ಜಗದಾಳಪುರ : “ಬಡ ಆದಿವಾಸಿ ಯುವಕರ ಬಾಳನ್ನು ನಾಶಮಾಡಿರುವ ನಗರ ಮಾವೋವಾದಿಗಳನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಈ ತಿಂಗಳ ಅಂತ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು ಕಾಣಲಿರುವ ಛತ್ತೀಸ್‌ಗಢದಲ್ಲಿ ತನ್ನ ಮೊದಲ ಚುನಾವಣಾ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, “ಕಾಂಗ್ರೆಸ್ ಪಕ್ಷ ಆದಿವಾಸಿಗಳ (ಬುಡಕಟ್ಟು ಜನರ) ತಮಾಷೆ ಉಡಾಯಿಸುತ್ತಿದೆ’ ಎಂದು ಹೇಳಿದರು.
“ಆದಿವಾಸಿಗಳನ್ನು ಕಾಂಗ್ರೆಸ್ ಏಕಾಗಿ ತಮಾಷೆ ಮಾಡುತ್ತಿದೆ ಎನ್ನುವುದು ನನಗೆ ಅರ್ಥವಾಗುವುದಿಲ್ಲ. ಹಿಂದೊಮ್ಮೆ ನಾನು ಈಶಾನ್ಯ ಭಾರತದ rallyಗಾಗಿ ಹೋಗಿದ್ದಾಗ ಅಲ್ಲಿ ಆದಿವಾಸಿ ಜನರು ತಲೆಗೆ ಧರಿಸುವ ದಿರಿಸನ್ನು ನಾನು ತೊಟ್ಟಿದ್ದೆ; ಅದನ್ನು ಕಂಡು ಕಾಂಗ್ರೆಸ್ ತಮಾಷೆ ಮಾಡಿತು. ನಿಜಕ್ಕಾದರೆ ಕಾಂಗ್ರೆಸ್ ಆದಿವಾಸಿಗಳ ಸಂಸ್ಕೃತಿಯನ್ನು ಅವಮಾನಿಸುತ್ತಿದೆ” ಎಂದು ಮೋದಿ ಹೇಳಿದರು.
”ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಕಂಡಿದ್ದ ಸಮೃದ್ಧ, ಸಿರಿವಂತ ಛತ್ತೀಸ್‌ಗಢದ ಕನಸನ್ನು ನಾನು ನನಸು ಮಾಡದೇ ವಿರಮಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಮಾವೋವಾದಿ ಪಿಡುಗನ್ನು ನೆಪವಾಗಿರಿಸಿಕೊಂಡು ನಕ್ಸಲ್ ಪೀಡಿತ ಬಸ್ತಾರ್ ಪ್ರಾಂತ್ಯದ ಅಭಿವೃದ್ಧಿ ಸಾಧಿಸುವುದು ಅಸಾಧ್ಯ ಎಂದು ಹೇಳಿ ಏನೂ ಅಭಿವೃದ್ಧಿ ಸಾಧಿಸದೆ ಕೈಚೆಲ್ಲಿತ್ತು; ಆದರೆ ನಾವು ಹಾಗೆ ಮಾಡುವುದಿಲ್ಲ; ಛತ್ತೀಸಗಢದ ಸಮಗ್ರ ಅಭಿವೃದ್ಧಿಯನ್ನು ಸಾಧಿಸಿಯೇ ತೀರುತ್ತೇವೆ” ಎಂದು ಪ್ರಧಾನಿ ಮೋದಿ ಹೇಳಿದರು.
“ನಗರ ಮಾವೋವಾದಿಗಳು ನಗರಗಳಲ್ಲಿನ ಏರ್ ಕಂಡೀಶನ್ ಬಂಗ್ಲೆಗಳಲ್ಲಿ ವಾಸಿಸುತ್ತಾರೆ. ಅವರ ಮಕ್ಕಳು ವಿದೇಶದಲ್ಲಿ ಕಲಿಯುತ್ತಾರೆ; ಆದರೆ ಅವರು ನಕ್ಸಲ್ ಪ್ರಾಬಲ್ಯದ ಪ್ರದೇಶಗಳಲ್ಲಿನ ಆದಿವಾಸಿ ಮಕ್ಕಳ ರಿಮೋಟ್ ಕಂಟ್ರೋಲ್ ಹೊಂದಿರುತ್ತಾರೆ. ಅಂತಿರುವಾಗ ನಾನು ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನಿಸಲು ಬಯಸುತ್ತೇನೆ : ಸರಕಾರ ಕ್ರಮ ತೆಗೆದುಕೊಳ್ಳಲು ಮುಂದಾಗುವಾಗ ನೀವೇಕೆ ನಗರ ಮಾವೋವಾದಿಗಳನ್ನು ಬೆಂಬಲಿಸುತ್ತೀರಿ ? ನೀವೊಮ್ಮೆ ಬಸ್ತಾರ್ ಗೆ ಬನ್ನಿ; ಇಲ್ಲಿ ನಕ್ಸಲಿಸಂ ವಿರುದ್ಧ ಮಾತನಾಡಿ’ ಎಂದು ಮೋದಿ ಚ್ಯಾಲೆಂಜ್ ಹಾಕಿದರು.