Advertisement

ಕಾಂಗ್ರೆಸ್‌ ಪಕ್ಷದ ಅಂತಿಮ ದಾಳ ರಾಹುಲ್‌ ಆಯ್ಕೆ!

04:24 AM Dec 05, 2017 | |

ರಾಹುಲ್‌ ಗಾಂಧಿ ಕಾಂಗ್ರೆಸ್‌ ನಾಯಕತ್ವ ಹೊರುತ್ತಿರುವುದರಿಂದ ಬಿಜೆಪಿಯ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಹೆಚ್ಚು ಅಂದರೆ ಇವರ ಪದೋನ್ನತಿಯು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ಕಾಡುತ್ತಿದ್ದ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಸಾಧ್ಯತೆ ತಳ್ಳಿಹಾಕಲಾಗದು. 

Advertisement

ಸೋನಿಯಾ ಗಾಂಧಿಯವರು ಕಾಂಗ್ರೆಸ್‌ ಪಾರ್ಟಿಯ ಅಧ್ಯಕ್ಷರಾಗಿ 18 ವರ್ಷಗಳ ಸುದೀರ್ಘ‌ ಅವಧಿಯ ತರುವಾಯ ಈ ಹೊಣೆಯನ್ನು ತಮ್ಮ ಸುಪುತ್ರ ರಾಹುಲ್‌ ಗಾಂಧಿಯವರಿಗೆ ಹಸ್ತಾಂತರಿಸುತ್ತಿದ್ದಾರೆ. ಹೊಸ ಅಧ್ಯಕ್ಷರಾಗಿ ರಾಹುಲ್‌ರ ಆಯ್ಕೆಯು ಔಪಚಾರಿಕವೆಂದು ತಿಳಿದಿರುವ ಕಾರಣ ಈ ಬೆಳವಣಿಗೆಯು ರಾಜಕೀಯ ವಲಯದಲ್ಲಾಗಲೀ ಮತ್ತು ಪಕ್ಷದಲ್ಲಾಗಲೀ ಅಥವಾ ಸಾರ್ವಜನಿಕ ವಲಯದಲ್ಲಾಗಲೀ ಯಾವುದೇ ಸಂಚಲನವನ್ನು ಸೃಷ್ಟಿಸಲು ವಿಫಲವಾಗಿದೆ. 

2012ರಿಂದಲೂ ರಾಹುಲ್‌ರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಕೂಗಿತ್ತು. ಅಷ್ಟೇಕೆ ಅಂದಿನ ಪ್ರಧಾನಿ ಸಿಂಗ್‌ ಅವರಿಗೆ ಮುಜುಗರವಾಗುವಂತೆ “ರಾಹುಲ್‌ ಪ್ರಧಾನಿ ಯಾಗಲು ಇದು ಸೂಕ್ತ ಸಮಯ’ ಎನ್ನಲು ಕಾಂಗ್ರೆಸ್ಸಿಗರು ಹಿಂಜರಿಯುತ್ತಿರಲಿಲ್ಲ. ಇವರೆಲ್ಲ ಗಾಂಧಿ ಕುಆಟುಂಬಕ್ಕೆ ಸ್ವಾಮಿ ನಿಷ್ಠೆಯನ್ನು ತೋರಿಸುವ ಪರಿ ಈಗಿನದ್ದಲ್ಲ. ಇಂದಿರಾರ ಕಾಲದಿಂದಲೂ ನಡೆದುಕೊಂಡು ಬಂದಿದೆ ಈ ಸಂಸ್ಕೃತಿ. 

ಇನ್ನೇನು ರಾಹುಲ್‌ ಗಾಂಧಿಯವರು ಕಾಂಗ್ರೆಸ್‌ ಅಧ್ಯಕ್ಷರಾದರು ಎಂದು ಸುದ್ದಿ ಆರಂಭವಾಗುತ್ತಿದ್ದ ಹಿಂದೆಯೇ ಸಮಯ ಅದಕ್ಕೆ ಪಕ್ವವಾಗಿಲ್ಲ ಎಂದು ಮುಂದೂಡಲಾಗುತ್ತಿತ್ತು. ಶ್ರೀಮತಿ ಸೋನಿಯಾ ಅನಾರೋಗ್ಯದಿಂದ ಇರುವ  ಕಾರಣ ಜವಾಬ್ದಾರಿ ಹಸ್ತಾಂತರ ಅನಿವಾರ್ಯವಾಗಿತ್ತು. 

