Advertisement

ಸೋಮಣ್ಣಗೆ ಕಾಂಗ್ರೆಸ್‌ ಗಾಳ; ಮಂತ್ರಿ ಸ್ಥಾನದ ಆಫರ್

03:45 AM Jan 18, 2017 | Team Udayavani |

ಬೆಂಗಳೂರು: ಅನಿರೀಕ್ಷಿತ ರಾಜಕೀಯ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ನ ಹಾಲಿ ಸದಸ್ಯ ವಿ.ಸೋಮಣ್ಣ ಅವರನ್ನು ಕಾಂಗ್ರೆಸ್‌ಗೆ ಮರಳಿ ಕರೆ ತರಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಬಗ್ಗೆ ಉತ್ಸುಕರಾಗಿದ್ದು, ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಯತ್ನಕ್ಕೆ ಕೈಹಾಕಿದ್ದಾರೆ.

Advertisement

ನಂಜನಗೂಡು ಕಾಂಗ್ರೆಸ್‌ ಶಾಸಕರಾಗಿದ್ದ ವಿ.ಶ್ರೀನಿವಾಸ ಪ್ರಸಾದ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಅಲ್ಲದೆ, ಸಕ್ಕರೆ ಸಚಿವರಾಗಿದ್ದ ಗುಂಡ್ಲುಪೇಟೆ ಶಾಸಕ ಎಚ್‌. ಎಸ್‌.ಮಹದೇವಪ್ರಸಾದ್‌ ಅವರ ಅಕಾಲಿಕ
ನಿಧನದಿಂದಾಗಿ ಆ ಭಾಗದಲ್ಲಿ ಕಾಂಗ್ರೆಸ್‌ಗೆ ಸ್ವಲ್ಪ ಹಿನ್ನಡೆಯಾಗಿದೆ. ಇದನ್ನು ನಿಭಾಯಿಸುವುದರ ಜತೆಗೆ ಮಹದೇವಪ್ರಸಾದ್‌ ಅವರ ನಿಧನದಿಂದ ಉಂಟಾಗಿರುವ ಲಿಂಗಾಯತ ನಾಯಕರ ಕೊರತೆ ನೀಗಿಸಲು ಸೋಮಣ್ಣ
ಅವರಿಗೆ ಮಣೆ ಹಾಕಲು ಸಿದ್ದರಾಮಯ್ಯ ಮುಂದಾಗಿದ್ದು, ಸ್ವತಃ ಮಾತುಕತೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಮಹದೇವ ಪ್ರಸಾದ್‌ ಅವರ ಅಕಾಲಿಕ ನಿಧನದಿಂದ ಹಳೆ ಮೈಸೂರು ಭಾಗದಲ್ಲಿ, ವಿಶೇಷವಾಗಿ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲಿ ಲಿಂಗಾಯತ ಸಮುದಾಯದ ನಾಯಕರ ಕೊರತೆ ಎದುರಾಗಿದೆ. ಮಹದೇವ ಪ್ರಸಾದ್‌ ಮೈಸೂರು ಭಾಗದ ಲಿಂಗಾಯತ ಸಮುದಾಯದಲ್ಲಿ ಪ್ರಭಾವಿ ನಾಯಕರಾಗಿದ್ದು, ಸುತ್ತೂರು ಮಠದೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಹೀಗಾಗಿ ಲಿಂಗಾಯತ ಸಮುದಾಯದವರೇ ಆಗಿರುವ ವಿ.ಸೋಮಣ್ಣ ಅವರನ್ನು ಪಕ್ಷಕ್ಕೆ ಕರೆ ತಂದು ಎಂಎಲ್‌ಸಿ ಮಾಡಿ, ಮಂತ್ರಿ ಸ್ಥಾನ ನೀಡಲು ಸಿದ್ದರಾಮಯ್ಯ ಯೋಚಿಸಿದ್ದಾರೆ. ಆ ಮೂಲಕ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್‌ ಕಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಸೋಮಣ್ಣ ಸುತ್ತೂರು ಮಠದೊಂದಿಗೂ ಒಳ್ಳೆಯ ಬಾಂಧ ವ್ಯ ಬೆಳೆಸಿಕೊಂಡಿದ್ದಾರೆ. ಹೀಗಾಗಿ ಅವರು ಕಾಂಗ್ರೆಸ್‌ಗೆ ಬಂದರೆ ಪಕ್ಷದಲ್ಲಿ ಲಿಂಗಾಯ ತರಿಗೆ ಸರಿಯಾದ ಪ್ರಾತಿನಿಧ್ಯ ಇಲ್ಲ ಎಂಬ ಕೊರಗು ದೂರವಾಗುತ್ತದೆ. ಜತೆಗೆ ಮೈಸೂರು ಭಾಗದಲ್ಲಿ ತಮಗೆ ಆಗಿರುವ ಆಘಾತದಿಂದ
ಹೊರ ಬರಲು ಸಾಧ್ಯವಾಗುತ್ತದೆ ಎಂಬುದು ಸಿದ್ದರಾಮಯ್ಯ ಯೋಚನೆ ಎನ್ನಲಾಗಿದೆ.

