ಹೊಸದಿಲ್ಲಿ: ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಸಂದ ಸವಿ ನೆನಪಿಗಾಗಿ ವರ್ಷಪೂರ್ತಿ ಸರಣಿ ಸಮಾರಂಭ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಸೋಮವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಕಾರ್ಯಕ್ರಮ ಆಯೋಜನೆಗಾಗಿ ರಾಜ್ಯಗಳಲ್ಲಿ ಸಮಿತಿ ರಚಿಸಲು ನಿರ್ಧರಿಸಲಾ ಗಿದೆ. ಅದರಂತೆ, ಆ.14 ರ ಸಂಜೆ ಎಲ್ಲ ಜಿಲ್ಲೆಗಳಲ್ಲೂ “ಸ್ವಾತಂತ್ರ್ಯ ಸೇನಾನಿ ಮತ್ತು ಶಹೀದ್ ಸಮ್ಮಾನ್ ದಿವಸ್’ ಕಾರ್ಯಕ್ರಮ ಆಯೋ ಜಿಸಿ ಸ್ವಾತಂತ್ರ್ಯ ಹೋರಾಟಗಾರರು, ಅವರ ಕುಟುಂಬಸ್ಥರು, ಹುತಾತ್ಮರ ಕುಟುಂಬಗಳನ್ನು ಗೌರವಿಸಲಾಗುವುದು. 15ರಂದು ಬೆಳಗ್ಗೆ “ಫ್ರೀಡಂ ಮಾರ್ಚ್’ ಆಯೋಜಿಸಿ, ಎಲ್ಲ ಬ್ಲಾಕ್‌ಗಳು ಮತ್ತು ಜಿಲ್ಲೆಗಳ ಕಾಂಗ್ರೆಸ್ ಸಮಿತಿಗಳು ಮೆರವಣಿಗೆ ನಡೆಸಲಿವೆ ಎಂದೂ ವೇಣುಗೋಪಾಲ್ ತಿಳಿಸಿದ್ದಾರೆ. ರಾಜ್ಯಗಳಿಂದ ಸ್ವಾತಂತ್ಯ ಚಳವಳಿ ಬಿಂಬಿಸುವ 2 ನಿಮಿಷದ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಪ್ರಸಾರ ಮಾಡಲು ಸಿದ್ಧತೆ ನಡೆಯುತ್ತಿವೆ ಎಂದೂ ಹೇಳಿದ್ದಾರೆ.
1.28 ಲಕ್ಷ ಸ್ಥಳಗಳಲ್ಲಿ ಎಬಿವಿಪಿ ಧ್ವಜಾರೋಹಣ:
75ನೇ ಸ್ವಾತಂತ್ರ್ಯದಿನದ ಅಂಗವಾಗಿ ದೇಶದ 1,28,335 ಸ್ಥಳಗಳಲ್ಲಿ ಧ್ವಜಾರೋಹಣ ನಡೆಸಲು ಬಿಜೆಪಿ ವಿದ್ಯಾರ್ಥಿ ಘಟಕ ಅಖೀಲ ಭಾರತ ವಿದ್ಯಾರ್ಥಿ ಪರಿಷತ್ ನಿರ್ಧರಿಸಿದೆ. ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಎಬಿವಿಪಿ ವರ್ಷವಿಡೀ ಇಂಟರ್ನ್ಶಿಪ್, ಧ್ವಜ ಮೆರವಣಿಗೆ, ಸಾಮಾಜಿಕ ತಾಣದಲ್ಲಿ ಅಭಿಯಾನ, ಯೋಧರ ಕುರಿತ ಕಿರುಚಿತ್ರ ಮುಂತಾದ ಯೋಜನೆಗಳನ್ನು ಪರಿಚಯಿಸುವುದಾಗಿ ತಿಳಿಸಿದೆ. ದೇಶದ ಪ್ರತಿಯೊಬ್ಬ ನಾಗರಿಕನೂ ಈ ಬಾರಿಯ ಸ್ವಾತಂತ್ರ್ಯದಿನವನ್ನು ಉತ್ಸಾಹದಿಂದ ಆಚರಣೆ ಮಾಡಲು ವಿಶೇಷ ಅಭಿಯಾನ ನಡೆಸಲಾಗುವುದು ಎಂದು ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಧಿ ತ್ರಿಪಾಠಿ ಹೇಳಿದ್ದಾರೆ.