ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಫೈರಿಂಗ್ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಕೆಲವು ಆಂತರಿಕ ವಿಚಾರಗಳಿದ್ದು, ಪಕ್ಷದ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಳಿ ಈ ವಿಚಾರ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ. ನಾಳೆ (ಡಿ.18) ಬೆಳಗಾವಿಗೆ ಭೇಟಿ ನೀಡಲಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ನಡೆದಿತ್ತು. ಕಾಂಗ್ರೆಸ್ ಕಾರ್ಯಕರ್ತರಾದ ಕಿರಣ್ ರಜಪೂತ್ ಹಾಗೂ ಭರಮಾ ದೂಪದಾಳೆ ಮೇಲೆ ಫೈರಿಂಗ್ ಮಾಡಲಾಗಿದೆ. ಘಟನೆಯಲ್ಲಿ ಭರಮಾ ದೂಪದಾಳೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಿರಣ್ ರಜಪೂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆ ವೈಷಮ್ಯದ ಹಿನ್ನೆಲೆಯಲ್ಲಿ ಫೈರಿಂಗ್ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಮಂಗಳೂರು: ಬೈಕ್ ನಲ್ಲಿ ಬಂದ ದುಷ್ಕರ್ಮಿಯಿಂದ ಹೆಡ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ !
ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಭೇಟಿ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಶರತ್ ಬಚ್ಚೇಗೌಡ ನಮ್ಮ ಕಾರ್ಯಕರ್ತರ ಜೊತೆ ಸೇರಿ ಚುನಾವಣೆ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆ ಯಲ್ಲಿ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ಬೆಂಬಲಿಸುತ್ತಿದ್ದಾರೆ. ಇದೇ ವಿಚಾರವಾಗಿ ನಿನ್ನೆ ಭೇಟಿಯಾಗಿ ಚರ್ಚೆಸಿದರು. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಶರತ್ ನಮ್ಮ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ನಿಧನ ಹೊಂದಿದ ಖ್ಯಾತ ಉದ್ಯಮಿ ಆರ್.ಎನ್. ಶೆಟ್ಟಿ ಅವರ ಬೆಂಗಳೂರಿನ ವಸಂತನಗರದ ನಿವಾಸಕ್ಕೆ ತೆರಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.