ಪ್ರಸ್ತುತ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪ ಅವರಿಗೆ ಸೋಮಣ್ಣ ಅವರು ಹಿಂದೆ ಆಪ್ತರಾಗಿದ್ದರಾದರೂ
ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದ ಬಳಿಕ ಆ ಸಂಬಂಧ ಹಳಸಿತ್ತು. ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬಂದು ರಾಜ್ಯಾಧ್ಯಕ್ಷರಾದರೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಸೋಮಣ್ಣ ಬೇಸರಗೊಂಡಿದ್ದಾರೆ. ಹೀಗಾಗಿ, ಸೋಮಣ್ಣ
ಅವರನ್ನು ಕಾಂಗ್ರೆಸ್‌ಗೆ ಕರೆತರುವ ಮೂಲಕ ಯಡಿಯೂರಪ್ಪಗೆ ಶಾಕ್‌ ನೀಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.

Advertisement

ಅಂತ್ಯ ಸಂಸ್ಕಾರದ ದಿನವೇ ಮಾತುಕತೆ:
ಮಹದೇವ್‌ ಪ್ರಸಾದ್‌ ಅವರ ಅಂತ್ಯಸಂಸ್ಕಾರದ ದಿನವೇ ಸಿದ್ದರಾಮಯ್ಯ ಮೈಸೂರಿನಲ್ಲಿ ವಿ.ಸೋಮಣ್ಣ ಜತೆ ಮಾತುಕತೆ ನಡೆಸಿದ್ದಾರೆ. ಖಾಲಿ ಇರುವ ಮಂತ್ರಿ ಸ್ಥಾನ ನೀಡುವ ಭರವಸೆಯನ್ನೂ ನೀಡಿದ್ದಾರೆ. ಇದಕ್ಕೆ ಸೋಮಣ್ಣ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರಾದರೂ ಸ್ಪಷ್ಟ ತೀರ್ಮಾನ ತಿಳಿಸಿಲ್ಲ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ. ಒಂದು ವೇಳೆ ಕಾಂಗ್ರೆಸ್‌ ಸೇರಿದರೆ ಬಿಜೆಪಿಯಿಂದ ಎಂಎಲ್‌ಸಿ ಆಗಿರುವ ಸೋಮಣ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ನಿಂದ ಮತ್ತೆ ಎಂಎಲ್‌ಸಿ ಆಗಬೇಕಾಗುತ್ತದೆ.

ಮುಖ್ಯಮಂತ್ರಿ ಅಂದುಕೊಂಡಂತೆ ಎಲ್ಲವೂ ನಡೆದರೆ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಗೂ
ಮೊದಲೇ ಸೋಮಣ್ಣ ಅವರನ್ನು ಮಂತ್ರಿ ಮಾಡುವ ಸಾಧ್ಯತೆ ಇದೆ. ಆ ಮೂಲಕ ಈ ಕ್ಷೇತ್ರಗಳಲ್ಲಿ ಲಿಂಗಾಯತ ಮತಗಳನ್ನು ಸೆಳೆಯಲು ಸಿಎಂ ಕಾರ್ಯತಂತ್ರ ರೂಪಿಸಿದ್ದಾರೆ.
**
ಪ್ರಸಾದ್‌ ಸೆಳೆದ ಬಿಜೆಪಿಗೆ ತಿರುಗೇಟು?
ವಿ.ಶ್ರೀನಿವಾಸ್‌ ಪ್ರಸಾದ್‌ ಅವರನ್ನು ತನ್ನತ್ತ ಸೆಳೆದುಕೊಂಡು ಕಾಂಗ್ರೆಸ್‌ಗೆ ಏಟು ನೀಡಿದ್ದ ಬಿಜೆಪಿಗೆ ಸೋಮಣ್ಣ ಅವರ ಮೂಲಕ ದೊಡ್ಡಮಟ್ಟದ ತಿರುಗೇಟು ನೀಡುವುದು ಕೂಡ ಮುಖ್ಯಮಂತ್ರಿಗಳ ಉದ್ದೇಶವಾಗಿದೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಪ್ರಮುಖವಾಗಿ ಲಿಂಗಾಯತ ಸಮುದಾಯವೇ ನಿರ್ಣಾಯಕ ಪಾತ್ರ ವಹಿಸುವುದರಿಂದ ಆ ಸಮುದಾಯದ ಮತ ಸೆಳೆಯಲು ಹಾಗೂ ಬಿಜೆಪಿಗೆ ಸೆಡ್ಡು ಹೊಡೆಯಲು ಸೋಮಣ್ಣ ಅವರಿಗೆ ಗಾಳ ಹಾಕಿದ್ದಾರೆ ಎಂದು ಹೇಳಲಾಗಿದೆ.

*ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next