Advertisement

ಮುಳಬಾಗಿಲು: ಕಾಂಗ್ರೆಸ್‌ ಯಾತ್ರೆಗೆ ಚಾಲನೆ

06:15 AM Dec 22, 2017 | Team Udayavani |

ಮುಳಬಾಗಿಲು: ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೊಂಡಿರುವ “ಸಾಧನಾ-ಸಂಭ್ರಮ’ ಯಾತ್ರೆಗೆ ಪರ್ಯಾಯ ಎಂದೇ ಬಿಂಬಿತವಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ನೇತೃತ್ವದ 100 ಕ್ಷೇತ್ರಗಳ ಯಾತ್ರೆಗೆ ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಗುರುವಾರ ಚಾಲನೆ ನೀಡಲಾಯಿತು.

Advertisement

ಬೆಳಗ್ಗೆ ಮುಳಬಾಗಿಲಿನ ಕುರುಡುಮಲೆ ಗಣೇಶ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ, “ಕಾಂಗ್ರೆಸ್‌ ನಡಿಗೆ ವಿಜಯದ ಕಡೆಗೆ’ ಘೋಷಣೆಯಡಿ ಕೆಪಿಸಿಸಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ ಮತ್ತೂಮ್ಮೆ ಅಧಿಕಾರಕ್ಕೆ ಬರಲಿ ಹಾಗೂ ಕಾಂಗ್ರೆಸ್‌ ಪಕ್ಷದ ಎಲ್ಲಾ ವಿಘ್ನಗಳು ದೂರಾಗಲಿ ಎಂದು ಮೊದಲಿಗೆ ತಾಲೂಕಿನ ಕುರುಡುಮಲೆ ಶ್ರೀ ವಿನಾಯಕ ಮತ್ತು ಮುಳಬಾಗಿಲು ಶ್ರೀ ಆಂಜನೇಯಸ್ವಾಮಿ ದೇಗುಲಗಳಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭಿಸಲಾಗಿದೆ. ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಇದೇ ಕಾಂಗ್ರೆಸ್‌ನ ರಣತಂತ್ರ. ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನ, ಯೋಜನೆಗಳ ಶಂಕುಸ್ಥಾಪನೆ ಮತ್ತು ಸರ್ಕಾರ ಜಾರಿಗೊಳಿಸಿರುವ ಕಾರ್ಯಕ್ರಮಗಳನ್ನು ಮನೆ ಮನೆಗೂ ತಲುಪಿಸಲು ಸಿದ್ದರಾಮಯ್ಯನವರು 124 ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.

2018ರಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ನಾವೆಲ್ಲರೂ ಸೇರಿ ಸಿದ್ಧತೆ ನಡೆಸಿದ್ದೇವೆ. ರಾಜ್ಯದ 224 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಪೂರಕವಾಗಿ 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ 163 ಭರವಸೆಗಳನ್ನು ಈಡೇರಿಸಿದ್ದೇವೆ. ಈ ಅಂಶವನ್ನು ಜನಸಮೂಹಕ್ಕೆ ತಲುಪಿಸಲು ಕಾಂಗ್ರೆಸ್‌ ಪಕ್ಷದಿಂದ ಪ್ರವಾಸ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್‌, ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌, ಕೆಪಿಸಿಸಿ ಕಾರ್ಯಧ್ಯಕ್ಷರಾದ ದಿನೇಶ್‌ ಗುಂಡೂರಾವ್‌, ಎಸ್‌.ಆರ್‌.ಪಾಟೀಲ್‌, ಎಐಸಿಸಿ ಕಾರ್ಯದರ್ಶಿ ಸೂರಜ್‌ ಹೆಗಡೆ, ಸಂಸದ ಕೆ.ಎಚ್‌.ಮುನಿಯಪ್ಪ ಹಾಗೂ ಇತರ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

100 ಕ್ಷೇತ್ರಗಳಲ್ಲಿ ಸಂಚಾರ:
ಡಿ.22 ರಂದು ಕೋಲಾರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಕೆಜಿಎಫ್, ಕೋಲಾರ ಹಾಗೂ ಮಾಲೂರು ವಿಧಾನಸಭೆ ಕ್ಷೇತ್ರಗಳಲ್ಲಿ ಯಾತ್ರೆ ನಡೆಯಲಿದೆ. ನಂತರ ಡಿ.29 ಮತ್ತು 30 ರಂದು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಹೊಸಕೋಟೆ ಕ್ಷೇತ್ರಗಳಲ್ಲಿ ಯಾತ್ರೆ ಆಯೋಜಿಸಲಾಗಿದೆ. ಮೊದಲ ಹಂತದ ನಂತರ ಎರಡನೇ ಹಂತದಲ್ಲಿ ಜನವರಿ 4 ಮತ್ತು 5 ರಂದು ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳಲ್ಲಿ ಯಾತ್ರೆ ಸಂಚರಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next