ನವದೆಹಲಿ:ಕಾಶ್ಮೀರ ಕಣಿವೆಯಲ್ಲಿ ಹಿರಿಯ ರಾಜಕೀಯ ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಿರುವುದನ್ನು ಪ್ರತಿಭಟಿಸಿ ಜಮ್ಮು-ಕಾಶ್ಮೀರದ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಕಾಂಗ್ರೆಸ್ ತಿಳಿಸಿದೆ.
ಜಮ್ಮು-ಕಾಶ್ಮೀರದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ನ್ಯಾಶನಲ್ ಕಾನ್ಫರೆನ್ಸ್ ಮತ್ತು ಮೆಹಬೂಬ ಮುಫ್ತಿಯ ಪೀಪಲ್ಸ್ ಡೆಮೋಕ್ರಟಿಕ್ ಪಕ್ಷದ ಮುಖಂಡರನ್ನು ಕಳೆದ 70 ದಿನಗಳಿಂದ ಗೃಹ ಬಂಧನದಲ್ಲಿ ಇರಿಸಿದ್ದು, ಇದನ್ನು ಖಂಡಿಸಿ ಚುನಾವಣೆ ಬಹಿಷ್ಕರಿಸಿರುವುದಾಗಿ ಕಾಂಗ್ರೆಸ್ ಹೇಳಿದೆ.
ಅಕ್ಟೋಬರ್ 24ರಂದು ಬ್ಲಾಕ್ ಡೆವಲಪ್ ಮೆಂಟ್ ಕೌನ್ಸಿಲ್ ಚುನಾವಣೆ ನಡೆಯಲಿದ್ದು, ಇದು ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರುವ ಮುಖ್ಯ ಉದ್ದೇಶವಾಗಿದೆ. ಅಲ್ಲದೇ ಜನಜೀವನ ಎಂದಿನಂತೆ ನಡೆಯಲು ಅವಕಾಶ ಕಲ್ಪಿಸುವ ಪ್ರಕ್ರಿಯೆಯಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬಲಿಷ್ಠಗೊಳಿಸುವಲ್ಲಿ ಕಾಂಗ್ರೆಸ್ ನಂಬಿಕೆ ಇರಿಸಿದೆ. ಯಾವುದೇ ಚುನಾವಣೆಯಿಂದ ಯಾವತ್ತೂ ದೂರ ಸರಿದಿಲ್ಲ ಎಂದು ಜಮ್ಮು-ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ಜಿಎ ಮೀರ್ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಆದರೆ ಇಂದು ರಾಜ್ಯದ ಆಡಳಿತದ ನಡವಳಿಕೆ ಮತ್ತು ಹಿರಿಯ ರಾಜಕೀಯ ಮುಖಂಡರ ಗೃಹಬಂಧನ ಮುಂದುವರಿಸಿರುವುದರಿಂದ ಬಿಡಿಸಿ ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾನ ಕೈಗೊಂಡಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು.