ಹುಬ್ಬಳ್ಳಿ: ರಾಜಕೀಯ ಅಂದರೇನೇ ಹಾಗೆ. ಒಂದೇ ಪಕ್ಷದಲ್ಲಿರುತ್ತಾರೆ, ಇಬ್ಬರೂ ಸ್ನೇಹಿತರಂತೆಯೇ ಗೋಚರಿಸುತ್ತಾರೆ. ಆದರೆ, ಯಾರು, ಯಾವಾಗ, ಎಲ್ಲಿ ತಿವಿಯುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ. ವಿಧಾನಸಭೆ ಚುನಾವಣೆ ಇನ್ನೂ ಎರಡು ವರ್ಷ ಇರುವಾಗಲೇ ಇಂತಹ ವಿದ್ಯಮಾನಕ್ಕೆ ಕಲಘಟಗಿ ಕ್ಷೇತ್ರ ಸಾಕ್ಷಿಯಾಗತೊಡಗಿದೆ. ಕಾಂಗ್ರೆಸ್‌ನಲ್ಲಿನ ಟಿಕೆಟ್ ಮಾಯೆ ಹಲವು ಆಯಾಮಗಳನ್ನು ಸೃಷ್ಟಿಸತೊಡಗಿದೆ.
ಕಲಘಟಗಿ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಬ್ಬರ ನಡುವಿನ ತಿಕ್ಕಾಟ ವಿವಿಧ ಮಗ್ಗಲುಗಳು ಗೋಚರಿಸುವಂತೆ ಮಾಡತೊಡಗಿದೆ. ಏನೇ ಆಗಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನನ್ನದೇ ಎಂದು ಎರಡೂ ಕಡೆಯವರು ಹೇಳಿಕೊಳ್ಳುತ್ತಿದ್ದಾರೆ. ಮುಂದಿನ ಡಿಸಿಎಂ ಇವರೇ ಎಂದು ಜಾನುವಾರುಗಳ ಮೇಲೆ ಬರೆಯುವಂತಹ ಯತ್ನಗಳು ನಡೆಯತೊಡಗಿವೆ. ರಾಜ್ಯಮಟ್ಟದಲ್ಲಿ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ತಿಕ್ಕಾಟ ನಡೆದಿದ್ದರೆ, ಕಲಘಟಗಿಯಲ್ಲಿ ಶಾಸಕ ಸ್ಥಾನದ ಟಿಕೆಟ್ ಕಾದಾಟ ಶುರುವಿಟ್ಟುಕೊಂಡಿದೆ.
ಒಬ್ಬರು ಒಂದು ದಾಳ ಉರುಳಿಸಿದರೆ ಇನ್ನೊಬ್ಬರು ಮತ್ತೂಂದು ದಾಳದ ಮೂಲಕ ಎದುರು ಮೋಡಿ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್‌ನ ಸ್ಥಿತಿ ನೋಡಿದರೆ ಮುಂದಿನ ಚುನಾವಣೆಯಲ್ಲಿ ರಾಜಕೀಯ ಎದುರಾಳಿಗಳ ಹೊಡೆತಕ್ಕಿಂತ, ಸ್ವಪಕ್ಷೀಯರ ಹೊಡೆತ-ಒಳ ಹೊಡೆತವೇ ದೊಡ್ಡ ಪೆಟ್ಟು ಕೊಡಲಿದೆಯೇ ಎಂಬ ಅನುಮಾನ ಮೂಡಿಸಿವಂತೆ ಮಾಡಿದೆ.
ಕಲಘಟಗಿ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಎರಡು ಬಾರಿ ಕ್ಷೇತ್ರ ಪ್ರತಿನಿಧಿಸಿರುವ ಮಾಜಿ ಸಚಿವ ಸಂತೋಷ ಲಾಡ್ ಹಾಗೂ ಕ್ಷೇತ್ರದ ಜತೆ ನಂಟು ಹೊಂದಿರುವ ವಿಧಾನಪರಿಷತ್ತು ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರ ನಡುವೆ ಟಿಕೆಟ್ ಸಮರ ಶುರುವಾಗಿದೆ. ನಾನಾ ನೀನಾ ಎಂಬಷ್ಟರ ಮಟ್ಟಿಗೆ ಪೈಪೋಟಿ ಹೆಚ್ಚತೊಡಗಿದೆ.
ಪಕ್ಷ ಸಂಘಟನೆ ಜತೆಗೆ ಕಳೆದುಕೊಂಡಿರುವ ಕ್ಷೇತ್ರ ಮರು ವಶಕ್ಕೆ ಶ್ರಮಿಸಬೇಕಾದ ಮುಖಂಡರೇ ರಾಜಕೀಯ ವಿರೋಧಿಗಳ ರೀತಿಯಲ್ಲಿ ಸಮರಕ್ಕಿಳಿದಿರುವುದು, ಏಟಿಗೆ ಎದುರೇಟು ನೀಡಲು ಮುಂದಾಗಿರುವುದು ಸಹಜವಾಗಿಯೇ ಕಾರ್ಯಕರ್ತರಲ್ಲಿ ಗೊಂದಲ ತರಿಸಿದೆ. ಯಾರ ಕಡೆ ಮಾತನಾಡಿದರೂ, ಮುಂದೆ ಯಾರಿಗೆ ಟಿಕೆಟ್ ಸಿಗುತ್ತದೆಯೋ ಯಾರಿಗೆ ಗೊತ್ತು, ಮಾತನಾಡಿ ಯಾಕೆ ನಿಷ್ಠುರವಾಗುವುದೆಂದು ಅನೇಕರು ಮೌನದಿಂದಲೇ ನಾಟಕ ನೋಡತೊಡಗಿದ್ದಾರೆ.