Advertisement
ಮಂಗಳೂರು ಕ್ಷೇತ್ರದಲ್ಲಿ ಯು.ಟಿ. ಖಾದರ್, ಮಂಗಳೂರು ದಕ್ಷಿಣದಲ್ಲಿ ಜೆ.ಆರ್. ಲೋಬೊ, ಮಂಗಳೂರು ಉತ್ತರದಲ್ಲಿ ಬಿ.ಎ. ಮೊದಿನ್ ಬಾವಾ, ಬಂಟ್ವಾಳದಲ್ಲಿ ಬಿ. ರಮಾನಾಥ ರೈ, ಮೂಡಬಿದಿರೆಯಲ್ಲಿ ಕೆ. ಅಭಯಚಂದ್ರ ಜೈನ್, ಬೆಳ್ತಂಗಡಿಯಲ್ಲಿ ಕೆ. ವಸಂತ ಬಂಗೇರ, ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ ಅವರಿಗೆ ನಿರೀಕ್ಷೆಯಂತೆಯೇ ಕಾಂಗ್ರೆಸ್ ಟಿಕೆಟ್ ನೀಡಿದೆ. ಸುಳ್ಯದಲ್ಲಿ ಡಾ| ರಘು ಅವರನ್ನು ಈ ಬಾರಿಯೂ ಕಣಕ್ಕಿಳಿಸಲಾಗಿದೆ.
ಕಾರ್ಕಳ ಕ್ಷೇತ್ರದಲ್ಲಿ ಮಾಜಿ ಶಾಸಕ, ಕಳೆದ ಬಾರಿಯ ಸ್ಪರ್ಧಿ ಗೋಪಾಲ ಭಂಡಾರಿ ಅವರಿಗೆ ಟಿಕೆಟ್ ನೀಡಿ ಕುತೂಹಲಕ್ಕೆ ತೆರೆ ಎಳೆಯಲಾಗಿದೆ. ಇಲ್ಲಿ ಗೋಪಾಲ ಭಂಡಾರಿ, ವೀರಪ್ಪ ಮೊಯಿಲಿ ಪುತ್ರ ಹರ್ಷ ಮೊಯಿಲಿ, ಜಿಲ್ಲಾ ಉಪಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಹೆಸರುಗಳಿದ್ದವು. ಮೂಡಬಿದಿರೆ, ಪುತ್ತೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕುರಿತು ಕುತೂಹಲ ಮೂಡಿತ್ತು. ಮೂಡಬಿದಿರೆಯಲ್ಲಿ ಹಾಲಿ ಶಾಸಕ ಅಭಯಚಂದ್ರ ಸ್ಥಾನ ಬಿಟ್ಟು ಕೊಡಲು ಸಿದ್ಧ ಎಂಬ ವರದಿ ಹಿನ್ನೆಲೆಯಲ್ಲಿ ಐವನ್ ಡಿ’ಸೋಜಾ, ಮಿಥುನ್ ರೈ, ಕವಿತಾ ಸನಿಲ್ ಅತ್ತ ಗಮನ ಹರಿಸಿದ್ದರು. ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ ಅವರಿಗೆ ಟಿಕೆಟ್ ನೀಡುವುದಕ್ಕೆ ಒಂದು ಬಣದಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಪಕ್ಷ ಶಕುಂತಳಾ ಶೆಟ್ಟಿ ಅವರ ಮೇಲೆ ವಿಶ್ವಾಸ ಇರಿಸಿ ಅವರನ್ನು ಆಯ್ಕೆ ಮಾಡಿದೆ.