Advertisement

ಕಾಂಗ್ರೆಸ್‌ ನೀರಿಲ್ಲದ ಮೀನು: ಮೋದಿ

06:00 AM May 06, 2018 | Team Udayavani |

ಮಂಗಳೂರು: ದೇಶದ ಹೆಚ್ಚಿನ ಕಡೆ ಅಧಿಕಾರವಿಲ್ಲದ ಕಾಂಗ್ರೆಸ್‌ ನೀರಿಲ್ಲದ ಮೀನಿನಂತೆ ಚಡಪಡಿಸುತ್ತಿದೆ. ಜನತೆ ಈ ಎಲ್ಲ ಅಂಶಗಳನ್ನು ಅರಿತು ಕಾಂಗ್ರೆಸ್‌ ವಿರುದ್ಧ ಮತ ಚಲಾಯಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಕೇಂದ್ರ ಮೈದಾನದಲ್ಲಿ ಶನಿವಾರ ಬಿಜೆಪಿ ವತಿಯಿಂದ ನಡೆದ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಇಂತಹ ಅಭೂತಪೂರ್ವ ಜನ ಸ್ತೋಮವನ್ನು ಕಂಡು ಹರ್ಷಿತನಾಗಿದ್ದೇನೆ. ನಿಮ್ಮೆಲ್ಲರಿಗೂ ಅಂತರಾಳದ ಕೃತಜ್ಞತೆಗಳು ಎಂದರು.

Advertisement

ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ಅವರು ಕಾಂಗ್ರೆಸ್‌ ಸರಕಾರ ಎಲ್ಲ  ಕ್ಷೇತ್ರಗಳಲ್ಲಿಯೂ ಭ್ರಷ್ಟಾಚಾರವನ್ನೇ ನಡೆಸುತ್ತಿದೆ. ಇದು ಕಮಿಷನ್‌ ಕೇಂದ್ರೀಕೃತ, ಮಾಫಿಯಾಗಳ ಪ್ರವರ್ತಿತ, ಮಧ್ಯವರ್ತಿಗಳ ಕೂಟದ ಸರಕಾರವಾಗಿದೆ. ಪ್ರಗತಿ ಕಾರ್ಯಗಳೆಲ್ಲ ಸ್ಥಗಿತಗೊಂಡು ಜನತೆ ಪರದಾಡು ವಂತಾಗಿದೆ. ಜನರ ಭಾವನೆಗಳಿಗೆ ಬೆಲೆಯೇ ಇಲ್ಲದ, ಯಾವುದೇ ಜನಪರ ಸ್ಪಂದನವಿಲ್ಲದ ಕಾಂಗ್ರೆಸ್‌ಗೆ ಇನ್ನು ಇಲ್ಲಿ ಅಸ್ತಿತ್ವವಿಲ್ಲ. ದೇಶದ ಎಲ್ಲೆಡೆ ಕಾಂಗ್ರೆಸ್‌ ಪಕ್ಷವನ್ನು ಜನತೆ ತಿರಸ್ಕರಿಸಿದ್ದಾರೆ. ಕರ್ನಾಟಕದಲ್ಲಿಯೂ ಇದೇ ಪರಿಸ್ಥಿತಿ ಕಾಂಗ್ರೆಸ್‌ಗೆ ಬರಲಿದೆ. ಸೋಲಿನ ಭಯದಿಂದ ಕಂಗೆಟ್ಟಿರುವ ಕಾಂಗ್ರೆಸ್‌ ಪಕ್ಷ ಈಗ ಈ ಬಾರಿ ಅತಂತ್ರ ವಿಧಾನಸಭಾ ಫಲಿತಾಂಶ ಬರಲಿದೆ ಎಂದು ಹೇಳಿಕೊಳ್ಳುವ ಮಟ್ಟಕ್ಕೆ ಬಂದಿದೆ. ಇದನ್ನು ಜನತೆ ನಂಬಬಾರದು. ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು. 

ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಮಾಡಿರುವ ಎಲ್ಲ ಪಾಪಗಳಿಗೆ ಮೇ 12ರಂದು ಮತದಾರರು ಶಿಕ್ಷೆ ನೀಡಲಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪ್ರಜಾತಂತ್ರದಲ್ಲಿ ಒಂದೇ ಕುಟುಂಬದ ಪರಮಾಧಿಕಾರ ವಿರುವುದು ಅಪಾಯಕಾರಿ. ನೆಹರೂ ಕುಟುಂಬ ದೇಶದ ಎಲ್ಲ ಅಧಿಕಾರಗಳನ್ನು ನಡೆಸಿಕೊಂಡು ಬರುತ್ತಾ ಅಭಿವೃದ್ಧಿ ಯನ್ನು ಮೂಲೆಗುಂಪನ್ನಾಗಿಸಿದೆ. 


ವಿರೋಧವೇ ಕಾರ್ಯವೈಖರಿ
ಕಾಂಗ್ರೆಸ್‌ ಪಕ್ಷಕ್ಕೆ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸುವುದೇ ಕಾರ್ಯವೈಖರಿಯಾಗಿದೆ ಎಂದು ಪ್ರಧಾನಿ ಮೋದಿ ಟೀಕಿಸಿದರು. ಪ್ರತಿ ವಿಚಾರಕ್ಕೂ ಮೋದಿಯೇ ಕಾರಣ ಎನ್ನುವ ಮಟ್ಟಕ್ಕೆ ಕಾಂಗ್ರೆಸ್‌ ತಲುಪಿದೆ. ಸರ್ಜಿಕಲ್‌ ದಾಳಿ ನಡೆದರೆ ಸೇನೆ ಕಾರಣ. ಅಪನಗದೀಕರಣ ನಡೆದರೆ ರಿಸರ್ವ್‌ ಬ್ಯಾಂಕ್‌ ಕಾರಣ ಮತ್ತು ಎಲ್ಲದಕ್ಕೂ ಮೋದಿ ಕಾರಣ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಸ್ವತ್ಛತಾ ಅಭಿಯಾನ, ಬಯಲು ಶೌಚಾಲಯ ಮುಕ್ತ ಯೋಜನೆ ಮೂಲಕ ಗ್ರಾಮೀಣ ಮಹಿಳೆಯರಿಗೆ ನೆರವು ಯೋಜನೆಗಳನ್ನೂ ಟೀಕಿಸುವ ಕಾಂಗ್ರೆಸ್‌ನ ವಿಕೃತಿಗೆ ಏನನ್ನಬೇಕು ಎಂದು ಜನತೆಯನ್ನು ಕೇಳಿದರು.

ಈಗ ವಿದ್ಯುನ್ಮಾನ ಮತಯಂತ್ರಗಳನ್ನು ಟೀಕಿಸುವ ಹಂತಕ್ಕೆ ಕಾಂಗ್ರೆಸ್‌ ತಲುಪಿದೆ. ಈ ಯಂತ್ರಗಳನ್ನು ಕೂಡ ಮೋದಿ ತಿರುಚಿದ್ದಾರೆ ಎಂದು ಹೇಳುತ್ತಿದ್ದಾರೆ. ಗೆದ್ದರೆ ಇವಿಎಂ ಸಮ್ಮತ ಸೋತರೆ ಇವಿಎಂ ಸರಿಯಿಲ್ಲ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಇಂತಹ ಪಕ್ಷಕ್ಕೆ ಜನತೆ ಸರಿಯಾದ ಪಾಠವನ್ನು ಕಲಿಸುತ್ತಿದ್ದಾರೆ ಎಂದರು. 

