Advertisement

ಕೈ ಸರ್ಜಿಕಲ್ ದಾಳಿ ಕಾಗದದ ಮೇಲೆ

03:11 AM May 04, 2019 | Team Udayavani |

ಜೈಪುರ: ತಾವು ಅಧಿಕಾರದಲ್ಲಿದ್ದಾಗ ಆರು ಬಾರಿ ಸರ್ಜಿಕಲ್ ದಾಳಿ ನಡೆಸಲಾಗಿದೆ ಎಂದು ಕಾಂಗ್ರೆಸ್‌ ಹೇಳಿಕೊಂಡಿದ್ದಕ್ಕೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಹೇಳಿಕೊಳ್ಳುವ ಸರ್ಜಿಕಲ್ ದಾಳಿಗೆ ಸಾಕ್ಷಿ ಇಲ್ಲ. ಅವರು ಮಾಡಿದ ದಾಳಿ ಕಾಗದದ ಮೇಲಷ್ಟೇ ಇದೆ ಎಂದಿದ್ದಾರೆ. ರಾಜಸ್ಥಾನದ ಸಿಕಾರ್‌ನಲ್ಲಿ ಚುನಾವಣಾ ರ್ಯಾಲಿ ನಡೆಸಿದ ಅವರು ನಮ್ಮ ಸೇನೆಯ ಯೋಧರ ಸಾಮರ್ಥ್ಯ ಕಾಂಗ್ರೆಸ್‌ಗೆ ತಿಳಿದಿಲ್ಲ. ಈಗ ಕಾಂಗ್ರೆಸ್‌ ಮೀಟೂ ಎನ್ನುತ್ತಿದೆ. ಆರಂಭದಲ್ಲಿ ಅವರು ಅಣಕವಾಡಿದ್ದರು. ಅಷ್ಟೇ ಅಲ್ಲ, ಸರ್ಜಿಕಲ್ ದಾಳಿ ನಡೆದೇ ಇಲ್ಲ ಎಂದಿತ್ತು. ಆದರೆ ಈಗ ನಾವೂ ಮಾಡಿದ್ದೇವೆ ಎನ್ನುತ್ತಿದೆ. ಆದರೆ ಜನರಿಗೆ ನನ್ನ ಮೇಲೆ ವಿಶ್ವಾಸವಿತ್ತು. ನನ್ನನ್ನು ಜನರು ಬೆಂಬಲಿಸಿದರು ಎಂದು ಮೋದಿ ಹೇಳಿದ್ದಾರೆ.

Advertisement

ಇದೇ ಕಾಂಗ್ರೆಸ್‌ ನಾಯಕರು ಹಿಂದೆ ಸೇನೆ ಮುಖ್ಯಸ್ಥರನ್ನು ಬೀದಿ ಬದಿಯ ಗೂಂಡಾ ಎಂದಿದ್ದರು. ವಾಯುಪಡೆ ಮುಖ್ಯಸ್ಥರನ್ನು ಸುಳ್ಳುಗಾರ ಎಂದಿದ್ದರು. ನಮ್ಮ ಯೋಧರು ನೆರೆ ದೇಶಕ್ಕೆ ಹೋಗಿ ಉಗ್ರರನ್ನು ಸದೆಬಡಿದು ಬಂದಿದ್ದರೆ, ಅದಕ್ಕೆ ಸಾಕ್ಷ್ಯ ಕೊಡಿ ಎಂದು ಕೇಳುತ್ತಿದೆ ಎಂದು ಟೀಕಿಸಿದ್ದಾರೆ.

ರಾಜಸ್ಥಾನ ಬಿಜೆಪಿಯನ್ನು ಬಯಸುತ್ತಿದೆ: ಶುಕ್ರವಾರ ರಾಜಸ್ಥಾನಕ್ಕೆ ತೆರಳುವ ಮುನ್ನ ವೀಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಪ್ರಧಾನಿ ಮೋದಿ, ರಾಜ್ಯಕ್ಕೆ ಬಿಜೆಪಿ ಅಗತ್ಯವಿದೆ ಎಂದಿದ್ದಾರೆ. ಜನರು ತಮ್ಮ ಮೊಬೈಲ್ನ ಫ್ಲಾಶ್‌ಲೈಟ್ ತೋರಿಸುತ್ತಿರುವ ವೀಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

