಿಳಿಸಿದ್ದರಿಂದ ಸಂಜೆ  ವೇಳೆಗೆ ಭಾವಚಿತ್ರ ಮುಚ್ಚುವ ಕಾರ್ಯ ಆರಂಭಿಸಲಾಯಿತು.

ಇನ್ನೂ ಆಗಿಲ್ಲ ತೆರವು
ಇತ್ತ ಅಧಿಕಾರಿಗಳು ಸಹ ದಿನವಿಡೀ ಬ್ಯುಸಿಯಾಗಿದ್ದರು. ರಾಜ್ಯ ಚುನಾವಣಾಧಿಕಾರಿಗಳ ಜೊತೆಗೆ ಸಭೆ ನಡೆಸುವುದು ಒಂದು ಕಡೆಯಾದರೆ, ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಚಿನ್ಹೆ, ನಾಯಕರ ಭಾವಚಿತ್ರ ಕಾಣದಂತೆ ಫಲಕ ಮುಚ್ಚುವ ಅಥವಾ ತೆರವುಗೊಳಿಸುವ ಕಾರ್ಯ ಸಹ ಮುಂದುವರಿಸಿದರು. ಆದರೆ, ನೀತಿ ಸಂಹಿತೆ ಜಾರಿಯಾಗಿ 48 ಗಂಟೆ ಕಳೆದರೂ ಇನ್ನೂ ತೆರವು, ಮುಚ್ಚುವ ಕಾರ್ಯ ಮಾತ್ರ ಪೂರ್ಣಗೊಂಡಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿರುವ ವಿವಿಧ ಯೋಜನೆಗಳ ಫಲಕದಲ್ಲಿದ್ದ ಭಾವಚಿತ್ರ ಮುಚ್ಚುವ ಕಾರ್ಯ ಬಹುತೇಕ ಮುಕ್ತಾಯ ಕಂಡಿದೆ. ಆದರೆ, ರಾಜಕೀಯ ಪಕ್ಷಗಳು ಸಾರ್ವಜನಿಕ ಜಾಗ, ಖಾಸಗಿ ವಾಸಸ್ಥಾನಗಳಲ್ಲಿ ಬರೆಸಿದ ಪಕ್ಷದ ಪ್ರಚಾರದ ಬರಹ ತೆರವು ಕಾರ್ಯ ಮಾತ್ರ ಇನ್ನೂ ಆಗಿಲ್ಲ.

ಜಾಧವ್‌ ಮನೆಗೆ ಬಂದ್ರು ನಾಗಾ ಸಾಧುಗಳು
ದಾವಣಗೆರೆ: ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ಮನೆಗೆ ನಾಗಾ ಸಾಧು ಓರ್ವ ತನ್ನ ಶಿಷ್ಯರೊಂದಿಗೆ ಏಕಾಏಕಿ ಆಗಮಿಸಿ ಆಶೀರ್ವದಿಸಿರುವ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಿಜೆಪಿಯ ವಾಟ್ಸ್‌ ಆ್ಯಪ್‌ ಮೀಡಿಯಾ ಗ್ರೂಪ್‌, ಫೇಸ್‌ಬುಕ್‌ ಪೇಜ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಹರಿದಾಡುತ್ತಿವೆ.

ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಯಶವಂತರಾವ್‌ ಜಾಧವ್‌, ಗುರುವಾರ ಬೆಳಗ್ಗೆ ನಾನು ಮನೆಯಲ್ಲಿ ಪೂಜೆ ಮುಗಿಸಿಕೊಂಡು ಪಕ್ಷದ ಕಚೇರಿಗೆ ಹೋಗಲು ಕಾರ್‌ಗಾಗಿ ಕಾಯುತ್ತಿದ್ದೆ. ಏಕಾಏಕಿ ಬುಲೆರೋ ವಾಹನವೊಂದು ಮನೆ ಮುಂದೆ ಬಂದು ನಿಂತಿತು. ಅದರಿಂದ ಕೆಳಗಿಳಿದ ಐವರು ಸಾಧುಗಳು ನಮ್ಮ ಮನೆ ಪ್ರವೇಶಿಸಿದರು. ಅದರಲ್ಲೋರ್ವ ನಾಗಾ ಸಾಧು ಇದ್ದರು ಎಂದರು.
 
ಮನೆಯ ಮಧ್ಯಭಾಗ ಪ್ರವೇಶಿಸಿದ ಸ್ವಾಮೀಜಿಗಳನ್ನು ನಾನು ಕುಳಿತುಕೊಳ್ಳಲು ತಿಳಿಸಿದೆ. ಹಾಲು ಹಣ್ಣು ನೀಡಿದೆ. ಅವರು
ಹಿಂದಿಯಲ್ಲಿ ಮಾತನಾಡುತ್ತಿದ್ದರು. ನನಗೆ ಹಿಂದಿ ಪೂರ್ತಿ ಅರ್ಥವಾಗುವುದಿಲ್ಲ. ಹಾಗಾಗಿ ಅವರು ಹೇಳಿದ್ದಕ್ಕೆ ನಾನು ನನಗೆ ಬರುವ ಹಿಂದಿಯಲ್ಲಿ ಉತ್ತರ ಹೇಳಿದೆ. ಕೊನೆಗೆ ಚುನಾವಣೆಯ ವಿಷಯ ಪ್ರಸ್ತಾಪಿಸಿದರು. ಈ ಬಾರಿಯ ಚುನಾವಣೆಯಲ್ಲಿ ನೀವು ಸ್ಪರ್ಧಿಸುವ ಉದ್ದೇಶ ಇದೆಯಾ ಎಂದು ಪ್ರಶ್ನಿಸಿದರು. ಅದಕ್ಕೆ ನಾನು ನಮ್ಮ ಪಕ್ಷದ ವರಿಷ್ಠರು ಈ ಕುರಿತು ಪ್ರಸ್ತಾಪ ಮಾಡಿದ್ದಾರೆ. ನನಗೆ ಟಿಕೆಟ್‌ ಸಿಗುವ ಸಂಭವ ಇದೆ ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಾರಿಯ ಚುನಾವಣೆಯಲ್ಲಿ ನಿನಗೆ ಗೆಲುವು ಸಿಗುವುದು ಖಚಿತ ಎಂದು ತಿಳಿಸಿದರು. ನಾನು ಅವರ ಕಾಲಿಗೆ ನಮಸ್ಕರಿಸಿದೆ ಎಂದು ತಿಳಿಸಿದ್ದಾರೆ. 

ನಾಗಾ ಸಾಧುಗಳು ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ತುಮಕೂರು, ಚಿತ್ರದುರ್ಗ ಭಾಗಗಳಲ್ಲೂ ಸಹ ಇದೇ ರೀತಿ ರಾಜಕಾರಣಿಗಳು, ವರ್ತಕರು, ಗಣ್ಯರ ಮನೆಗೆ ಏಕಾಏಕಿ ಭೇಟಿ ನೀಡಿ, ಆಶೀರ್ವದಿಸುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ದಾವಣಗೆರೆಯಲ್ಲೂ ಸಹ ಅವರು ಸಂಚಾರ ಮಾಡುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next