Advertisement

Haveri; ಮೋದಿ ಪ್ರಮಾಣ ವಚನ ಸ್ವೀಕರಿಸಿ 3 ತಿಂಗಳಲ್ಲಿ ಕಾಂಗ್ರೆಸ್ ಇಬ್ಬಾಗವಾಗಲಿದೆ: ಬೊಮ್ಮಾಯಿ

01:13 PM Mar 30, 2024 | Team Udayavani |

ಹಾವೇರಿ: ಮೋದಿ ಪ್ರಮಾಣ ವಚನ ಸ್ವೀಕರಿಸಿ ಮೂರು ತಿಂಗಳಲ್ಲಿ ಕಾಂಗ್ರೆಸ್ ಇಬ್ಬಾಗವಾಗಲಿದೆ. ಅದರ ಪರಿಣಾಮ ಕರ್ನಾಟಕದ ಮೇಲೂ ಆಗಲಿದೆ ಎಂದು ಹಾವೇರಿ -ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಮಂತ್ರಿಗಳ ಕುಟುಂಬಸ್ಥರಿಗೆ ಟಿಕೆಟ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಮೊದಲಿನಿಂದಲೂ ಬಂದಿದೆ. ಅದರಲ್ಲೇನು ಆಶ್ವರ್ಯವಿಲ್ಲ. ಆದರೆ ಈ ಬಾರಿ ಇಷ್ಟು ಪ್ರಮಾಣದಲ್ಲಿ ಕುಟುಂಬ ರಾಜಕೀಯ ನಡೆಯಲು ಕಾರಣ ಬೇರೆಯೇ ಇದೆ. ಕಾಂಗ್ರೆಸ್ ನಲ್ಲಿ ಸುಮಾರು ಹತ್ತರಿಂದ ಹನ್ನೆರಡು ಮಂತ್ರಿಗಳಿಗೆ ಸ್ಪರ್ಧಿಸಲು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿತ್ತು. ಆದರೆ ಅವರಿಗೆ ಆರಿಸಿ ಬರುವ ವಿಶ್ವಾಸವಿರಲಿಲ್ಲ. ಹಾಗಾದರೆ ನೀವೇ ಕ್ಯಾಂಡಿಡೇಟ್ ಕೊಡಿ ಎಂದಾಗ ಅನಿವಾರ್ಯವಾಗಿ ಅವರು ತಮ್ಮ ಮಕ್ಕಳು, ಅಣ್ಣ ತಮ್ಮಂದಿರಿಗೆ ಟಿಕೆಟ್ ಕೊಡಿಸಿದ್ದಾರೆ. ಇದರಿಂದ ರಾಜಕೀಯ ಲಾಭ ಆಗಲ್ಲ. ಮೋದಿಗೆ ಮತ ಹಾಕಲು ಜನ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ನವರಿಗೆ ಅನುಕೂಲವಾಗದು ಎಂದು ಹೇಳಿದರು.

ನಾಮಪತ್ರ ಸಲ್ಲಿಕೆಯ ಬಗ್ಗೆ ರವಿವಾರ ತೀರ್ಮಾನ ಮಾಡುತ್ತೇವೆ. ಒಳ್ಳೆಯ ಸಮಯ ನೋಡಿ ನಾಮಿನೇಶನ್ ಮಾಡುತ್ತೇನೆ. ಎರಡು ಸಲ ನಾಮಿನೇಶನ್ ಮಾಡಲಿದ್ದೇನೆ. ನಾನೂ ಸ್ಟಾರ್ ಪ್ರಚಾರಕನಾಗಿದ್ದೇನೆ. ಕೆಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಎರಡನೇ ಹಂತದಲ್ಲೂ ಪ್ರಚಾರ ಮಾಡುತ್ತೇನೆ ಎಂದರು.

ಮಾಜಿ ಸಿಎಂ ಹೆಚ್ ಡಿ ಕೆ ಆಸ್ಪತ್ರೆ ದಾಖಲಾಗಿದ್ದು ಚುನಾವಣೆ ಗಿಮಿಕ್ ಎಂಬ ಕಾಂಗ್ರೆಸ್ ಶಾಸಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಶ್ರೀರಂಗಪಟ್ಟಣದ ಶಾಸಕರೇನು ವೈದ್ಯರಲ್ಲ. ಆರೋಗ್ಯದ ವಿಚಾರಗಳನ್ನು ರಾಜಕಾರಣಕ್ಕೆ ಎಳೆದು ತರುವುದು ಸರಿಯಲ್ಲ. ಅವರು ಚೆನ್ನೈ ಹೋಗಿದ್ದು, ಚಿಕಿತ್ಸೆ ಪಡೆದಿದ್ದಕ್ಕೆ ಎಲ್ಲಾ ಸಾಕ್ಷಿಗಳಿವೆ. ರಾಜಕಾರಣದಲ್ಲಿ ರಾಜಕೀಯ ನೆಲೆಗಟ್ಟಿನಲ್ಲಿ ಹೋರಾಟ ಮಾಡಬೇಕು. ಶ್ರೀರಂಗಪಟ್ಟಣದ ಶಾಸಕರು ಕುಮಾರಸ್ವಾಮಿ ಜೊತೆ ನಿಕಟ ಸಂಬಂಧ ಹೊಂದಿದ್ದವರು. ಆದರೆ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ವೈಯಕ್ತಿಕ ವಿಚಾರ ತರಬಾರದು ಎಂದರು.

ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ದೆ ಮಾಡುತ್ತಾರೆ. ಸುಮಲತಾ ನಿನ್ನೆ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ. ಎಲ್ಲಾ ಸರಿ ಹೋಗುತ್ತದೆ, ಎಲ್ಲವೂ ಸರಿಯಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next