ಹಾವಿನ ಪ್ರಸ್ತಾಪ: ಪ್ರಿಯಾಂಕಾ ರಾಯ್‌ ಬರೇಲಿಯಲ್ಲಿ ಹಾವಾಡಿಗರ ಜೊತೆ ಮಾತನಾಡುತ್ತಾ ಹಾವನ್ನು ಕೈಯಲ್ಲಿ ಹಿಡಿದ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದು, ನೆಹರು ಕೂಡ ಹಾವಿನ ನೃತ್ಯ ಆನಂದಿಸುತ್ತಿದ್ದರು. ಮೂರು ತಲೆಮಾರು ಕಳೆದರೂ ಆ ಕುಟುಂಬ ಅಲ್ಲೇ ಇದೆ. ಆದರೆ ದೇಶ ಸಾಕಷ್ಟು ಮುಂದುವರಿದಿದೆ ಎಂದು ಟೀಕಿಸಿದ್ದಾರೆ.

ಮೋದಿಗೆ ಕಾಂಗ್ರೆಸ್‌ ತಿರುಗೇಟು
ಯುಪಿಎ ಅವಧಿಯಲ್ಲಿ ನಡೆದ ಸರ್ಜಿಕಲ್ ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವ ಮೂಲಕ ಪ್ರಧಾನಿ ಮೋದಿ ನಮ್ಮ ಸೇನೆಯ ಸಾಮರ್ಥ್ಯವನ್ನು ಅನುಮಾನಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಅಹಮದ್‌ ಪಟೇಲ್ ಹೇಳಿದ್ದಾರೆ. ನಮ್ಮದು ರಕ್ತ. ನಿಮ್ಮದು ನೀರು ಎಂದು ಮೋದಿ ಹೇಳುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಮೋದಿ ಸಿನೆಮಾ 24ಕ್ಕೆ

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನೆಮಾ ಮೇ 24 ರಂದು ಬಿಡುಗಡೆಯಾಗಲಿದೆ. ಎಪ್ರಿಲ್ 11 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತಾದರೂ, ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದಿಂದ ನಿಷೇಧಿಸಲಾಗಿತ್ತು. ಫ‌ಲಿತಾಂಶ ಪ್ರಕಟವಾದ ಮರುದಿನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಉಮಂಗ್‌ ಕುಮಾರ್‌ ನಿರ್ದೇಶನದ ಈ ಈ ಸಿನಿಮಾದಲ್ಲಿ ಮೋದಿ ಪಾತ್ರದಲ್ಲಿ ಬಾಲಿವುಡ್‌ ನಟ ವಿವೇಕ್‌ ಓಬೆರಾಯ್‌ ನಟಿಸಿದ್ದಾರೆ. ಚುನಾವಣೆ ಮುಗಿದಿರುವುದರಿಂದ ಬಿಡುಗಡೆಗೆ ಯಾವುದೇ ಅಡ್ಡಿ ಇರುವುದಿಲ್ಲ ಎಂದು ನಿರ್ಮಾಪಕ ಸಂದೀಪ್‌ ಸಿಂಗ್‌ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಕೇವಲ ನಾಲ್ಕು ದಿನ ಪ್ರಚಾರ ನಡೆಸಿ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಕೊನೆಯ ಹಂತದ ಚುನಾವಣೆ ಮೇ 19 ರಂದು ನಡೆಯಲಿದ್ದು, ಅಂದಿನಿಂದ 23 ರವರೆಗೆ ಪ್ರಚಾರ ನಡೆಸಲಾಗುತ್ತದೆ.

ವಿಪಕ್ಷ ಅರ್ಜಿ ಮುಂದಿನ ವಾರ ವಿಚಾರಣೆ

ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಪ್ಯಾಟ್ ಸ್ಲಿಪ್‌ಗ್ಳನ್ನು ಹೋಲಿಕೆ ಮಾಡುವಂತೆ 21 ವಿಪಕ್ಷಗಳು ಸಲ್ಲಿಸಿದ ಅರ್ಜಿಯ ಮರುಪರಿಶೀಲನೆಯನ್ನು ಮುಂದಿನ ವಾರ ನಡೆಸಲು ಸುಪ್ರೀಂಕೋರ್ಟ್‌ ಸಮ್ಮತಿಸಿದೆ. ಏಪ್ರಿಲ್ 8 ರಂದು ಈ ಸಂಬಂಧ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದ ಸುಪ್ರೀಂಕೋರ್ಟ್‌, ಪ್ರತಿ ಐದು ವಿಧಾನಸಭೆ ಕ್ಷೇತ್ರಗಳ ತಲಾ ಒಂದು ವಿವಿಪ್ಯಾಟ್ ರಸೀದಿಗಳನ್ನು ಹೋಲಿಕೆ ಮಾಡುವಂತೆ ಸೂಚಿಸಿತ್ತು. ಇದಕ್ಕೆ ವಿಪಕ್ಷ ನಾಯಕರು ಅಸಮಾಧಾನ ಹೊಂದಿದ್ದು, ಒಟ್ಟು ಚಲಾವಣೆಯಾದ ಮತಗಳ ಪೈಕಿ ಶೇ. 50ರಷ್ಟನ್ನು ಹೋಲಿಕೆ ಮಾಡುವಂತೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ರಾಹುಲ್ ವಿರುದ್ಧ ಜೇಟ್ಲಿ ವಾಗ್ಧಾಳಿ

