Advertisement

Congress Ticket: ಪ್ರಾದೇಶಿಕ ಅಸಮತೋಲನದ ಕೂಗು… ಸಿಎಂ ಬಣದ ಮೇಲುಗೈ

10:36 PM Jun 02, 2024 | Team Udayavani |

ಬೆಂಗಳೂರು: ಜಾತಿವಾರು, ಪ್ರದೇಶವಾರು ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಪಕ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ ಸಿಎಂ ಬಣ ಮೇಲುಗೈ ಸಾಧಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಬಣಕ್ಕೂ ಅವಕಾಶ ಕಲ್ಪಿಸಲಾಗಿದೆ.

Advertisement

ಸಮುದಾಯ ಲೆಕ್ಕಾಚಾರ ಹಾಕಿ ಅಂತಿಮಗೊಳಿಸಿರುವ ಪಟ್ಟಿಯಲ್ಲಿ ಹಿಂದುಳಿದ, ಅಲ್ಪಸಂಖ್ಯಾಕ, ಪರಿಶಿಷ್ಟ ಜಾತಿಗೆ ಸೇರಿದ ತಲಾ ಇಬ್ಬರು ಮತ್ತು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ತಲಾ ಒಬ್ಬರಿಗೆ ಅದೃಷ್ಟ ಖುಲಾಯಿಸಿದೆ. ಆಯ್ಕೆಯಾದ ಎಂಟು ಅಭ್ಯರ್ಥಿಗಳಲ್ಲಿ ನಾಲ್ವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗದವರು ಅಂದರೆ ಕಲ್ಯಾಣ ಕರ್ನಾಟಕದವರೇ ಆಗಿದ್ದು, ಅದರಲ್ಲೂ ಮೂವರು ರಾಯಚೂರು ಜಿಲ್ಲೆಯವರು. ಈ ನಿಟ್ಟಿನಲ್ಲಿ ಆಯ್ಕೆ ವೇಳೆ ಪ್ರಾದೇಶಿಕ ಸಮತೋಲನ ಕಾಯ್ದುಕೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಇನ್ನು ಬಣಗಳ ಲೆಕ್ಕಾಚಾರದಲ್ಲಿ ಹೇಳುವುದಾದರೆ, ನಾಲ್ಕು ಸ್ಥಾನಗಳನ್ನು ತಮ್ಮ ಆಪ್ತರಿಗೆ ಕೊಡಿಸುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ. ಉಳಿದಂತೆ ಮೂರು ಎಐಸಿಸಿ ಅಧ್ಯಕ್ಷರ ಆಪ್ತರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಆಪ್ತರೊಬ್ಬರಿಗೆ ಮೇಲ್ಮನೆ ಪ್ರವೇಶಿಸುವ ಭಾಗ್ಯ ಸಿಕ್ಕಿದೆ. ಉಪಚುನಾವಣೆಯೂ ಸೇರಿ ಒಟ್ಟು 8 ಸ್ಥಾನಗಳ ಪೈಕಿ ಬೋಸರಾಜ್‌, ಗೋವಿಂದರಾಜ ಮತ್ತೂಂದು ಅವಧಿಗೆ ಮುಂದುವರಿಯಲಿದ್ದಾರೆ. ಐವನ್‌ ಡಿ’ ಸೋಜಾ ಈ ಹಿಂದೆ ಎರಡು ಬಾರಿ ಮೇಲ್ಮನೆ ಪ್ರವೇಶಿಸಿದ್ದು, ಈಗ ಮತ್ತೆ ಅವರಿಗೆ ಅದೃಷ್ಟ ಒಲಿದಿದೆ. ಉಳಿದ ಐವರು ಇದೇ ಮೊದಲ ಬಾರಿ ಮೇಲ್ಮನೆ ಪ್ರವೇಶಿಸಲಿದ್ದಾರೆ.

ತೆರವಾದ ಸ್ಥಾನಗಳು ಕೇವಲ ಎಂಟು ಇದ್ದು, ಆಕಾಂಕ್ಷಿಗಳ ಪಟ್ಟಿ 40 ಪಟ್ಟು ಇತ್ತು. ಒಬ್ಬೊಬ್ಬರದ್ದೂ ಒಂದೊಂದು ರೀತಿಯ ಲಾಬಿ ಇತ್ತು. ಟಿಕೆಟ್‌ ವಂಚಿತರು, ಪಕ್ಷದ ಗೆಲುವಿಗೆ ಶ್ರಮಿಸಿದವರು, ಜಾತಿ, ಪ್ರದೇಶ ಸಹಿತ ವಿವಿಧ ಲೆಕ್ಕಾಚಾರಗಳಲ್ಲಿ ಪ್ರಭಾವ ಬೀರಲು ಯತ್ನಿಸಿದ್ದರು. ಈ ಮಧ್ಯೆ ನಾಯಕರ ಸಲಹೆ ಪಡೆದಿಲ್ಲ ಎಂಬ ಅಸಮಾಧಾನದ ಕೂಗು ಬಹಿರಂಗವಾಗಿಯೇ ಕೇಳಿಬಂದಿತ್ತು. ಇದೆಲ್ಲದರಿಂದ ಆಯ್ಕೆ ಕಗ್ಗಂಟಾಗಿತ್ತು. ಇದೇ ವಿಚಾರಕ್ಕೆ ಸಿಎಂ-ಡಿಸಿಎಂ ಎರಡು ದಿನ ದಿಲ್ಲಿಯಲ್ಲಿ ಠಿಕಾಣಿ ಹೂಡಿದ್ದರು. ನಾಮಪತ್ರ ಸಲ್ಲಿಕೆಗೆ ಸೋಮವಾರ (ಜೂ. 3) ಕೊನೆಯ ದಿನವಾಗಿತ್ತು. ಅದಕ್ಕೆ ಮುನ್ನಾದಿನ ಪಟ್ಟಿ ಅಂತಿಮಗೊಳಿಸುವಲ್ಲಿ ಹೈಕಮಾಂಡ್‌ ಯಶಸ್ವಿಯಾಗಿದೆ.

ಬಸನಗೌಡ ಬಾದರ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್‌ ಕೇಳಿದ್ದರು. ಅವಕಾಶ ಸಿಗದಿದ್ದಾಗ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅಂತಿಮ ಕ್ಷಣದಲ್ಲಿ ಮನವೊಲಿಕೆಯಲ್ಲಿ ಪಕ್ಷದ ನಾಯಕರು ಯಶಸ್ವಿಯಾಗಿದ್ದರು. ಜಗದೇವ ಗುತ್ತೇದಾರ್‌, ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಅಭ್ಯರ್ಥಿಗಾಗಿ ಸಾಕಷ್ಟು ಕೆಲಸ ಮಾಡಿದ್ದರು ಎನ್ನಲಾಗಿದೆ.

Advertisement

ಜಾತಿ ಲೆಕ್ಕಾಚಾರ
ಹಿಂದುಳಿದ- 2
ಅಲ್ಪಸಂಖ್ಯಾಕ- 2
ಪರಿಶಿಷ್ಟ ಜಾತಿ- 2
ಲಿಂಗಾಯತ- 1
ಒಕ್ಕಲಿಗ- 1

Advertisement

Udayavani is now on Telegram. Click here to join our channel and stay updated with the latest news.

Next