Advertisement

ಕಾಂಗ್ರೆಸ್‌ ಕುಂಕುಮ ಭಾಗ್ಯಕ್ಕೆ ತಿರುಗೇಟು

06:00 PM Dec 22, 2017 | |

ರಾಮನಗರ: ಎಚ್‌.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾದರೆ ರೈತರ ಪತ್ನಿಯರ ಕುಂಕುಮ ಉಳಿಸುವ ಕಾರ್ಯಕ್ರಮಗಳು ಜಾರಿಯಾಗುತ್ತವೆ ಎಂದು ಜಿಪಂ ಸದಸ್ಯ ಹಾಗೂ ಜೆಡಿಎಸ್‌ ಮುಖಂಡ ಎ.ಮಂಜು ಕಾಂಗ್ರೆಸ್‌ ಇತ್ತೀಚೆಗೆ ಹಮ್ಮಿಕೊಂಡಿದ್ದ ಅರಿಶಿನ-ಕುಂಕುಮ ಭಾಗ್ಯ ಕಾರ್ಯಕ್ರಮಕ್ಕೆ ತಿರುಗೇಟು ನೀಡಿದರು.

Advertisement

ತಾಲೂಕಿನ ಬಿಡದಿ ಬಳಿಯ ರೆಸಾರ್ಟ್‌ವೊಂದರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೈರಮಂಗಲದಲ್ಲಿ ಇತ್ತೀಚೆಗೆ ಕಾಂಗ್ರೆಸ್‌ ಪ್ರಮುಖರು ಹಮ್ಮಿಕೊಂಡಿದ್ದ ಮಹಿಳೆಯರಿಗೆ ಅರಿಶಿನ-ಕುಂಕುಮ ಭಾಗ್ಯ ಕಾರ್ಯಕ್ರಮಕ್ಕೆ ಅವರು ಹೀಗೆ ಪ್ರತಿಕ್ರಿಯಿಸಿದರು. ಮಹಿಳೆಯರಿಗೆ ಅರಿಶಿನ-ಕುಂಕುಮ ಭಾಗ್ಯದ ಹೆಸರಿನಲ್ಲಿ ಸೀರೆ ವಿತರಿಸಿದ್ದು ಯಾಕೆ ಎಂದು ಕಾಂಗ್ರೆಸ್ಸಿಗರೇ ಪ್ರಶ್ನಿಸಿ ಕೊಳ್ಳಲಿ ಎಂದರು.

ಯೋಜನೆ ರೂಪಿಸಿ: ಎಚ್‌.ಡಿ.ಕುಮಾರಸ್ವಾಮಿ ಮುಂದಿನ ಸಿಎಂ ಆದರೆ ರೈತರ ಎಲ್ಲಾ ಸಾಲ ಮನ್ನಾ ಮಾಡುವುದಾಗಿ, ಜೊತೆಗೆ ರೈತರನ್ನು ಸದೃಢ ಮಾಡುವ ಯೋಜನೆಗಳನ್ನು ಜಾರಿ ಮಾಡಲಿದ್ದಾರೆ. ಈ ಮೂಲಕ ರೈತರು ಆತ್ಮಹತ್ಯೆಗೆ ಶರಣಾಗುವುದನ್ನು ತಪ್ಪಿಸುವುದು ಕುಮಾರಸ್ವಾಮಿ ಅವರ ಉದ್ದೇಶ.

ರೈತರ ಪತ್ನಿಯರ ಕುಂಕುಮವನ್ನು ಶಾಶ್ವತವಾಗಿ ಉಳಿಸುವಂತಹ ಯೋಜನೆಗಳು ಇಂದಿನ ಅಗತ್ಯತೆ, ಆದರೆ ಕಾಂಗ್ರೆಸ್‌ ಸರ್ಕಾರ ಇಂತಹ ಯೋಜನೆಗಳನ್ನು ರೂಪಿಸಲೇ ಇಲ್ಲ, ಕೇವಲ ಸೀರೆ, ಕುಂಕುಮ, ಅರಿಶಿನ ಕೊಟ್ಟರೆ ಸಾಕೆ ಎಂದು ಪ್ರಶ್ನಿಸಿದರು. 

ರಾಜ್ಯದಲ್ಲಿ ನೂರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದರೆ. ಅವರನ್ನು ಉಳಿಸಿಕೊಳ್ಳುವ ಯಾವ ಯೋಜನೆಯೂ ಈ ಸರ್ಕಾರ ರೂಪಿಸಲಿಲ್ಲ. ಅವರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಬೆಲೆ ಕಲ್ಪಿಸಿಲ್ಲ. ಶಾಶ್ವತ ನೀರಾವರಿ ಯೋಜನೆಗಳು ಜಾರಿಯಾಗಿಲಿಲ್ಲ. ಮಹಿಳೆಯರಿಗೆ ಅರಿಶಿನ-ಕುಂಕುಮ ವಿತರಿಸುವುದರ ಮೂಲಕ ರೈತರನ್ನು ಸದೃಢಗೊಳಿಸಲು ಸಾಧ್ಯವಾಯಿತೆ ಎಂದು ಅವರು ಪ್ರಶ್ನಿಸಿದರು. 