ಯಾವುದೇ ಜನಪರ ಯೋಜನೆಗಳು ಕರ್ನಾಟಕದಲ್ಲಿ ಕಾಂಗ್ರೆಸ್‌ ಅವಧಿಯಲ್ಲಿ ಜಾರಿಯಾಗಿಲ್ಲ. ಕೇಂದ್ರ ಬಿಡುಗಡೆಗೊಳಿಸಿದ ವಿವಿಧ ಅನುದಾನಗಳ ಸದ್ಬಳಕೆಯನ್ನೂ ಮಾಡುತ್ತಿಲ್ಲ. ಕೇಂದ್ರದ ಮಹತ್ವದ ಯೋಜನೆಯಾದ ಗೃಹ ನಿರ್ಮಾಣದ ಅನುದಾನವನ್ನು ಕೂಡ ಬಳಸದೆ ಬಡಜನತೆಗೆ ರಾಜ್ಯ ಸರಕಾರ ಅನ್ಯಾಯ ಮಾಡಿದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನಿರಂತರವಾಗಿ ಜನಪರ ಯೋಜನೆಗಳನ್ನು ನಡೆಸುತ್ತಿದೆ. ಬಡ ಮಾತೆಯರು ಕಟ್ಟಿಗೆ ಬಳಸಿ ಒಲೆ ಉರಿಸುವ ಪರಿಸ್ಥಿತಿಯನ್ನು ಕಂಡು ಅದರ ನಿವಾರಣೆಗಾಗಿ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ನೀಡುತ್ತಿದೆ. ತಿಂಗಳಿಗೆ ಒಂದರಂತೆ ಇದ್ದ ಸಿಲಿಂಡರನ್ನು 12ಕ್ಕೆ ಏರಿಸಲಾಗಿದೆ. ಪುಟ್ಟ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ಮರಣ ದಂಡನೆ ವಿಧಿಸುವ ಕಾನೂನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.

Advertisement

ಕೆಟ್ಟ ಸಂಪ್ರದಾಯ
ಅಪರಾಧಿಗಳಿಗೆ ಕಾನೂನು ಸಮ್ಮತವಾದ ಶಿಕ್ಷೆ ನೀಡಬೇಕೇ ಹೊರತು ಅವರ ಮತಧರ್ಮವನ್ನು ಆಧರಿಸಿ ಈ ಪ್ರಮಾಣವನ್ನು ಸರಕಾರ ನಿರೂಪಿಸುವ ಕೆಟ್ಟ ಸಂಪ್ರದಾಯ ಕಾಂಗ್ರೆಸ್‌ನಿಂದ ಆರಂಭವಾಗಿದೆ ಎಂದು ಮೋದಿ ಆರೋಪಿಸಿದರು. ಇದು ಪ್ರಜಾತಂತ್ರಕ್ಕೆ ಮಾರಕವಾಗಿದೆ. ಕಾಂಗ್ರೆಸ್‌ನ ಇಂತಹ ಪ್ರವೃತ್ತಿಯಿಂದಾಗಿಯೇ ಕರ್ನಾಟಕದಲ್ಲಿ ಮುಗ್ಧ ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಮುಖ್ಯಮಂತ್ರಿಯವರೇ, – ಮುಂದಿನ ಮೇ 15ರಿಂದ ಕರ್ನಾಟಕದಲ್ಲಿ ಬಿಜೆಪಿಯ ಆಡಳಿತವಿರುತ್ತದೆ. ಎಲ್ಲ ಅಪರಾಧಿಗಳಿಗೂ ತಕ್ಕ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಇದು ನಿಮ್ಮ ಗಮನಕ್ಕೆ ಬರಲಿ ಎಂದು ಎಚ್ಚರಿಕೆ ನೀಡಿದರು. ಜೆಡಿಎಸ್‌ ಸ್ಪರ್ಧೆ ಲೆಕ್ಕಕ್ಕಿಲ್ಲ ಎಂದಷ್ಟೇ ಹೇಳಿದರು.

