ರಾಯಚೂರು: ”ಊರಲ್ಲಿರುವ ಮಕ್ಕಳೆಲ್ಲ ನನ್ನದೇ ಅಂಂದ್ರೆ ಜನ ಕಾಲಲ್ಲಿರೋದನ್ನ ಕೈಗೆ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ಅದೇ ಸ್ಥಿತಿ ನಿರ್ಮಾಣ ಆಗಿದೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬೆಂಗಳೂರು ಮೈಸೂರು ದಶಪಥ ಹೆದ್ದಾರಿಗೆ ಒಂದು ರೂಪಾಯಿ ಬಿಡುಗಡೆ ಮಾಡಿದ್ದರೆ ದಾಖಲೆ ಕೊಡಲಿ. ಹಣ ಬಿಡುಗಡೆ, ಟೆಂಡರ್, ಮಂಜೂರಾತಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಕಾಂಗ್ರೆಸ್ ನವರು ಚಂದ್ರ ಲೋಕದಲ್ಲಿ ಸೈಟ್ ಕೊಡುವುದಕ್ಕೂ ಡಿಪಿಆರ್ ಆಗಿದೆ ಎನ್ನುತ್ತಾರೆ. ಮೂಗಿಗೆ ತುಪ್ಪ ಹಚ್ಚುವ ಕೆಲಸ ಜನ್ಮದಿಂದಲು ಕಾಂಗ್ರೆಸ್ ಮಾಡಿಕೊಂಡು ಬರುತ್ತಿದೆ. 10 ವರ್ಷ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿತ್ತು. ಆಗ ಯಾಕೆ ಮಾಡಲಿಲ್ಲ. ಬಿಜೆಪಿ ಡಬಲ್ ಇಂಜಿನ್ ಸರಕಾರ ಮಾಡಿದ ಕೆಲಸಕ್ಕೆ ಸೀಲ್ ಹಾಕಲಿಕ್ಕೆ ಹೋಗ್ತಾರೆ ಅಂದ್ರೆ ಇವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲವೇ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ಬಗ್ಗೆ ನನಗೆ ಮಾಹಿತಿ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಯಾರಿಗೆ ಬೇಕಾದರೂ ವೋಟ್ ಹಾಕಬಹುದು. ಯಾರೂ ಯಾವ ಪಕ್ಷಕ್ಕೆ ಬೇಕಾದರೂ ಸೇರ್ಪಡೆ ಆಗಬಹುದು. ಮುಖ್ಯಮಂತ್ರಿಗಳಿಗೆ ಏನು ಮಾಹಿತಿ ಇದೆ ಅಂತ ಗೊತ್ತಿಲ್ಲ. ನಮ್ಮಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಸಹ ಆಗಿಲ್ಲ ಎಂದರು.
ಬಿಜೆಪಿ ಟಿಕೆಟ್ ಬಗ್ಗೆ ಮಾತನಾಡುವ ಕಾಂಗ್ರೆಸ್ ಮೊದಲು ತಮ್ಮ ಪಕ್ಷದ ಸಮಸ್ಯೆ ಬಗೆ ಹರಿಸಿಕೊಳ್ಳಲಿ.ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೊಡುವವರು ಯಾರೂ.ಡಿಸೆಂಬರ್ ಒಳಗೆ 150 ಕ್ಷೇತ್ರದ ಟಿಕೆಟ್ ಫೈನಲ್ ಮಾಡುತ್ತೇವೆ ಎಂದಿದ್ದರು. ಮಾರ್ಚ್ ಬಂದರೂ ಘೋಷಣೆ ಮಾಡಲಿಲ್ಲ. ಟಿಕೆಟ್ ಘೋಷಣೆಯಾದ ತಕ್ಷಣವೇ ಕಾಂಗ್ರೆಸ್ ನಲ್ಲಿ ಆಂತರಿಕ ಸ್ಫೋಟ ಭುಗಿಲೇಳಲಿದೆ. ಡಿಕೆಶಿ, ಸಿದ್ದರಾಮಯ್ಯ, ಖರ್ಗೆ ಬೆಂಬಲಿಗರು ಬಡಿದಾಟ ನಡೆಸುತ್ತಾರೆ.
ಸಚಿವ ವಿ ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಊಹಾಪೋಹ. ಇಂಥ ವಿಷಯಗಳ ಬಗ್ಗೆ ಎಲ್ಲಿ ಬೇಕಾದಲ್ಲಿ ಉತ್ತರಿಸಬಾರದು. ಅವರು ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನ್ನು ನೋಡಿದ್ದೇನೆ. ಸೋಮಣ್ಣ ಬಿಜೆಪಿ ಬಿಡುವ ಪ್ರಶ್ನೆ ಇಲ್ಲ ಎಂದರು.