ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ನಲ್ಲಿ ವಲಸೆ ಮತ್ತು ಮೂಲ ಕಾಂಗ್ರೆಸಿಗರ ನಡುವೆ ಗೊಂದಲ ಮುಂದುವರಿದಿದ್ದು, ಶನಿವಾರ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ, ಆದರೆ ಚಿಕ್ಕಮಗಳೂರು ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ಕುತೂಹಲದಲ್ಲಿದೆ. ಅಭ್ಯರ್ಥಿ ಆಯ್ಕೆ ವಿಚಾರ ಜಟಿಲವಾಗಿರುವ ಕಾರಣ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಪ್ರಕಟಣೆ ಹಾಗೆಯೆ ಬಾಕಿ ಉಳಿಸಿಕೊಳ್ಳಲಾಗಿದೆ.
ತೀವ್ರ ವಿರೋಧದ ಮಧ್ಯೆಯೂ ನಯನಾಗೆ ಟಿಕೆಟ್
ಮೂಡಿಗೆರೆ ತಾಲೂಕಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕಿ ಮೋಟಮ್ಮ ಅವರ ಪುತ್ರಿ ನಯನಾ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಸಮಾಧಾನ ಹೊರಹಾಕಿದ್ದರಾದರೂ ಅವರಿಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಹೋಬಳಿ-ಹೋಬಳಿಯಲ್ಲಿ ಮೋಟಮ್ಮ ವಿರುದ್ಧ ಬಹಿರಂಗ ಸಭೆ ನಡೆಸಿದ್ದರು. ನಯನಾ ಅವರಿಗೆ ಟಿಕೆಟ್ ಬೇಡ, ಬೇರೆ ಯಾರಿಗಾದರೂ ಕೊಡಿ ಎಂದು ವರಿಷ್ಠರಿಗೆ ಮನವಿ ಮಾಡಿದ್ದರು. ಕಾರ್ಯಕರ್ತರ ವಿರೋಧದ ಮಧ್ಯೆಯೂ ಕಾಂಗ್ರೆಸ್ ನಾಯಕರು ನಯನಾಗೆ ಮಣೆ ಹಾಕಿದ್ದಾರೆ.
ಡಿಕೆಶಿ ಬೆಂಬಲಿಗನಿಗೆ ಟಿಕೆಟ್ ಮಿಸ್
ತರೀಕೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕ್ಷಾಂಕಿಯಾಗಿದ್ದ ಹೆಚ್.ಎಂ.ಗೋಪಿಕೃಷ್ಣ ಅವರಿಗೆ ಕೊನೆಕ್ಷಣದಲ್ಲಿ ಟಿಕೆಟ್ ಕೈತಪ್ಪಿದ್ದು, ಸಿದ್ದರಾಮಯ್ಯ ಅಪ್ತ ಮಾಜಿ ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರಿಗೆ ಕೈ ಟಿಕೆಟ್ ಒಲಿದಿದೆ.
ಗೋಪಿಕೃಷ್ಣ ಮತ್ತು ಶ್ರೀನಿವಾಸ್ ನಡುವೆ ಟಿಕೆಟಿಗಾಗಿ ಪೈಪೋಟಿ ಏರ್ಪಟ್ಟಿತ್ತು. ಮೂರನೇ ಪಟ್ಟಿಯಲ್ಲಿ ಶ್ರೀನಿವಾಸ್ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಟಿಕೆಟ್ ಘೋಷಣೆ ಘೋಷಣೆ ಬೆನ್ನಲ್ಲೇ ಅಸಮಾಧಾನಗೊಂಡಿರುವ ಗೋಪಿಕೃಷ್ಣ ತನ್ನ ಆಪ್ತರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಅವರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.