ನರೇಂದ್ರ ಮೋದಿಯವರ ಮೇಲೆ ತಮ್ಮ ವಾಗ್ಧಾಳಿ ಮೂಲಕ ತಾವು ಮೋದಿಗೆ ಪರ್ಯಾಯ ಎಂದು ಅಭಿಪ್ರಾಯ ರೂಪಿಸುವ ಯತ್ನ ನಡೆಸುತ್ತಿದ್ದಾರೆ ರಾಹುಲ್‌ ಗಾಂಧಿ.  ರಾಹುಲ್‌ ಬಿಜೆಪಿಯ ಸಾಮಾಜಿಕ ತಾಣದ ಪ್ರಚಾರಕ್ಕೆ ಸಡ್ಡು ಹೊಡೆಯುತ್ತಿದ್ದಾರೆ ಎಂದು ಖರೀದಿಸಿದ ಲೈಕ್‌ಗಳ ಮೂಲಕ ಬಿಂಬಿಸಲಾಯಿತು. ಅಮೆರಿಕ ಪ್ರವಾಸ ಕೈಗೊಂಡು ಅಲ್ಲಿನ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿ “ವಂಶಪಾರಂಪರ್ಯ ರಾಜಕೀಯ ಭಾರತದಲ್ಲಿ ವಾಸ್ತವ. ನಾನು ಕೂಡ ಅದರಲ್ಲಿ ಒಬ್ಬ’ ಎಂದು ಹೇಳಿಕೆ ನೀಡಿದರು ರಾಹುಲ್‌. ಆ ಮೂಲಕ ಅವರದ್ದು ಸ್ವವಿಮರ್ಶೆಯನ್ನು ಪ್ರಾಮಾಣಿಕರಾಗಿ ಮಾಡಿಕೊಳ್ಳುವ ವ್ಯಕ್ತಿತ್ವ ಎಂದು ಬಿಂಬಿಸುವ ಕಸರತ್ತು ನಡೆಯಿತು. ಆಕಿಡೋ ಎಂಬ ಮಾರ್ಷಲ್‌ ಆರ್ಟ್ಸ್ ನಲ್ಲಿ ಬ್ಲಾಕ್‌ಬೆಲ್ಟ್ ಗಳಿಸಿದ್ದಾರೆ ಎಂದು ಅವರು ತರಬೇತಿ ಪಡೆಯುತ್ತಿರುವ ಚಿತ್ರಗಳನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಲಾಯಿತು.  ನರೇಂದ್ರ ಮೋದಿಯವರನ್ನು ಎದುರಿಸಲು ಸಾಮರ್ಥ್ಯವಿರುವ ನಾಯಕ ರಾಹುಲ್‌ ಹಾಗೂ ಅವರದ್ದು ಯುವಕರಿಗೂ ಮೆಚ್ಚುಗೆಯಾಗುವ ವ್ಯಕ್ತಿತ್ವ ಎಂದು ಚಿತ್ರಿಸಲು ತೆರೆಯ ಹಿಂದೆ ಸಾಕಷ್ಟು ಬೆವರು ಸುರಿಸಲಾಗುತ್ತಿದೆ.  ಗುಜರಾತ್‌ ಚುನಾವಣೆಯ ಪ್ರಚಾರ ಆರಂಭವಾದ ಸಂದರ್ಭ ದಲ್ಲಿಯೇ ಅಧ್ಯಕ್ಷ ಸ್ಥಾನ ಬದಲಾವಣೆಯ ಘೋಷಣೆ ಕೈಗೊಂಡಿದ್ದು, ರಾಹುಲ್‌ ಕಠಿಣವಾದ ಸವಾಲನ್ನು ಸ್ವೀಕರಿಸುವ ಶಕ್ತಿ ವಿಶ್ವಾಸವಿದೆ ಎಂದು ಜನರಿಗೆ ಮನದಟ್ಟು ಮಾಡುವ ಕಾಂಗ್ರೆಸ್‌ನ ಕಸರತ್ತಿನ ಭಾಗ ಎಂದರೆ ತಪ್ಪಾಗಲಾರದು. 

