ಕಾರ್ಕಳ: ಕಳೆದ 5 ವರ್ಷದ ಅವಧಿಯಲ್ಲಿ ರಾಜ್ಯ ಕಾಂಗ್ರೆಸ್ ನಡೆಸಿದ ಅಭಿವೃದ್ಧಿ ಕಾರ್ಯಗಳು ಪಕ್ಷಕ್ಕೆ ಶ್ರೀರಕ್ಷೆಯಾಗಲಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಡಾ| ಎಂ. ವೀರಪ್ಪ ಮೊಯ್ಲಿ ಮೇ 9ರಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದ ಕಾಲದಲ್ಲಿ ಸಾಕಷ್ಟು ರೀತಿ ಅಭಿವೃದ್ಧಿ ಕಾರ್ಯ ನಡೆದಿವೆ. ರಸ್ತೆಗಳ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿತ್ತು. ಆದರೆ ಬಿಜೆಪಿ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಬಿಜೆಪಿ ಕೇವಲ ಭರವಸೆ ನೀಡಿದೆ. ಕಳೆದ 5 ವರ್ಷಗಳ ಅವಧಿಯಲ್ಲಿ ಪಕ್ಕದ ಕ್ಷೇತ್ರಗಳ ಅಭಿವೃದ್ಧಿಯನ್ನು ಕಂಡರೆ ಕಾರ್ಕಳದಲ್ಲಿ ಯಾವ ರೀತಿ ಕುಂಠಿತಗೊಂಡಿದೆ ಎಂದು ತಿಳಿಯುತ್ತದೆ ಎಂದರು.
ರಾಜ್ಯದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ 53 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ. 17 ಲಕ್ಷ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ. ಗೇಣಿದಾರರಿಗೆ ಹಕ್ಕುಪತ್ರ ನೀಡಲಾಗಿದೆ. ಮುಂದೆ 1 ಕೋಟಿ ಉದ್ಯೋಗ ಸೃಷ್ಟಿಸುವ ಚಿಂತನೆ ನಡೆಸಲಾಗಿದೆ. ಮನೆ ಮನೆಗೆ ನೀರು, ಹೊಲಹೊಲಗಳಿಗೆ ನೀರು ಪೂರೈಸುವ ಯೋಜನೆಯಿದೆ ಮುಂದಿದೆ. ನೀರಾವರಿಗೆ 58 ಸಾವಿರ ಕೋ. ರೂ. ಖರ್ಚು ಮಾಡಲಾಗಿದೆ. ಹೀಗೆ ಎಲ್ಲ ಆಯಾಮಗಳಲ್ಲಿಯೂ ರಾಜ್ಯವನ್ನು ಸಮೃದ್ಧ ಕರ್ನಾಟಕವನ್ನಾಗಿ ಮಾಡಲಾಗುವುದು ಎಂದರು.
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಯೋಗಿ ಆದಿತ್ಯನಾಥ್ ಅವರು ಪ್ರಚಾರಕ್ಕೆ ಬಂದರೆ ಕಾಂಗ್ರೆಸ್‌ಗೆ ಒಳ್ಳೆಯದಾಗಲಿದೆ. ಕಾಂಗ್ರೆಸ್‌ಗೆ ಬಿಜೆಪಿಯ ಪಾಠ ಅಗತ್ಯವಿಲ್ಲ ಎಂದರು.
ಗೋಷ್ಠಿಯಲ್ಲಿ ಅಭ್ಯರ್ಥಿ ಎಚ್. ಗೋಪಾಲ ಭಂಡಾರಿ, ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ, ಜಿಲ್ಲಾ ಉಪಾಧ್ಯಕ್ಷ ಮುನಿಯಾಲ್ ಉದಯ ಶೆಟ್ಟಿ, ವಕ್ತಾರ ಹರ್ಷಾ ಮೊಯ್ಲಿ ಉಪಸ್ಥಿತರಿದ್ದರು.