Advertisement

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

01:01 AM Apr 28, 2024 | Team Udayavani |

ಮಂಗಳೂರು: ವಿಪರೀತ ಬೆಲೆ ಏರಿಕೆಯಿಂದಾಗಿ ಜನ ರೋಸಿ ಹೋಗಿದ್ದು, ಕಾಂಗ್ರೆಸ್‌ ಗ್ಯಾರಂಟಿಯಿಂದ ಮನೆ ಬೆಳಗಿದೆ. ದ.ಕ. ಜಿಲ್ಲೆಯಲ್ಲಿ 33 ವರ್ಷಗಳ ಬಿಜೆಪಿಯ ದುರಾಡಳಿತ ಕೊನೆಗೊಳ್ಳಲಿದ್ದು, ಈ ಬಾರಿ ಸುಮಾರು 1.20 ಲಕ್ಷಕ್ಕೂ ಅಧಿಕ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆರ್‌. ಅವರು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಶನಿವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಕುಟುಂಬದ ರೀತಿಯಲ್ಲಿ ಕೆಲಸ ನಿರ್ವಹಿಸಿ ಈ ಚುನಾವಣೆಯನ್ನು ಎದುರಿಸಿದ್ದೆವು. ಚುನಾವಣೆಯ ದಿನ ನಾನು ಪ್ರತೀ ವಿಧಾನಸಭಾ ಕ್ಷೇತ್ರಗಳ ಕೆಲವು ಬೂತ್‌ಗಳಿಗೆ ಭೇಟಿ ನೀಡಿದ್ದೆ. ಇಡೀ ಚುನಾವಣ ಪ್ರಕ್ರಿಯೆಯಲ್ಲಿ ತುಳುನಾಡು ಗೆದ್ದಿದೆ. ಚುನಾವಣೆ ಸಮಯದಲ್ಲಿ ಅಭಿವೃದ್ಧಿ, ಕ್ಷೇತ್ರದ ಸಮಸ್ಯೆಗಳು ಮುನ್ನೆಲೆಗೆ ಬರಬೇಕು, ಆದರೆ ವಿರೋಧ ಪಕ್ಷವು ಕೇವಲ ಅಪಪ್ರಚಾರದಲ್ಲಿ ತೊಡಗಿತ್ತು. ಇದು ಅವರ ಹತಾಶೆ ಮನೋಭಾವ ವ್ಯಕ್ತಪಡಿಸುತ್ತದೆ ಎಂದರು.

ಜನರ ಉತ್ಸಾಹ ಗಮನಿಸಿದರೆ ಜನರು ಬದಲಾವಣೆಯನ್ನು ಬಯಸಿದ್ದು ನಿಜ. ಫಲಿತಾಂಶದ ದಿನ ಇದಕ್ಕೆ ಉತ್ತರ ಸಿಗಲಿದೆ. ಕಾಂಗ್ರೆಸ್‌ ಸಂಸದರ 40 ವರ್ಷಗಳ ಸಾಧನೆ ಮತ್ತು ಬಿಜೆಪಿಯ 33 ವರ್ಷಗಳ ಸಾಧನೆಯನ್ನು ಜನರು ತುಲನೆ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷದ ಸಾಧನೆಯಿಂದಾಗಿ ಬಿಜೆಪಿಗರು ಭ್ರಮ ನಿರಸನಗೊಂಡಿದ್ದಾರೆ. ಚುನಾ ವಣೆಯ ಭಾಷಣದಲ್ಲಿ ನಾವು ಎಂದಿಗೂ ದ್ವೇಷ ಸಾರಲಿಲ್ಲ. ಜಾತಿ-ಧರ್ಮದ ಆಧಾರದಲ್ಲಿ ಎಂದೂ ಮತ ಕೇಳಿಲ್ಲ ಎಂದು ಹೇಳಿದರು.

ಇದು ಆರಂಭವಷ್ಟೇ
ಇದು ಕೇವಲ ಆರಂಭವಷ್ಟೆ. ವಾರದ ವಿಶ್ರಾಂತಿಯ ಬಳಿಕ ಪ್ರತೀ ಬ್ಲಾಕ್‌ ಮಟ್ಟದಲ್ಲಿ ಸಭೆ ನಡೆಸುವ ಮೂಲಕ ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇವೆ. ಬಿಜೆಪಿಯ ಕೆಲವೊಂದು ಕಾರ್ಯಕರ್ತರು ಕಾಂಗ್ರೆಸ್‌ ಸೇರಲು ಬಯಸುತ್ತಿದ್ದಾರೆ. ಸಾಮರಸ್ಯ ಪುನರ್‌ಸ್ಥಾಪನೆ ಮೂಲಕ ಕಾಂಗ್ರೆಸ್‌ನ ಗತವೈಭವ ಮತ್ತೆ ಮರುಕಳಿಸಲಿದೆ ಎಂದು ಪದ್ಮರಾಜ್‌ ಹೇಳಿದರು.

ಪೂಜಾರಿ ಅವರನ್ನು ದುರುಪಯೋಗಪಡಿಸಿಲ್ಲ
ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್‌ ಚೌಟ ಅವರಿಗೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಹರಿಸಿದ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು ಜನಾರ್ದನ ಪೂಜಾರಿ ಅವರೊಡನೆ ನಾನು ಅನೇಕ ವರ್ಷಗಳಿಂದ ಇದ್ದೇನೆ. ಎಂದಿಗೂ ಅವರನ್ನು ರಾಜಕೀಯ ಲಾಭ, ಸ್ವಾರ್ಥಕ್ಕೋಸ್ಕರ ದುರುಪಯೋಗ ಪಡಿಸಿಕೊಂಡಿಲ್ಲ. ಹಿರಿಯರಾದ ಅವರಲ್ಲಿ ಆಶೀರ್ವಾದ ಕೇಳಿದಾಗ ಶುಭ ಹಾರೈಸುವುದು ನಮ್ಮ ಸಂಸ್ಕೃತಿ. ಅದನ್ನು ಅವರು ಮಾಡಿದ್ದಾರೆ ಎಂದರು.

Advertisement

ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್‌, ಮಾಜಿ ಮೇಯರ್‌ ಶಶಿಧರ ಹೆಗ್ಡೆ, ಕಾಂಗ್ರೆಸ್‌ ಮುಖಂಡರಾದ ಸುಭೋದಯ ಆಳ್ವ, ಮೊಹಮ್ಮದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next