Advertisement

 ಕಾಂಗ್ರೆಸ್‌ ಪಾರ್ಟಿಗೆ ಗಾಂಧಿ ಹೆಸರು ಅತ್ಯಗತ್ಯ. 1984ರಲ್ಲಿ ಇಂದಿರಾಗಾಂಧಿಯವರ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಅಂದು ಕೇವಲ ಲೋಕಸಭಾ ಸದಸ್ಯರಾಗಿದ್ದ ರಾಜೀವ್‌ ಗಾಂಧಿಯವರನ್ನು ಪ್ರಧಾನಿಪಟ್ಟಕ್ಕೆ ತಂದು  ಕೂಡಿಸಿದರು. ರಾಜೀವ್‌ ಗಾಂಧಿಯವರು ಶ್ರೀಪೆರಂಬದೂರಿನಲ್ಲಿ ಬಾಂಬ್‌ ಸ್ಫೋಟಕ್ಕೆ ಬಲಿಯಾದ ನಂತರ ಸೋನಿಯಾ ಗಾಂಧಿಯ
ವರನ್ನು ಕಾಂಗ್ರೆಸ್‌ ನಾಯಕತ್ವಕ್ಕೆ ದುಂಬಾಲು ಬೀಳಲಾಯಿತು. ಆದರೆ, ಸೋನಿಯಾ ಗಾಂಧಿಯವರು ತಿರಸ್ಕರಿಸಿದ ಕಾರಣ 7 ವರ್ಷಗಳ ಕಾಲ ಗಾಂಧಿಯೇತರ ಕುಟುಂಬದ ನಾಯಕರು ಕಾಂಗ್ರೆಸ್‌ ಅಧ್ಯಕ್ಷರಾದರು.  ಆದರೆ ಒಮ್ಮೆ ಸೋನಿಯಾ ಗಾಂಧಿ ಯವರು ರಾಜಕೀಯ ಪ್ರವೇಶ ಮಾಡಿದ ಕೂಡಲೆ ಅಂದಿನ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಸೀತಾರಾಮ್‌ ಕೇಸರಿಯವರನ್ನು ಕಾನೂನು ಬಾಹಿರವಾಗಿ ಪದಚ್ಯುತಗೊಳಿಸಿ 1998ರಲ್ಲಿ ಕಾಂಗ್ರೆಸ್‌ ಸಾರಥ್ಯವನ್ನು ವಹಿಸಿಕೊಂಡರು. ಕಾಂಗ್ರೆಸ್ಸಿಗರು ಗಾಂಧಿ ನಾಮ ಬಲವಿಲ್ಲದೇ, ಆ ಕುಟುಂಬದ ಕೃಪಾಕಟಾಕ್ಷ ವಿಲ್ಲದೇ ಪಕ್ಷವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿಯನ್ನು ತಲುಪಿದ್ದಾರೆ. ಗಾಂಧಿ ಹೆಸರಿನಡಿಯಲ್ಲಿ ಕಾಂಗ್ರೆಸ್ಸಿಗರು ಸುಲಭವಾಗಿ ಒಗ್ಗೂಡುತ್ತಾರೆ. ಹೀಗಾಗಿ ಸೋನಿಯಾ ತರು ವಾಯ ರಾಹುಲ್‌ ಗಾಂಧಿಯವರು ಕಾಂಗ್ರೆಸ್‌ ನಾಯಕತ್ವದ ಹೊಣೆ ಹೊರುತ್ತಿರುವುದು ಆಶ್ಚರ್ಯದ ಸಂಗತಿಯಲ್ಲ. ಇದೊಂದು ಅನಿವಾರ್ಯವಾಗಿದೆ. 

