ದಾವಣಗೆರೆ: ರಾಮನನ್ನು ವಿರೋಧ ಮಾಡುತ್ತಿದ್ದ ಕಾಂಗ್ರೆಸ್ ನವರಿಗೆ ಈಗ ಜ್ಞಾನೋದಯವಾಗಿದೆ. ನಾವು ತಪ್ಪು ಮಾಡಿದ್ದೇವೆ ಎಂದು ಅರಿವಾಗಿದ್ದು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ಕರಸೇವಕರ ಮೇಲೆ ಗುಂಡು ಹಾರಿಸಿದವರು, ಅವರ ಮೇಲೆ ಗುಂಡಾ ಕಾಯ್ದೆ ಹಾಕಿದವರು, ರಾಮನ ಹುಟ್ಟಿನ ಬಗ್ಗೆ ದಾಖಲೆ ಕೇಳಿದವರು ಈ ಕಾಂಗ್ರೆಸ್ ನವರು. ರಾಮ ಮಂದಿರ ಟ್ರಸ್ಟ್ ಬಗ್ಗೆ ಅನುಮಾನ ಪಟ್ಟವರು ಅಲ್ಲೇ ಏಕೆ ರಾಮ ಮಂದಿರ ಕಟ್ಟಬೇಕು ಎಂದು ಕೇಳಿದವರು ಕಾಂಗ್ರಸ್ಸಿಗರು. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಮನ ಜಪ ಮಾಡುತ್ತಿದ್ದಾರೆ. ಬದಲಾಗಿ ಬಿಜೆಪಿ ರಾಮ ಮಂದಿರದ ರಾಜಕಾರಣ ಮಾಡುತ್ತದೆ ಎಂದು ಹೇಳುತ್ತಿದ್ದಾರೆ ಎಂದರು.
ಪ್ರಧಾನಿಯವರನ್ನು ಆಹ್ವಾನ ಮಾಡಿದ್ದಾರೆ, ಉದ್ಘಾಟನೆ ಅವರು ಮಾಡುತ್ತಾರೆ. ನಿಮ್ಮನ್ನು ಕೂಡ ಕರೆದಿದ್ದಾರೆ. ನೀವು ಏಕೆ ಹೋಗುವುದಿಲ್ಲ? ಜ.22 ರಂದು ಹೋದರೆ ವೋಟ್ ಬ್ಯಾಂಕ್ ಹೋಗುತ್ತದೆ ಎನ್ನುವ ಭಯ ಕಾಂಗ್ರೆಸ್ ಗೆ ಇದೆ. ಟೋಪಿ ಹಾಕಿಕೊಂಡು ಬಿರಿಯಾನಿ ತಿನ್ನಲು ಜಮೀರ್ ಮನೆಗೆ ಹೋಗುತ್ತಾರೆ, ಆದರೆ ರಾಮ ಮಂದಿರ ಉದ್ಘಾಟನೆ ಮಾಡಲು ಮಾತ್ರ ಸಮಯ ಇಲ್ವ ಎಂದು ಪ್ರಶ್ನಿಸಿದರು.
ಈ ಬಾರಿ ಲೋಕಸಭೆಯಲ್ಲಿ ಬಿಜೆಪಿ 400 ಸ್ಥಾನಗಳು ಬಂದೇ ಬರುತ್ತದೆ. ದೇಶದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತದೆ. ಹಿಂದೂಗಳ, ರೈತರ ಶಾಪದಿಂದ ಧೂಳಿಪಟವಾಗುತ್ತದೆ ಎಂದು ರೇಣುಕಾಚಾರ್ಯ ಹೇಳಿದರು.
ಶಿವಮೊಗ್ಗದಲ್ಲಿ ಯುವನಿಧಿ ಯೋಜನೆ ಚಾಲನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮಾನದಂಡ ಬಿಟ್ಟು ಕಾರ್ಯಕ್ರಮ ಮಾಡಿದ್ದಾರೆ. ಅವರು ಹಾಕಿದ ನಿಯಮ ಪಾಲನೆ ಮಾಡದೆ ಅಲ್ಲಿ ಅರ್ಹರಿಲ್ಲದ ಕಾಲೇಜು ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆಸಿದ್ದಾರೆ. ಬಸ್ ವ್ಯವಸ್ಥೆ ಮಾಡಿ ಕಾಲೇಜು ವಿದ್ಯಾರ್ಥಿಗಳನ್ನು ಒತ್ತಾಯಪೂರ್ವಕವಾಗಿ ಕರೆದಿದ್ದಾರೆ. ಅವರಿಗೆ ಸರಿಯಾಗಿ ಊಟ ಕೊಟ್ಟಿಲ್ಲ ಸರಿಯಾದ ವ್ಯವಸ್ಥೆಯೂ ಮಾಡಿಲ್ಲ. ಅಲ್ಲಿ ಬಂದ ವಿದ್ಯಾರ್ಥಿಗಳು ರಾಮ ಮತ್ತು ಮೋದಿ ಜಪ ಮಾಡಿದ್ದಾರೆ. ಸಂಸದ ರಾಘವೇಂದ್ರ ಮಾತನಾಡಿದ ನಂತರ ಖುರ್ಚಿ ಖಾಲಿ ಇದ್ದವು. ಸಿಎಂ ಖಾಲಿ ಕುರ್ಚಿಗೆ ಭಾಷಣ ಮಾಡಿದ್ದಾರೆ ಎಂದು ಜರಿದರು.
ನಾವು ಗ್ಯಾರಂಟಿ ಯೋಜನೆಗಳ ವಿರೋಧಿಗಳಲ್ಲ. ಸರ್ಕಾರ ಅದನ್ನು ಸರಿಯಾಗಿ ತಲುಪಿಸಲು ವಿಫಲಗೊಂಡಿದೆ. ನಾವು ರೈತರಿಗೆ, ರೈತ ಮಕ್ಕಳಿಗೆ ಕೊಟ್ಟ ಯೋಜನೆ ಎಲ್ಲ ರದ್ದು ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.