ಬಳ್ಳಾರಿ: ವಿಧಾನ ಪರಿಷತ್ ಚುನಾವಣೆಯ ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಗ್ಗಂಟಾಗಿದ್ದು, ಟಿಕೆಟ್ ಹಂಚಿಕೆಯ ಚೆಂಡು ಹೈಕಮಾಂಡ್ ಅಂಗಳಕ್ಕೆ ಹೋಗಿ ತಲುಪಿದೆ. ಆಕಾಂಕ್ಷಿಗಳ ಮಧ್ಯೆ ಹೆಚ್ಚಿದ ಪೈಪೋಟಿ, ಮುಖಂಡರಲ್ಲಿ ಒಮ್ಮತ ಮೂಡದಿರುವುದರಿಂದ ಅಭ್ಯರ್ಥಿ ಘೋಷಣೆಗೆ ವಿಳಂಬವಾಗುತ್ತಿದ್ದು, ಜಿಲ್ಲೆಯ ಮುಖಂಡರೊಂದಿಗೆ ಆಕಾಂಕ್ಷಿಗಳು ಸಹ ಗುರುವಾರ ದೆಹಲಿಗೆ ದೌಡಾಯಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಅ ಧಿಸೂಚನೆ ಪ್ರಕಟವಾಗಿ ಕೆಲ ದಿನ ಕಳೆದರೂ, ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಮುಖ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ. ಹಾಲಿ ಸದಸ್ಯ ಕೆ.ಸಿ. ಕೊಂಡಯ್ಯ ಎರಡನೇ ಬಾರಿಗೆ ಸ್ಪರ್ಧೆ ಬಯಸಿ ಕಳೆದ ಒಂದು ವರ್ಷದಿಂದಲೇ ಗ್ರಾಪಂಗಳಿಗೆ ಭೇಟಿ ನೀಡಿ ನೂತನ ಸದಸ್ಯರಿಗೆ ಅಭಿನಂದನಾ ಪತ್ರ ನೀಡಿ ಚುನಾವಣೆಗೆ ತಯಾರಿ ನಡೆಸಿದ್ದಾರೆ. ಮತ್ತೂಂದೆಡೆ ಈ ಹಿಂದೆ ಪಕ್ಷದ ಮುಖಂಡರು ಭರವಸೆ ನೀಡಿದ್ದಾರೆ ಎಂದು ಮುಖಂಡ, ಜಿಪಂ ಸದಸ್ಯ ಮುಂಡ್ರಿಗಿ ನಾಗರಾಜ್, ಮಾಜಿ ಎಂಎಲ್‌ಸಿ ಕುರುಬ ಸಮುದಾಯದ ಕೆ.ಎಸ್.ಎಲ್.ಸ್ವಾಮಿ, ಮಾಜಿ ಶಾಸಕ ಅನಿಲ್‌ಲಾಡ್ ಅವರು ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ.
ಮಾಜಿ ಸಚಿವ ಸಂತೋಷ್ ಲಾಡ್ ಅವರು ಮುಂಡ್ರಿಗಿ ನಾಗರಾಜ್ ಬೆನ್ನಿಗೆ ನಿಂತು ಟಿಕೆಟ್ ಕೊಡಿಸಲು ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಕೊಂಡಯ್ಯ ಅವರಿಗೆ ಟಿಕೆಟ್ ಕೊಡದಿದ್ದರೆ ತಮಗೆ ಕೊಡುವಂತೆ ಅನಿಲ್ ಲಾಡ್ ಟಿಕೆಟ್ ಕೇಳುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ದೆಹಲಿಗೆ ದೌಡು: ಟಿಕೆಟ್ ಘೋಷಣೆಯಲ್ಲಿ ಸೂಕ್ತ ತೀರ್ಮಾನಕ್ಕೆ ಬರಲಾಗದೆ ಗೊಂದಲ ಮುಂದುವರೆದ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಟಿಕೆಟ್ ಪಡೆಯಲೇಬೇಕು ಎಂದು ಕೆ.ಸಿ. ಕೊಂಡಯ್ಯ, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ಸದಸ್ಯ ಡಾ| ಸೈಯದ್ ನಾಸೀರ್ ಹುಸೇನ್, ಯು.ಬಿ. ವೆಂಕಟೇಶ್ ಅವರೊಂದಿಗೆ ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ. ಅವರೊಂದಿಗೆ ಮಾಜಿ ಸಚಿವ ಸಂತೋಷ್ ಲಾಡ್, ಅನಿಲ್‌ಲಾಡ್ ಇನ್ನಿತರೆ ಮುಖಂಡರು ಸಹ ದೆಹಲಿಗೆ ತೆರಳಿದ್ದು, ಅಂತಿಮವಾಗಿ ಕಾಂಗ್ರೆಸ್ ಟಿಕೆಟ್ ಯಾರಿಗೆ ದಕ್ಕಲಿದೆ ಎಂಬುದು ಕುತೂಹಲ ಮೂಡಿಸಿದೆ.
