ಬೆಂಗಳೂರು: ದೇಶದಲ್ಲಿ ಆದರಣೀಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿ ಅವರ ಅಲೆ ಇರುವುದನ್ನು ಗುಜರಾತ್ ಅಸೆಂಬ್ಲಿ ಚುನಾವಣೆಯ ಅಭೂತಪೂರ್ವ ಫಲಿತಾಂಶವು ಸಾಬೀತುಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಗುಜರಾತ್ ಫಲಿತಾಂಶವು ಅಭೂತಪೂರ್ವ , ನರೇಂದ್ರ ಮೋದಿಜಿ ಅವರಿಗೆ ಧನ್ಯವಾದ. ರಾವಣ, ಭಸ್ಮಾಸುರ ಎಂದು ಟೀಕಿಸಿದ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಮೋದಿಯವರ ನೇತೃತ್ವದಲ್ಲಿ ದೇಶವು ಸರ್ವತೋಮುಖ ಅಭಿವೃದ್ಧಿ ಸಾಧಿಸುತ್ತಿದೆ. ಅಲ್ಲದೆ ವಿಶ್ವಗುರು ಆಗುವತ್ತ ಮುನ್ನಡೆ ಸಾಧಿಸಿದೆ. ಇದನ್ನು ಗಮನಿಸಿ ಜನತೆ ಬಿಜೆಪಿಗೆ ಮತ್ತೆ ಅಧಿಕಾರ ನೀಡಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.
ಕರ್ನಾಟಕ ರಾಜ್ಯದ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ಸರಕಾರ ರಚಿಸುವುದು ಖಚಿತ. ವಿರೋಧ ಪಕ್ಷದವರು ತಿರುಕನ ಕನಸು ಕಾಣುವುದನ್ನು ಬಿಡಬೇಕು. ಪ್ರಧಾನಿಯವರ ಬಗ್ಗೆ ಸಣ್ಣ ಮಾತನಾಡುವುದನ್ನು ಬಿಟ್ಟು ದೇಶದ ಅಭಿವೃದ್ಧಿಗಾಗಿ ಸರಕಾರಕ್ಕೆ ಬೆಂಬಲ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈಚೆಗೆ ನಡೆದಿದ್ದ ಪಂಚರಾಜ್ಯ ಚುನಾವಣೆಯಲ್ಲೂ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಮತ್ತೆ ಗುಜರಾತ್‍ನಲ್ಲಿ ಗರಿಷ್ಠ ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಪಕ್ಷವು ಅಲ್ಲಿ ಕನಿಷ್ಠ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಆಂತರಿಕ ಜಗಳದಿಂದಾಗಿ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವು ನೆಲಕಚ್ಚುವ ಸ್ಥಿತಿಗೆ ತಲುಪುತ್ತದೆ ಎಂದು ಹೇಳಿದ್ದಾರೆ.