ಸಾಮಾನ್ಯ ಮನುಷ್ಯ ಪ್ರಧಾನಿಯಾಗಿದ್ದನ್ನು ರಾಹುಲ್ ವಿರೋಧಿಸಿದರೆ, ಅದು ಅವರಿಗೆ ತಿರುಗುಬಾಣವಾಗಲಿದೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಟೀಕಿಸಿದ್ದಾರೆ. ಕಾಂಗ್ರೆಸ್‌ನ ಈ ಕುಟುಂಬಕ್ಕೆ ಆಳಲೇ ಹುಟ್ಟಿರುವುದು ಎಂಬ ಭಾವವಿದೆ. 2014ರಲ್ಲಿ ಮೋದಿ ಪ್ರಧಾನಿಯಾಗಿದ್ದನ್ನು ಸಹಿಸಿ ಕೊಳ್ಳಲು ಸಾಧ್ಯವಾಗಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ.

Advertisement

ದೇಶಕ್ಕೆ ಎರಡು ಬಜೆಟ್
ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಎರಡು ಬಾರಿ ಬಜೆಟ್ ಮಂಡಿಸಲಾಗುತ್ತದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಒಂದು ರಾಷ್ಟ್ರೀಯ ಬಜೆಟ್ ಆಗಿದ್ದರೆ ಇನ್ನೊಂದು ಬಜೆಟ್ ಅನ್ನು ರೈತರಿಗಾಗಿ ಮಂಡಿಸ ಲಾಗುತ್ತದೆ ಎಂದು ರಾಜಸ್ಥಾನದ ಭಾರತ್‌ಪುರದಲ್ಲಿ ರ್ಯಾಲಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ. ರೈತರ ಬಜೆಟ್‌ನಲ್ಲಿ ಕನಿಷ್ಠ ಬೆಂಬಲ ಬೆಲೆ ಯನ್ನು ನಿಗದಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ರೈತರು ಕೃಷಿ ಸಾಲ ಮರುಪಾವತಿ ಮಾಡದೇ ಜೈಲಿಗೆ ಹೋಗುವುದನ್ನು ತಪ್ಪಿಸುವ ಭರವಸೆಯನ್ನೂ ಅವರು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರಕಾರವು ಉದ್ಯಮಿಗಳ ಭಾರಿ ಮೊತ್ತದ ಸಾಲ ಮನ್ನಾ ಮಾಡುತ್ತದೆ. ಆದರೆ ರೈತರಿಗೆ ಶಿಕ್ಷೆ ವಿಧಿಸುತ್ತದೆ ಎಂದಿದ್ದಾರೆ. ಇದನ್ನು ತಡೆಯಲು ಹೊಸ ಕಾನೂನು ಜಾರಿಗೆ ತರಲಾಗುತ್ತದೆ. ಯಾವ ರೈತನನ್ನೂ ಜೈಲಿಗೆ ಹಾಕದಂತೆ ತಡೆಯುತ್ತೇವೆ ಎಂದಿದ್ದಾರೆ.

ರೈತರ ಬಜೆಟ್‌ನಲ್ಲಿ ಆಹಾರ ಧಾನ್ಯಗಳ ಬೆಲೆ ನಿಗದಿ, ಶೀತಲೀಕರಣ ಘಟಕ ಸ್ಥಾಪನೆ ಹಾಗೂ ಆಹಾರ ಸಂಸ್ಕರಣೆ ಘಟಕಗಳ ಸ್ಥಾಪನೆಯ ಬಗ್ಗೆ ಪ್ರಸ್ತಾಪಿಸಲಾಗುತ್ತದೆ. ಇದನ್ನು ಸಾಮಾನ್ಯ ಬಜೆಟ್‌ಗೂ ಮೊದಲೇ ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next