Advertisement

ಲಿಂಗಾಯತ-ವೀರಶೈವರ ಮನ ಗೆಲ್ಲಲು ಕೈ ತಂತ್ರ

12:40 AM Feb 20, 2019 | Team Udayavani |

ಬೆಂಗಳೂರು: ವೀರಶೈವ-ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಬಿ.ಎಸ್‌. ಯಡಿಯೂರಪ್ಪ ಅವರ ವರ್ಚಸ್ಸು ರಾಜಕೀಯವಾಗಿ ಕಡಿಮೆಯಾಗುತ್ತಿದೆ ಎಂಬ ಭಾವನೆಯಿಂದ  ಸಮುದಾಯದ ಎರಡನೇ ಹಂತದ ನಾಯಕರಾಗಿ ಬೆಳೆಯಲು ಕಾಂಗ್ರೆಸ್‌ನ ಲಿಂಗಾಯತ ನಾಯಕರು ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸಿದ್ದಾರೆ.

Advertisement

ಇತ್ತೀಚೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರು ಕರೆದಿದ್ದ ಪಕ್ಷದ ವೀರಶೈವ-ಲಿಂಗಾಯತ ಮುಖಂಡರ ಭೋಜನ ಕೂಟದಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ. ಸಮುದಾಯದ ಮತಗಳನ್ನು ಕಾಂಗ್ರೆಸ್‌ ಕಡೆಗೆ ಸೆಳೆಯಲು ತಳಮಟ್ಟದಿಂದ ಪ್ರಯತ್ನ ನಡೆಸಬೇಕೆಂಬ ಲೆಕ್ಕಾಚಾರ ಹಾಕಲಾಗಿದೆ. ಈ ಕಾರಣಕ್ಕಾಗಿ ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸಮುದಾಯದ ರಾಜಕೀಯ ನಾಯಕತ್ವ ವಹಿಸಿಕೊಳ್ಳಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮತ್ತು ಎಂ.ಬಿ.ಪಾಟೀಲ್‌ ಅವರಿಗೆ ಕಾಂಗ್ರೆಸ್‌ನಲ್ಲಿರುವ ಲಿಂಗಾಯತ ನಾಯಕರು ಸೂಚಿಸಿದ್ದಾರೆ. ಪಕ್ಷದಲ್ಲಿ ಹೈಕಮಾಂಡ್‌ ಮಟ್ಟದಲ್ಲಿ ಸಮುದಾಯದ ಪ್ರಭಾವ ಬೆಳೆಸಿಕೊಳ್ಳುವಂತೆ ಸಭೆಯಲ್ಲಿ ಮುಖಂಡರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬೇಡಿಕೆ
ರಾಜ್ಯದಲ್ಲಿ ತನ್ನದೇ  ಪ್ರಭಾವ ಹೊಂದಿರುವ ವೀರಶೈವ-ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ನಿಂದ ರಾಷ್ಟ್ರಮಟ್ಟದಲ್ಲಿ ಸಮಾಜವನ್ನು ಪ್ರತಿನಿಧಿಸುವ ಯಾವುದೇ ನಾಯಕರು ಇಲ್ಲ ಎಂಬ ಮಾತುಗಳು ಪಕ್ಷದ ನಾಯಕರ ವಲಯದಲ್ಲಿ ಕೇಳಿ ಬಂದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಲು ಲಿಂಗಾಯತ ನಾಯಕರು ನಿರ್ಧರಿಸಿದ್ದಾರೆ.

ಬಿಜೆಪಿಯವರು ಲಿಂಗಾಯತ ಸಂಸದರು
ಕಾಂಗ್ರೆಸ್‌ ಬೇಡಿಕೆ ಇಡುತ್ತಿರುವ ಉ.ಕ. ಭಾಗದ 8 ಕ್ಷೇತ್ರಗಳಲ್ಲಿ ಧಾರವಾಡ ಲೋಕಸಭಾ ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಲಿಂಗಾಯತ ಸಂಸದರಿದ್ದಾರೆ. ಬೀದರ್‌, ಕೊಪ್ಪಳ, ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿ, ಹಾವೇರಿ, ದಾವಣಗೆರೆ ಕ್ಷೇತ್ರಗಳಲ್ಲಿ ಬಿಜೆಪಿಯ ಲಿಂಗಾಯತ ಸಂಸದರಿದ್ದು, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್‌ ಜೋಷಿ ಸಂಸದರಾಗಿದ್ದಾರೆ. ಅಲ್ಲಿಯೂ ಲಿಂಗಾಯತ ಸಮುದಾಯ ಒಗ್ಗಟ್ಟು ಪ್ರದರ್ಶಿಸಿದರೆ, ಜೋಷಿಯವರನ್ನು ಸೋಲಿಸಬಹುದು ಎನ್ನುವುದು ಕಾಂಗ್ರೆಸ್‌ ನಾಯಕರ ವಾದ.

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಲ್ಲಿ ವೀರಶೈವ-ಲಿಂಗಾಯತ ಸಮುದಾಯದ ನಾಯಕರಿಗೆ ಹೆಚ್ಚಿನ ಅವಕಾಶ ನೀಡಿದರೆ ಸಮಾಜದ ಮತಗಳನ್ನು ಸೆಳೆಯಲು ಹೆಚ್ಚು ಅನುಕೂಲವಾಗಲಿದೆ. ಹೀಗಾಗಿ ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಕೆಲವು ನಾಯಕರಿಗೆ ಜವಾಬ್ದಾರಿ ವಹಿಸಿಕೊಳ್ಳಲು ಸೂಚಿಸಲಾಗಿದೆ. ಇದರಿಂದ ಪಕ್ಷ ಹಾಗೂ ಸಮುದಾಯಕ್ಕೂ ಅನುಕೂಲವಾಗಲಿದೆ.
● ಎಸ್‌.ಆರ್‌.ಪಾಟೀಲ್‌,ವಿಧಾನ ಪರಿಷತ್‌ ಸದಸ್ಯ.

Advertisement

ಶಂಕರ ಪಾಗೋಜಿ 

Advertisement

Udayavani is now on Telegram. Click here to join our channel and stay updated with the latest news.

Next