ಬಿಜೆಪಿಯ ವಿರುದ್ಧ ಕೆಂಡ ಕಾರುತ್ತಿರುವ ಶಕ್ತಿಗಳು ದೇಶದಲ್ಲಿ ನರೇಂದ್ರ ಮೋದಿಯವರಿಗೆ ಪರ್ಯಾಯ ನಾಯಕತ್ವ ವಿಲ್ಲದೆ ಕುಗ್ಗಿ ಹೋಗಿದ್ದವು. ಇವರು ಭರವಸೆ ಇಟ್ಟಿದ್ದ ಅರವಿಂದ್‌ ಕೇಜ್ರಿವಾಲ್‌ ಬಹು ಬೇಗನೆ ನೀರಿನ ಗುಳ್ಳೆಯಂತೆ ಒಡೆದು ಹೋದರು. ಈಗ ರಾಹುಲ್‌ ಇವರಿಗೆ ಕಡೆಯ ಆಸರೆ ಯಾಗಿರುವುದು ಕಟುಸತ್ಯ. ಈ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಇವರು ಮುಂದಿನ ದಿನ
ಗಳಲ್ಲಿ ಪ್ರಬಲ ಶಕ್ತಿಯಾಗಿ ಬೆಳೆಯುತ್ತಾರೆ ಎಂದು ವಾಖ್ಯಾನಕ್ಕೆ ಮುಂದಾಗಿರುವುದು. ಪ್ರಧಾನಿ ನರೇಂದ್ರ ಮೋದಿ ಮತ್ತು 
ಅಮಿತ್‌ ಶಾ ಜೋಡಿಯ ಬಿಜೆಪಿ ಎಲ್ಲಾ ಬೆಳವಣಿಗೆಗಳನ್ನು ನಿರಮ್ಮಳವಾಗಿ ನೋಡುತ್ತಿದೆ. 14 ರಾಜ್ಯಗಳಲ್ಲಿ ಏಕಾಂಗಿ
ಯಾಗಿ ಸರ್ಕಾರ ಮತ್ತು 5 ರಾಜ್ಯಗಳಲ್ಲಿ ಮಿತ್ರ ಪಕ್ಷಗಳ ಜೊತೆ ಸರ್ಕಾರ ರಚಿಸಿರುವ ಬಿಜೆಪಿ ಇಂದು ಅತ್ಯಂತ ಪ್ರಬಲವಾದ ಶಕ್ತಿಯಾಗಿ ದೇಶದಲ್ಲಿ ಬೆಳೆದು ನಿಂತಿದೆ. ರೂಪಾಯಿ ಅಪನಗದೀಕರಣ ಮತ್ತು ಜಿ.ಎಸ್‌.ಟಿ.ಯಂಥ ಆರ್ಥಿಕ ಸುಧಾರಣೆಯನ್ನು ಜಾರಿಗೆ ತಂದು ರಾಜಕೀಯ ಇಚ್ಛಾಶಕ್ತಿಯನ್ನು ತೋರಿ ನರೇಂದ್ರ ಮೋದಿಯವರು ಒಬ್ಬ ಗಟ್ಟಿ ವ್ಯಕ್ತಿತ್ವದ ನಾಯಕ ಎಂದು ಬಿಂಬಿತರಾಗಿದ್ದಾರೆ. 

ಶ್ರೀ ರಾಹುಲ್‌ ಗಾಂಧಿ ಕಾಂಗ್ರೆಸ್‌ ನಾಯಕತ್ವ ಹೊರುತ್ತಿ ರುವುದರಿಂದ ಬಿಜೆಪಿಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಹೆಚ್ಚು ಅಂದರೆ ಇವರ ಪದೊನ್ನತಿಯು ತಮ್ಮ ಅಸ್ತಿತ್ವವನ್ನೇ ಕಳೆದು ಕೊಳ್ಳುವ ಭೀತಿ ಕಾಡುತ್ತಿದ್ದ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಸಾಧ್ಯತೆ ತಳ್ಳಿಹಾಕಲಾಗದು.  ರಾಹುಲ್‌ ಅವರು ರಾಜಕೀಯವಾಗಿ ನೆನಪಿನಲ್ಲಿ ಉಳಿಯುವ ಯಾವುದೇ ಸಾಧನೆ ಇಲ್ಲಿಯ ತನಕ ಮಾಡಿಲ್ಲ ಮತ್ತು ಒಬ್ಬ ರಾಜಕೀಯ ಚಾಣಕ್ಯ ಎಂದು ಕರೆಯುವಂಥ ಚತುರತೆಯನ್ನು ತೋರಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಇವರು ಕೈಗೊಳ್ಳುವ ನಿರ್ಧಾರಗಳು ಇವರ ಕಾರ್ಯಕ್ಷಮತೆಗೆ ಮಾನದಂಡವಾಗಲಿದೆ.

ದೇಶದಲ್ಲೆಡೆ ಕಾಂಗ್ರೆಸ್‌ ಪಾರ್ಟಿಗೆ ಪ್ರತಿಕೂಲ ವಾತಾವರಣವಿರುವ ಸಂದರ್ಭದಲ್ಲಿ ನಾಯಕತ್ವ ವಹಿಸಿ ಕೊಂಡಿರುವ ರಾಹುಲ್‌ ತಮ್ಮ ಮುಂದಿನ ದಾರಿ ಹಾಗೂ ಪ್ರಬಲ ಸವಾಲುಗಳನ್ನು ಹೇಗೆ ಎದುರಿಸಿ ಪಕ್ಷವನ್ನು ಮುನ್ನಡೆ ಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಕಾಶ್‌ ಶೇಷರಾಘವಾಚಾರ್‌ ರಾಜ್ಯ ಬಿಜೆಪಿ ಸಹವಕ್ತಾರ

Advertisement

Udayavani is now on Telegram. Click here to join our channel and stay updated with the latest news.