Advertisement

ವಿದ್ಯಾವಂತರ ವಾರ್ಡಲ್ಲೇ ಕಾಂಗ್ರೆಸ್‌ಗೆ ಹಿನ್ನಡೆ!

02:34 PM May 18, 2018 | Team Udayavani |

ದಾವಣಗೆರೆ: ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಾನಗರ ಪಾಲಿಕೆ ಬಹುತೇಕ ವಾರ್ಡ್‌ಗಳ ಮತದಾರರು ಬಿಜೆಪಿ ಬೆಂಬಲಿಸಿದ್ದಾರೆ.

Advertisement

ನಗರದ ರೈಲ್ವೆ ಹಳಿಯ ಉತ್ತರ ಭಾಗದ ಪಾಲಿಕೆಯ 21 ವಾರ್ಡ್‌ಗಳನ್ನು ಒಳಗೊಂಡಿರುವ ಉತ್ತರ ಕ್ಷೇತ್ರದ ಬಡಾವಣೆಗಳ, ಅದರಲ್ಲೂ ಸುಕ್ಷಿತರೇ ಅಧಿಕ ಸಂಖ್ಯೆಯಲ್ಲಿರುವ ಭಾಗದ ಮಂದಿ ಈ ಬಾರಿ ಕೈ ಬಿಟ್ಟು ಕಮಲದತ್ತ ಒಲವು ತೋರಿದ್ದಾರೆ. ಇದು ಈ ಚುನಾವಣೆಯಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ಗೆ ಹಿನ್ನಡೆಯಾಗಲು ಕಾರಣ ಎಂಬುದು ಮತದಾನ ಅಂಕಿ ಅಂಶದಿಂದ ತಿಳಿದು ಬಂದಿದೆ.

ಕಳೆದ 5 ವರ್ಷದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಂಡಂತಹ ಭಾಗದ ಮತದಾರರೇ ಕಾಂಗ್ರೆಸ್‌ ತಿರಸ್ಕರಿಸಿದ್ದಾರೆ. ನಗರದ ಬಡಾವಣೆಗಳ ಬಹುತೇಕ ಭಾಗದ ಸಂದಿಗೊಂದುಗಳಲ್ಲಿ ಸಿಮೆಂಟ್‌ ರಸ್ತೆ, ಚರಂಡಿ, ಒಳಚರಂಡಿ, ಮಕ್ಕಳ ಪಾರ್ಕ್‌, ಉದ್ಯಾನ ವನಗಳಲ್ಲಿ ಜಿಮ್‌ ಸಲಕರಣೆ ಹೀಗೆ ಹಲವು ಸೌಲಭ್ಯ ಕಂಡ ಪಿ.ಜೆ.ಬಡಾವಣೆ, ಸಿದ್ದವೀರಪ್ಪ ಬಡಾವಣೆ, ನಿಜಲಿಂಗಪ್ಪ ಬಡಾವಣೆ, ವಿದ್ಯಾನಗರ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಎ. ರವೀಂದ್ರನಾಥ್‌ ಕಾಂಗ್ರೆಸ್‌ನ ಮಲ್ಲಿಕಾರ್ಜುನ್‌ರಿಗಿಂತ ಹೆಚ್ಚಿನ ಮತ ಗಳಿಸಿದ್ದಾರೆ.

ಅಚ್ಚರಿ ಎಂದರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶ್ರಮಿಕ ವರ್ಗದವರು ವಾಸಿಸುವ ಕೊಳಚೆ ಪ್ರದೇಶ ಹೊಂದಿರುವ ವಾರ್ಡ್‌ಗಳ ಜನ ಸಹ ಕಾಂಗ್ರೆಸ್‌ ವಿರುದ್ಧ ಮತ ಚಲಾಯಿಸಿದ್ದಾರೆ. ನಿಟುವಳ್ಳಿ, ಚಿಕ್ಕನಹಳ್ಳಿ ಹೊಸ ಬಡಾವಣೆ ಪ್ರದೇಶದ ಜನರೂ ಸಹ ಬಿಜೆಪಿ ಪರ ಮತ ಚಲಾಯಿಸಿದ್ದಾರೆ. ಕೆಟಿಜೆ ನಗರದ ಎರಡೂ ವಾರ್ಡ್‌ಗಳಲ್ಲಿ ಮಾತ್ರ ಮಲ್ಲಿಕಾರ್ಜುನ್‌ ಅಲ್ಪ ಮುನ್ನಡೆ ದೊರೆತಿದೆ. ಮಹಾನಗರ ಪಾಲಿಕೆಯ 41 ಸ್ಥಾನಗಳ ಪೈಕಿ 39 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಪ್ರತಿನಿಧಿಗಳಿದ್ದಾರೆ. ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ 21 ವಾರ್ಡ್‌ಗಳಲ್ಲಿ ಬಿಜೆಪಿ ಹಾಗೂ ಸಿಪಿಐ ತಲಾ ಒಂದೊಂದು ವಾರ್ಡ್‌ ಬಿಟ್ಟರೆ ಬಾಕಿ 19 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಸದಸ್ಯರಿದ್ದಾರೆ. ಶೇ. 90ರಷ್ಟು ಅಧಿಪತ್ಯ ಹೊಂದಿದ್ದರೂ ಮತದಾರರು ಕಾಂಗ್ರೆಸ್‌ ಪರ ಒಲವು ತೋರಿಸದೇ ಇರುವುದು ಪಾಲಿಕೆಯ ಸದಸ್ಯರ ಕಾರ್ಯವೈಖರಿ ವಿರುದ್ಧ ಜನತೆಯ ಆಕ್ರೋಶ ವ್ಯಕ್ತವಾದಂತಿದೆ.

