ನೆಲಮಂಗಲ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆ.15ರ ತಿರಂಗಾ ರ್ಯಾಲಿ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರದ ಅಭ್ಯರ್ಥಿ ಗೊಂದಲ ಸರಿಪಡಿಸುವಂತೆ ಕಾರ್ಯಕರ್ತರು ಗದ್ದಲ ಎಬ್ಬಿಸಿದ್ದರಿಂದ, ಎಐಸಿಸಿ ಕಾರ್ಯದರ್ಶಿ ಕೆಲಕಾಲ ಪೇಚೆಗೆ ಸಿಲುಕಿದ ಘಟನೆ ನಡೆಯಿತು. ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಹೊರಗಿನವರು, ಸ್ಥಳೀಯರು ಎಂಬ ಸಂಘರ್ಷ ಉಂಟಾಗಿ, ಗೊಂದಲ ಮೂಡಿದೆ. ಇದನ್ನು ನಿವಾರಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಸಭೆಯಲ್ಲಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ದತ್ತ, ನಾನು ಇಲ್ಲಿ ಚುನಾವಣೆಗಾಗಿ ಬಂದಿಲ್ಲ. ಸೋಮವಾರದ ತಿರಂಗಾ ರ್ಯಾಲಿಯಲ್ಲಿ ಭಾಗವಹಿಸಲು ತಯಾರಿಯ ಬಗ್ಗೆ ತಿಳಿಸಲು ಬಂದಿದ್ದೇನೆ, ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ದೊಡ್ಡ ತಿರಂಗಾ ರ್ಯಾಲಿ ನಡೆಯುತ್ತಿದ್ದು, ತಾಲೂಕಿನಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಬೇಕು. ಗೊಂದಲ ಬಿಟ್ಟು ರ್ಯಾಲಿ ಯಶಸ್ವಿ ಮಾಡಿ, ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು.
ಅಧಿಕಾರಕ್ಕೆ ತರೋಣ: ಮಾಜಿ ಸಚಿವ ಅಂಜನಮೂರ್ತಿ ಮಾತನಾಡಿ, ತಿರಂಗಾ ರ್ಯಾಲಿಯಲ್ಲಿ ತಾಲೂಕಿನಿಂದ 5ಸಾವಿರಕ್ಕೂ ಹೆಚ್ಚು ಜನರು ಒಟ್ಟಾಗಿ ಹೋಗುವ ಮೂಲಕ ಮುಂದಿನ ದಿನಗಳಲ್ಲಿ ಕ್ಷೇತ್ರ ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.
ಗಲಾಟೆ ಗದ್ದಲ: ಕ್ಷೇತ್ರದಲ್ಲಿ ಹಿಂದೆ ಹೊರಗಿನವರಿಗೆ ಟಿಕೆಟ್ ನೀಡಿದ್ದರಿಂದ ಎರಡೇ ದಿನಕ್ಕೆ ಓಡಿ ಹೋದರು. ಸ್ಥಳೀಯರಿಗೆ ನೀಡದಿದ್ದರೇ ಪಕ್ಷ ಗೆಲ್ಲುವುದು ಕಷ್ಟ ಎಂದು ಕಾರ್ಯಕರ್ತರು ಗಲಾಟೆ ಗದ್ದಲ ಮಾಡುತ್ತಿದ್ದಂತೆ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ ನಮಗೆ ತಿಳಿದಿದೆ. ಈಗ ಮಾತನಾಡುವ ಸಮಯವಲ್ಲ ಎಂದರು.
ಒಗ್ಗಟ್ಟಿನ ಕೊರತೆ ಇದೆ: ಜಿಲ್ಲಾಧ್ಯಕ್ಷ ಮುನಿಸ್ವಾಮಿ ಮಾತನಾಡಿ, ನೆಲಮಂಗಲ ಕ್ಷೇತ್ರದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಇಂದು ಬ್ಲಾಕ್ ಕಾಂಗ್ರೆಸ್‌ನ ಮೂರು ಅಧ್ಯಕ್ಷರು ಬಂದಿಲ್ಲ, ಆಕಾಂಕ್ಷಿಗಳನ್ನು ಒಟ್ಟುಗೂಡಿಸಿ ಅಭ್ಯರ್ಥಿ ಆಯ್ಕೆಯಾಗುವ ತನಕ ಒಂದೇ ಕಡೆ ಕಾರ್ಯಕ್ರಮ ಮಾಡಲು ಸೂಚನೆ ನೀಡಲಾಗುತ್ತದೆ. ಅದಕ್ಕೆ ಎಲ್ಲರೂ ಬದ್ಧವಾಗಿರಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಶಾಮಣ್ಣ, ಕೆಪಿಸಿಸಿ ಉಸ್ತುವಾರಿ ಶ್ರೀನಿವಾಸ್, ಮುಂಬರುವ ವಿಧಾನಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಗಳಾದ ಟಿ.ವೆಂಕಟರಾಂ, ಸಪ್ತಗಿರಿ ಶಂಕರ್ ನಾಯಕ್, ಉಮಾ ದೇವಿ, ಆರೋಗ್ಯಭಾರತಿ ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅರಿಶಿನಕುಂಟೆ ಉಮೇಶ್, ಸಿದ್ದರಾಮಣ್ಣ, ಮಹಿಳಾ ಘಟಕದ ನಾಗರತ್ನಮ್ಮ, ಸೋಲೂರು, ತ್ಯಾಮಗೊಂಡ್ಲು ಯೂತ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ.ಯಶವಂತ್, ಕಿಸಾನ್ ಕಾಂಗ್ರೆಸ್ ಪ್ರದೀಪ್‌ಕುಮಾರ್, ಮುಖಂಡರಾದ ಗೋಪಿ, ರಂಗ ನಾಥ್, ಕನಕರಾಜು, ವಕೀಲ ಯಲ್ಲಪ್ಪ, ರಾಯಲ್‌ನಗರ ರವಿಕುಮಾರ್, ಜನಾರ್ದನ್ ವೆಂಕಟರಾಮು, ಬಸವರಾಜಯ್ಯ, ಕೊಡಗೇಹಳ್ಳಿ ಶಿವಣ್ಣ, ರಂಗನಾಥ್ ಬಾಬು, ಚಿಕ್ಕನಾಗಯ್ಯ ಮತ್ತಿತರಿದ್ದರು.