Advertisement

ಕಾಂಗ್ರೆಸ್‌ ನಿಯೋಗದಿಂದ ಜಿಲ್ಲಾಧಿಕಾರಿ ಭೇಟಿ

12:17 PM May 12, 2021 | Team Udayavani |

ಗದಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌.ಪಾಟೀಲ, ಶಾಸಕ ಎಚ್‌.ಕೆ.ಪಾಟೀಲ ನೇತೃತ್ವದ ಕಾಂಗ್ರೆಸ್‌ ನಾಯಕರ ನಿಯೋಗ ಮಂಗಳವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, 2 ಗಂಟೆಗಳ ಕಾಲ ಸುದೀರ್ಘ‌ ಚರ್ಚೆ ನಡೆಸಿದರು.

Advertisement

ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ವೆಂಟಿಲೇಟರ್‌ ಸಿಗದೇ ಮೂವರು ಸಾವನ್ನಪ್ಪಿದ್ದಾರೆ. ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲೂ ತಕ್ಷಣಕ್ಕೆ ಬೆಡ್‌ಗಳು ದೊರೆಯುತ್ತಿಲ್ಲ. ಜಿಲ್ಲೆಯಲ್ಲೂ ಆಕ್ಸಿಜನ್‌ ಪೂರೈಕೆ ಗಂಭೀರ ಸ್ಥಿತಿಗೆ ತಲುಪಿದೆ. ಜಿಮ್ಸ್‌ನಲ್ಲಿ ಮೊನ್ನೆ ರಾತ್ರಿಯೇ ಪರಿಸ್ಥಿತಿ ಕೈಮೀರುವಂತಿತ್ತು. ಏನಾದರೂ ಹೆಚ್ಚು ಕಡಿಮೆ ಆದರೆ ಏನು ಗತಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆಕ್ಸಿಜನ್‌ ಪೂರೈಕೆದಾರರು ಉತ್ಪಾದಕರ ಸ್ಥಳದಲ್ಲಿ ಟ್ಯಾಂಕರ್‌ ತುಂಬುವುದರಲ್ಲೇ ಭಾರಿ ವಿಳಂಬವಾಗುತ್ತಿದೆ ಎಂದು ಗೋಳಿಡುತ್ತಿದ್ದಾರೆ. ನಾಳೆಯಿಂದ ಆಕ್ಸಿಜನ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬ ಭಯ ಎಲ್ಲೆಡೆ ಆವರಿಸಿದೆ. ಏನಾದರೂ ಅನಾಹುತ ಸಂಭವಿಸಿದರೆ ಹೇಗೆ? ಅದಕ್ಕೂ ಮುನ್ನವೇ ಸರಕಾರ ಎಚ್ಚೆತ್ತುಕೊಳ್ಳಬೇಕು. ಜಿಲ್ಲೆಗೆ ಆಕ್ಸಿಜನ್‌ ಪೂರೈಕೆಗೆ ಸರಕಾರ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಗದಗ ಜಿಲ್ಲೆಗೆ 20 ಕೆ.ಎಲ್‌. ಆಕ್ಸಿಜನ್‌ ಅಗತ್ಯವಿದ್ದು, ಜಿಮ್ಸ್‌ಗೆ 10 ರಿಂದ 12 ಕೆ.ಎಲ್‌. ಬೇಕಾಗುತ್ತದೆ. ಇನ್ನುಳಿದಂತೆ ಖಾಸಗಿ ಆಸ್ಪತ್ರೆಯವರಿಗೆ 4 ರಿಂದ 5 ಕೆ.ಎಲ್‌. ಆಸ್ಪತ್ರೆಗಳಿಗೆ, 2 ರಿಂದ 3 ಕೆ.ಎಲ್‌. ಹೆಚ್ಚುವರಿ ಹಾಗೂ ತಾಲೂಕು ಆಸ್ಪತ್ರೆಗೂ ಆಕ್ಸಿಜನ್‌ ಅಗತ್ಯವಿದೆ. ಆದ್ದರಿಂದ 20 ಕೆ.ಎಲ್‌. ಆಕ್ಸಿಜನ್‌ ಒದಗಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಆರ್‌ .ಯಾವಗಲ್‌, ಮಾಜಿ ಶಾಸಕರಾದ ಡಿ.ಆರ್‌ .ಪಾಟೀಲ, ಜಿ.ಎಸ್‌.ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಶಹರ ಕಾಂಗ್ರೆಸ್‌ ಅಧ್ಯಕ್ಷ ಗುರಣ್ಣ ಬಳಗಾನೂರ, ಯುವ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಮಂದಾಲಿ, ನರಗುಂದ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪ್ರವೀಣ ಯಾವಗಲ್‌, ಜಿಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next