ಮಹಾನಗರ ಪಾಲಿಕೆಯ ಹಿರಿಯ ಸದಸ್ಯ, ಕಾಂಗ್ರೆಸ್‌ನ ಜಿಲ್ಲಾ ಕಾಯದರ್ಶಿಯೂ ಆಗಿರುವ ದಿನೇಶ್‌ ಕೆ. ಶೆಟ್ಟಿ ಪ್ರತಿನಿಧಿಸುವ 21ನೇ ವಾರ್ಡ್‌ನಲ್ಲಿ ಬಿಜೆಪಿಯ ರವೀಂದ್ರನಾಥ್‌ 2002 ಮತ ಪಡೆದಿದ್ದರೆ, ಮಲ್ಲಿಕಾರ್ಜುನ್‌ 1171 ಮತಗಳಿಸಿದ್ದಾರೆ. ಬಿಜೆಪಿಗೆ 831 ಹೆಚ್ಚಿನ ಮತ ದೊರೆತಿವೆ. ಪಾಲಿಕೆಯ ಇನ್ನೋರ್ವ ಹಿರಿಯ ಕಾಂಗ್ರೆಸ್‌ ಸದಸ್ಯ ಶಿವನಹಳ್ಳಿ ರಮೇಶ್‌ ಪ್ರತಿನಿಧಿಸುವ 29ನೇ ವಾರ್ಡ್‌ನ ಮತದಾರರು ಮಲ್ಲಿಕಾರ್ಜುನ್‌ಗಿಂತ ರವೀಂದ್ರನಾಥ್‌ ಗೆ ಹೆಚ್ಚಿನ ಮತ ನೀಡಿದ್ದಾರೆ. ಈ ವಾರ್ಡ್‌ನಲ್ಲಿ ಬಿಜೆಪಿಗೆ 2,598 ಹಾಗೂ ಕಾಂಗ್ರೆಸ್‌ಗೆ 2261 ಮತ ಲಭ್ಯವಾಗಿದ್ದು, ಬಿಜೆಪಿ 337 ಮತಗಳ ಲೀಡ್‌ ಪಡೆದಿದೆ.

Advertisement

ವಿದ್ಯಾನಗರದಲ್ಲೂ ಸಹ ರವೀಂದ್ರನಾಥ್‌ಗೆ ಅತಿ ಹೆಚ್ಚಿನ ಲೀಡ್‌ ಸಿಕ್ಕಿದೆ. ಪಾಲಿಕೆಯ ಉತ್ತರ ಭಾಗಕ್ಕೆ ಸೇರಿದ ವಾರ್ಡ್‌ಗಳ ಪೈಕಿ ಅತಿ ಹೆಚ್ಚಿನ ಲೀಡ್‌ ನೀಡಿದ ವಾರ್ಡ್‌ ಇದಾಗಿದೆ. ಈ ವಾರ್ಡ್‌ನಲ್ಲಿ ಬಿಜೆಪಿಗೆ 1431 ಮತಗಳ ಮುನ್ನಡೆ ಸಿಕ್ಕಿದೆ. ಇನ್ನು ಎಸ್‌.ಎಸ್‌. ಮಲ್ಲಿಕಾರ್ಜುನ್‌ ನಿವಾಸ ಇರುವ ಎಂಸಿಸಿ ಬಿ ಬ್ಲಾಕ್‌ನ ಮತದಾರರು ಸಹ ಬಿಜೆಪಿ ಪರ ಹೆಚ್ಚು ಒಲವು ತೋರಿರುವುದು ಕಂಡು ಬಂದಿದೆ. ಈ ಭಾಗದಲ್ಲಿ ಮಲ್ಲಿಕಾರ್ಜುನ್‌ಗೆ 1334 ಮತ ದೊರೆತರೆ ರವೀಂದ್ರನಾಥ್‌ 2047 ಮತ ಪಡೆದಿದ್ದಾರೆ. ಈ ಭಾಗದಲ್ಲಿ ಬಿಜೆಪಿಗೆ 713 ಮತ ಲೀಡ್‌ ಸಿಕ್ಕಿವೆ.

ಕಳೆದ ಚುನಾವಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರವೀಂದ್ರನಾಥ್‌ ವಿರುದ್ಧವೇ 57 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಈ ಬಾರಿ ಅದೇ ರವೀಂದ್ರನಾಥ್‌ ವಿರುದ್ಧ 4071 ಮತಗಳ ಅಂತರದಲ್ಲಿ ಪರಾಭವಗೊಂಡಿರುವುದು ಕ್ಷೇತ್ರದ ಜನತೆಗೆಗೆ ಅಚ್ಚರಿ-ಆಘಾತ ತಂದಿದೆ. ಮೇಲಾಗಿ ಪಾಲಿಕೆಯ ಘಟಾನುಘಟಿಗಳು, ಜಿಲ್ಲಾ ಕಾಂಗ್ರೆಸ್‌ನ ಗಣ್ಯರು ಪ್ರತಿನಿಧಿಸುವ ವಾರ್ಡ್‌ಗಳಲ್ಲೇ ಮಲ್ಲಿಕಾರ್ಜುನ್‌ಗೆ ಹಿನ್ನಡೆ ಆಗಿರುವುದು ನಗರದಲ್ಲಿ ಗಂಭೀರ ಚರ್ಚೆಗೆ ಗ್ರಾಸವೊದಗಿಸಿದೆ.

„ಪಾಟೀಲ ವೀರನಗೌಡ

Advertisement

Udayavani is now on Telegram. Click here to join our channel and stay updated with the latest news.

Next