ಲಾಡ್ ಸಹೋದರರ ರಣತಂತ್ರ: ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡನೇ ಬಾರಿಗೆ ಸ್ಪ ರ್ಧಿಸಲು ಮುಂದಾಗಿರುವ ಹಾಲಿ ಸದಸ್ಯ ಕೆ.ಸಿ.ಕೊಂಡಯ್ಯ ಅವರಿಗೆ ಟಿಕೆಟ್ ತಪ್ಪಿಸಲು ಲಾಡ್ ಸಹೋದರರು ರಣತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.
ಪಕ್ಷದಲ್ಲಿ ಕೊಂಡಯ್ಯ ಅವರಿಗೆ ಗಾಡ್‌ಫಾದರ್ ಎಂದೇ ಹೇಳಲಾಗುವ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಕೊಂಡಯ್ಯ ಪರ ನಿಲ್ಲದಂತೆ ದಲಿತ ಸಮುದಾಯದ ಮುಖಂಡ ಮುಂಡ್ರಿಗಿ ನಾಗರಾಜ್, ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಲಾಬಿ ನಡೆಸದಂತೆ ಕೆ.ಎಸ್.ಎಲ್.ಸ್ವಾಮಿ ಅವರನ್ನು ಟಿಕೆಟ್ ಕೇಳುವಂತೆ ಮುಂದೆ ಬಿಟ್ಟಿದ್ದಾರೆ. ಒಂದು ವೇಳೆ ಕೊಂಡಯ್ಯ ಅವರು ಸ್ಪರ್ಧೆಯಿಂದ ಹಿಂದೆ ಸರಿದರೆ ಕೊನೆಗೆ ಅನಿಲ್‌ಲಾಡ್ ಅವರಿಗೆ ಟಿಕೆಟ್ ಕೊಡಿಸುವ ಇರಾದೆ ಹೊಂದಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ಪಡಸಾಲೆಯಲ್ಲೇ ಕೇಳಿಬರುತ್ತಿದೆ.
ಕೊಂಡಯ್ಯ ಹಿರಿಯ ಮುಖಂಡ; ಹಾಲಿ ಸದಸ್ಯ ಕೆ.ಸಿ. ಕೊಂಡಯ್ಯ ಅವರು ಹಿರಿಯ ಮುಖಂಡರಾಗಿದ್ದು, ಕಾಂಗ್ರೆಸ್‌ನ ಕಟ್ಟಾಳು. ಹಿಂದೆ ಆಹ್ವಾನ ಬಂದರೂ ಬೇರೆ ಪಕ್ಷಕ್ಕೆ ಹೋಗಿರಲಿಲ್ಲ. ಇದು ತಮ್ಮ ಕೊನೆಯ ಚುನಾವಣೆ ಎಂದಿದ್ದಾರೆ. ಇಡೀ ಜೀವನವನ್ನು ಕಾಂಗ್ರೆಸ್‌ನಲ್ಲೇ ಕಳೆದರೂ, ಟಿಕೆಟ್‌ಗಾಗಿ ದೆಹಲಿಗೆ ತೆರಳುವುದು ತಪ್ಪಲಿಲ್ಲ. ಇಂತಹ ಪರಿಸ್ಥಿತಿ ಶತಮಾನದ ಇತಿಹಾಸವುಳ್ಳ ಕಾಂಗ್ರೆಸ್‌ನಲ್ಲೇ ಬರುತ್ತಿರುವುದು ಬೇಸರ ಮೂಡಿಸುತ್ತಿದೆ ಎಂದು ಕೊಂಡಯ್ಯನವರ ಬೆಂಬಲಿತ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಪರಿಷತ್ ಫೈಟ್‌ಗಾಗಿ ಟಿಕೆಟ್ ಯಾರಿಗೆ ಎಂಬ ಕುತೂಹಲ ಮೂಡಿದ್ದು, ಅಂತಿಮವಾಗಿ ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ವೆಂಕೋಬಿ ಸಂಗನಕಲ್ಲು