ತಲಾಖ್‌ ಎಂಬ ಕೆಟ್ಟ ಸಂಪ್ರದಾಯದಿಂದ ಭಾರತದ ಮುಸ್ಲಿಂ ಮಹಿಳೆಯರು ನಿರಂತರ ಅನ್ಯಾಯಕ್ಕೆ ಮತ್ತು ಶೋಷಣೆಗೆ ಈಡಾಗುತ್ತಿದ್ದಾರೆ. ಈ ಪದ್ಧತಿಯನ್ನು ಕಿತ್ತು ಹಾಕಲು ಬಿಜೆಪಿ ಸರಕಾರ ಸಂಸತ್ತಿನಲ್ಲಿ ಮಸೂದೆಯನ್ನು ಅಂಗೀಕರಿಸಿತು. ಆದರೆ ಈಗ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಬಹುಮತವಿರುವ ಕಾಂಗ್ರೆಸ್‌ ತಡೆ ಹಿಡಿದಿದೆ. ಹಾಗಿದ್ದರೆ ಕಾಂಗ್ರೆಸ್‌ ಸ್ತ್ರೀ ಸಶಕ್ತಿಕರಣಕ್ಕೆ ಸಂಪೂರ್ಣ ವಿರೋಧವೆಂದು ಅರ್ಥವಲ್ಲವೆ ಎಂದು ಪ್ರಧಾನಿ ಪ್ರಶ್ನಿಸಿದರು. ಶರಾಬು, ಭೂಮಿ, ಕೇಬಲ್‌, ವರ್ಗಾವಣೆ ಮಾಫಿಯಾಗಳು ಕಾಂಗ್ರೆಸ್‌ ಸರಕಾರವನ್ನು ನಿಯಂತ್ರಿಸುವುದರಿಂದ ಹೊಸ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದು ಪುನರುಚ್ಚರಿಸಿದರು.

ಕುಟುಂಬದ ಪಕ್ಷ
ಕಾಂಗ್ರೆಸ್‌ ಪಕ್ಷ ಒಂದು ಕುಟುಂಬದ ಪಕ್ಷ ಆಗಿರುವುದರಿಂದ ಕಾಂಗ್ರೆಸ್‌ ವರಿಷ್ಠರು ತಮ್ಮ ವಿರುದ್ಧ ಯಾರಾದರೂ ಧ್ವನಿ ಎತ್ತುವುದನ್ನು ಸಹಿಸುವುದಿಲ್ಲ. ಕರ್ನಾಟಕದಲ್ಲಿ ನಿಜಲಿಂಗಪ್ಪ ಅವರ ಸಹಿತ ಅನೇಕ ನಿದರ್ಶನಗಳಿವೆ. ದೇವರಾಜ ಅರಸ್‌ ಅವರು ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿಯನ್ನು ಗೆಲ್ಲಿಸುವ ಮೂಲಕ ಆಕೆಗೆ ರಾಜಕೀಯ ಪುನರ್ಜನ್ಮ ನೀಡಿದವರು. ಆದರೆ ಅವರು ಇಂದಿರಾ ನಿಲುವನ್ನು ಪ್ರಶ್ನಿಸಿರುವುದಕ್ಕೆ ಅವರನ್ನು ಸಂಪೂರ್ಣ ಕೈ ಬಿಡಲಾಯಿತು. ವೀರೇಂದ್ರ ಪಾಟೀಲರಿಗೂ ಇದೇ ಪರಿಸ್ಥಿತಿ ಬಂತು ಎಂದು ಅವರು ಉಲ್ಲೇಖೀಸಿದರು. 

ಸರ್ದಾರ್‌ ಪಟೇಲ್‌, ಸುಭಾಸ್‌ಚಂದ್ರ ಭೋಸ್‌, ಶಾಸ್ತ್ರಿ, ರಾಜಾಜಿ ಅವರನ್ನು ಕಾಂಗ್ರೆಸ್‌ ಇದೇ ಕಾರಣಕ್ಕೆ ದೂರವಿರಿಸಿತು ಎಂದು ನೆನಪಿಸಿದರು. ಕಾಂಗ್ರೆಸ್‌ನದು ನಿರಂಕುಶ ಚಿಂತನೆ. ಮಂಗಳೂರಿನ ಕರಣ್‌ ಆಚಾರ್ಯ ಎಂಬ ಕಲಾವಿದ ಆಂಜನೇಯನ ಚಿತ್ರ ರಚಿಸಿ ಅದು ರಾಷ್ಟ್ರ ಖ್ಯಾತಿಯನ್ನು ಗಳಿಸಿತು. ಆದರೆ ಇದು ಕೂಡ ಕಾಂಗ್ರೆಸ್‌ಗೆ ಸಹನೆಯಾಗದೆ ಆ ಕಲಾವಿದನನ್ನು ನಿರಂತರವಾಗಿ ಟೀಕಿಸಲಾಯಿತು ಎಂದರು. 

ಸುರಕ್ಷಿತ ಕರ್ನಾಟಕ
ಸುರಕ್ಷಿತ, ಸುಭಿಕ್ಷ ಮತ್ತು ಸುಂದರ ಕರ್ನಾಟಕದ ನಿರ್ಮಾಣವೇ ಬಿಜೆಪಿಯ ಗುರಿಯೆಂದು ಮೋದಿಯವರು ಜನಸಾಗರದ ಪ್ರಚಂಡ ಕರತಾಡನದ ನಡುವೆ ಘೋಷಿಸಿದರು. ಹೆಣ್ಣು ಮಕ್ಕಳು ತಡವಾಗಿ ಬಂದರೆ ಯಾಕೆ ಎಂದು, ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ ಯಾರು ಎಂದು ಮನೆಯ ಹಿರಿಯರು ಪ್ರಶ್ನಿಸುತ್ತಾರೆ. ಇದೇ ಪ್ರಶ್ನೆಯನ್ನು ಗಂಡು ಮಕ್ಕಳಿಗೂ ಕೇಳುವಂತಾಗಬೇಕು. ಒಟ್ಟಿನಲ್ಲಿ ಹೆಣ್ಣು ಮಕ್ಕಳ ಸಶಕ್ತೀಕರಣ ಈ ಮೂಲಕ ಸಾಧ್ಯವಾಗಬೇಕು. ಇಂತಹ ಚಿಂತನೆಯು ಪ್ರಸ್ತುತವಾಗುತ್ತದೆ ಎಂದು ವಿವರಿಸಿದರು. 

ಕೇಂದ್ರ ನೀಡುವ ಒಂದು ರೂಪಾಯಿ ಅನುದಾನ ಪಂಚಾಯತ್‌ ಹಂತಕ್ಕೆ ತಲುಪುವಾಗ ಕೇವಲ 15 ಪೈಸೆಯಂತಾಗುತ್ತದೆ. ಉಳಿದ ಮೊತ್ತ ಮಧ್ಯವರ್ತಿಗಳ ಪಾಲಾಗುತ್ತದೆ ಎಂದು ರಾಜೀವ್‌ ಗಾಂಧಿ ಒಮ್ಮೆ ಹೇಳಿದ್ದರು. ವಿಪರ್ಯಾಸವೆಂದರೆ ಆ ಸಂದರ್ಭದಲ್ಲಿ ಕೇಂದ್ರದಿಂದ ಪಂಚಾಯತ್‌ ತನಕ ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿತ್ತೆಂದು ಪ್ರಧಾನಿ ಲೇವಡಿಗೈದರು. ಕರ್ನಾಟಕದ ಜನತೆಯ ಸಮಗ್ರ ಹಿತರಕ್ಷಣೆಗೆ ಎಲ್ಲ ಅನುದಾನಗಳನ್ನು ಪಾರದರ್ಶಕವಾಗಿ, ಪರಿಪೂರ್ಣವಾಗಿ ಬಿಜೆಪಿಯು ನೋಡಿಕೊಳ್ಳುತ್ತದೆ ಎಂದು ಮೋದಿ ಹೇಳಿದರು. 