Advertisement

ಶಕ್ತಿ ಪ್ರದರ್ಶನ ಹೌದು: ಡಿಸೆಂಬರ್‌ 23ರಂದು ಬೈರಮಂಗಲದಲ್ಲಿ ತಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜನೆ ರಾಜಕೀಯ ಶಕ್ತಿ ಪ್ರದರ್ಶನವೂ ಹೌದು. ಆದರೆ, ಅದಕ್ಕಿಂತ ಹೆಚ್ಚಾಗಿ ಆ ಭಾಗದ ಜನಕ್ಕೆ ವೈದ್ಯಕೀಯ ಸೇವೆ ತೀರಾ ಅಗತ್ಯವಿದೆ. ಹೀಗಾಗಿ ಸ್ಪಂದಿಸುತ್ತಿರುವುದಾಗಿ ಎ.ಮಂಜು ಸ್ಪಷ್ಟಪಡಿಸಿದರು.

ಈ ವೇಳೆ ಬೈರಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಿ.ರಾಮಯ್ಯ, ಜಿಪಂ ಸದಸ್ಯ ಮಂಜುನಾಥ್‌, ಬಿಡದಿ ಪುರಸಭೆಯ ಉಪಾಧ್ಯಕ್ಷ ಸಿ.ಉಮೇಶ್‌, ಸದಸ್ಯ ಬಿ.ಎಂ.ರಮೇಶ್‌ ಕುಮಾರ್‌, ಪ್ರಮುಖರಾದ ಶೇಷಪ್ಪ, ಸೋಮೇಗೌಡ, ಶಿವರಾಮಯ್ಯ, ಹೆಜ್ಜಾಲ ಶಾಂತಕುಮಾರ್‌, ಯೋಗಾನಂದ ಭಾಗವಹಿಸಿದ್ದರು. 

ಶನಿವಾರ ಆರೋಗ್ಯ ಶಿಬಿರ: ಡಿಸೆಂಬರ್‌ 23 ರಂದು ತಾಲೂಕಿನ ಬಿಡದಿ ಹೋಬಳಿಯ ಬೈರಮಂಗಲದಲ್ಲಿ ರಾಷ್ಟ್ರಕವಿ ಕುವೆಂಪು, ವರನಟ ಡಾ.ರಾಜಕುಮಾರ್‌ ಸಮಾನ ಮನಸ್ಕರ ಸಮಿತಿ ಮತ್ತು ಪೂಜಾರಿ ಪಾಳ್ಯ ಜನಸೇವಾ ಟ್ರಸ್ಟ್‌ ವತಿಯಿಂದ ಆಚರಿಸುತ್ತಿರುವ ಮೊದಲನೇ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೃಹತ್‌ ಆರೋಗ್ಯ ತಪಾಸಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ಎ.ಮಂಜು ತಿಳಿಸಿದ್ದಾರೆ.

ಸಿಎಂ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಾರೆ!

ಜನವರಿ 3ರಂದು ಚನ್ನಪಟ್ಟಣ ಮತ್ತು ಮಾಗಡಿ ಕ್ಷೇತ್ರಗಳಲ್ಲಿ ಸಿಎಂ ಸಿದ್ದರಾಮಯ್ಯ ಪ್ರವಾಸ ಕೈಗೊಂಡು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಎ.ಮಂಜು, ನಾಲ್ಕೂವರೆ ವರ್ಷದ ನಂತರ ಸಿಎಂ ಸಿದ್ದರಾಮಯ್ಯ ತಮ್ಮ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಾರೆ.

ಇಲ್ಲಿಯವರೆಗೂ ಅವರು ಕೇವಲ ವಿಧಾನಸೌಧ ಮತ್ತು ಬೆಂಗಳೂರಿನಲ್ಲೇ ಕಾಲ ಕಳೆಯುತ್ತಿದ್ದರು. ಈಗ ರಾಜ್ಯ ಸುತ್ತುತ್ತಿದ್ದಾರೆ ಎಂದು ಟೀಕಿಸಿದರು. ಮಾಗಡಿಗೆ ಯಾವ ವಿಶೇಷ ಅನುದಾನವೂ ಬಂದಿಲ್ಲ. ಅಭಿವೃದ್ಧಿ ಪ್ರಾಧಿಕಾರದ ಹಣದಲ್ಲೇ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಈಗಾಗಲೇ ಈ ಕಾಮಗಾರಿಗಳಿಗೆ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೇ ಪೂಜೆ ಮಾಡಿಯಾಗಿದೆ, ಸಿಎಂ ಮತ್ತೆ ಅದೇ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದಾರೆ. ಬಾಕಿ ಉಳಿದಿರುವ ಕಾಮಗಾರಿಗಳಿಗೆ ಅಧಿಕಾರಿಗಳ ಮೇಲೆ ಒತ್ತಡ ತಂದು ಸಿಎಂ ಉದ್ಘಾಟಿಸುತ್ತಿದ್ದಾರೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next