ಬೆಳಗಾವಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ರಾಜ್ಯದಲ್ಲಿ 14 ರಿಂದ 17 ಸೀಟುಗಳನ್ನು ಕಾಂಗ್ರೆಸ್ ಗೆಲ್ಲುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.
‘ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಸಚಿವರ ಮಕ್ಕಳಿಗೆ ಟಿಕೆಟ್ ಸಿಕ್ಕಿದ್ದರಿಂದ ಪಕ್ಷಕ್ಕೆ ಅನುಕೂಲವೇ ಆಗಿದೆ. 2019 ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ನಾವು ಹೆಚ್ಚಿನ ಸ್ಥಾನ ಗೆಲ್ಲಲು ಅವಕಾಶ ಇದೆ’ ಎಂದರು.
‘ಕಾಂಗ್ರೆಸ್ ಪಕ್ಷದಲ್ಲಿ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿದ್ದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಈ ಕುರಿತು ಬಿಜೆಪಿಯವರಿಗೆ ಟೀಕಿಸಲು ನೈತಿಕ ಹಕ್ಕಿಲ್ಲ. ಬಿಜೆಪಿಯಲ್ಲಿಯೂ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿದ ಉದಾಹರಣೆಗಳು ಸಾಕಷ್ಟಿವೆ. ಈ ವ್ಯವಸ್ಥೆ ಎಲ್ಲ ಪಕ್ಷಗಳಲ್ಲಿಯೂ ಇದೆ’ ಎಂದರು.
‘ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಇಲ್ಲ. ಈಗಾಗಲೇ ಮಳೆಯೂ ಪ್ರಾರಂಭವಾಗಿದೆ. ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ಪ್ರತಿ ಗ್ರಾಮ ಪಂಚಾಯತ್ ಗೆ ಹೊಸ ಟ್ಯಾಂಕರ್ ಖರೀದಿಸಲು ಸೂಚಿಸಿದ್ದೇವೆ. ಕೆಲವು ಗ್ರಾಪಂಗಳಲ್ಲಿ ಹೊಸ ಟ್ಯಾಂಕರ್ ಕೂಡ ಖರೀದಿಸಿದ್ದಾರೆ. ಇನ್ನುಳಿದವರು ಬಾಡಿಗೆ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ’ ಎಂದರು.
‘ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಸಂಬಂಧ ಈಗಾಗಲೇ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದು ನೀರು ಬಿಡುತ್ತಾರೆ ಎನ್ನುವ ವಿಶ್ವಾಸವಿದೆ. ಹಿಡಕಲ್ ಡ್ಯಾಮ್ ನಿಂದ ಕೃಷ್ಣಾ ನದಿಗೆ ಈಗಾಗಲೇ ಒಂದು ಟಿಎಂಸಿ ನೀರು ಬಿಡಲಾಗಿದೆ. ಸದ್ಯದಲ್ಲೇ ಇನ್ನೊಂದು ಟಿಎಂಸಿ ನೀರು ಬಿಡುಗಡೆಗೊಳಿಸಲಾಗುವುದು’ ಎಂದರು.
‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ನೇಹಾ ಮತ್ತು ಅಂಜಲಿ ಕೊಲೆ ಕೇಸ್ ನಂತಹ ಪ್ರಕರಣಗಳು ಎಲ್ಲಾ ಸರ್ಕಾರದಲ್ಲಿಯೂ ಸಂಭವಿಸಿವೆ. ಇಂತಹ ಘಟನೆಗಳ ಮೇಲೆ ಪೊಲೀಸ್ ಇಲಾಖೆ ಹೆಚ್ಚಿನ ನೀಗಾ ವಹಿಸಬೇಕು’ ಎಂದರು.