ಸಂಸದ ನಳಿನ್‌ ಕುಮಾರ್‌ ಕಟೀಲು, ವಿಧಾನ
ಪರಿಷತ್‌ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌, ವಿಧಾನ ಪರಿಷತ್‌ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ. ರುಕ್ಮಯ ಪೂಜಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು. ವಿಧಾನಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ವಿಧಾನಪರಿಷತ್‌ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ವಂದಿಸಿದರು.

ವೇದಿಕೆಯಲ್ಲಿ 10 ಅಭ್ಯರ್ಥಿಗಳು
ಚುನಾವಣಾ ಪ್ರಚಾರಸಭೆಯ ಪ್ರಧಾನ ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಸಂತೋಷ ಕುಮಾರ್‌ ರೈ, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾೖಕ್‌ ಉಳಿಪಾಡಿ, ಹರೀಶ್‌ ಪೂಂಜ, ಸಂಜೀವ ಮಠಂದೂರು, ಶಾಸಕ ಎಸ್‌. ಅಂಗಾರ ಹಾಗೂ ಕೊಡಗು ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳಾದ ಅಪ್ಪಚ್ಚು ರಂಜನ್‌, ಕೆ.ಜಿ. ಬೋಪಯ್ಯ ಉಪಸ್ಥಿತರಿದ್ದರು. 

ಕರಾವಳಿ ಅಭಿವೃದ್ಧಿ
ಮಂಗಳೂರು ಕೇಂದ್ರವಾಗಿ ಕರ್ನಾಟಕದ ಕರಾವಳಿಯ ಅಭಿವೃದ್ಧಿಗೆ ಕೇಂದ್ರ ಸರಕಾರ ನಿರಂತರವಾಗಿ ಸ್ಪಂದಿಸುತ್ತದೆ ಎಂದರು ಪ್ರಧಾನಿ ಮೋದಿ ಅವರು. ಕರಾವಳಿಯಲ್ಲಿ  ಸಾಗರಮಾಲಾ ಯೋಜನೆ ಕಾರ್ಯರೂಪಕ್ಕೆ ಬರುತ್ತದೆ. ಕಡಲ ಕಿನಾರೆಯ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯ ಜತೆಗೆ ಸಂಪರ್ಕಿಸುವ ಮೂಲಕ ಸಮುದ್ರದ ಉತ್ಪನ್ನಗಳ ಮಾರುಕಟ್ಟೆಗೆ ಬೆಂಬಲ ಒದಗಿಸಲಾಗುತ್ತದೆ. 4 ಕೇಂದ್ರಗಳಲ್ಲಿ ಮೀನುಗಾರಿಕಾ ಬಂದರುಗಳನ್ನು ಸ್ಥಾಪಿಸಲಾಗುತ್ತದೆ. ಮೀನುಗಾರರಿಗೆ ದೋಣಿ ಖರೀದಿ ಮುಂತಾದ ನೆರವನ್ನು ನೀಡಲಾಗುತ್ತದೆ. ಅಡಿಕೆ ಬೆಳೆಯ ವಿರುದ್ಧವೂ ಕಾಂಗ್ರೆಸ್‌ ಕೋರ್ಟಿಗೆ ಅಫಿದವಿತ್‌ ಸಲ್ಲಿಸಿತ್ತು. ಆದರೆ ಅಡಿಕೆ ಬೆಳೆಗಾರರು ಆತಂಕಪಡಬೇಕಾಗಿಲ್ಲ. ಕೇಂದ್ರ ಸರಕಾರ ಅವರ ನೆರವಿಗೆ ನಿಂತಿದೆ ಎಂದು ಮೋದಿ ಸ್ಪಷ್ಟಪಡಿಸಿದರು. ನವಮಂಗಳೂರು ಬಂದರಿನ ಸಾಮರ್ಥ್ಯ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ನೀಡುವುದಾಗಿಯೂ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next