ಕಾಪು: ಮಂಗಳೂರಿನ ಸಹ್ಯಾದ್ರಿ ಕಾಲೇಜ್‌ನಲ್ಲಿ ಫೆ. 17ರಂದು ನಡೆಯಲಿರುವ ಕಾಂಗ್ರೆಸ್ ರಾಜ್ಯ ಮಟ್ಟದ ಸಮಾವೇಶದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರತಿ ಬೂತ್‌ಗಳಿಂದ 20 ಮಂದಿಯಂತೆ 1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಕಾಪು ವಿಧಾನಸಭಾ ಕ್ಷೇತ್ರದಿಂದ ಐದು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಕಾಪು ಪ್ರೆಸ್ ಕ್ಲಬ್‌ನಲ್ಲಿ ಫೆ. 15ರ ಗುರುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಡುಪಿ ಜಿಲ್ಲೆಯಿಂದ ಹದಿನೈದು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದು ಸಮಾವೇಶಕ್ಕೆ ಬೆಳಿಗ್ಗೆ 10 ಗಂಟೆಗೆ ಕಾಪುವಿನಿಂದ ಹೊರಟು, 11 ಗಂಟೆಗೆ ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಹೆಜಮಾಡಿ ಟೋಲ್‌ನಲ್ಲಿ ಜತೆ ಸೇರಲಿದ್ದಾರೆ. ಅಲ್ಲಿಂದ 300ಕ್ಕೂ ಅಧಿಕ ಬಸ್‌ಗಳ ಮೂಲಕವಾಗಿ ಕಾರ್ಯಕರ್ತರು ಸಮಾವೇಶದ ಮೈದಾನದವರೆಗೆ ತೆರಳಲಿದ್ದಾರೆ. ಸರಕಾರದ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಸಾರುವ ಐದು ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದರು.
ಈ ಸಮಾವೇಶವು ಲೋಕಸಭೆ, ಜಿ.ಪಂ., ತಾ.ಪಂ. ಚುನಾವಣೆಗೆ ದಿಕ್ಸೂಚಿಯಾಗಲಿದೆ. ಕರಾವಳಿಯಲ್ಲಿ ಪಕ್ಷ ಸಂಘಟನೆಯನ್ನು ಬಲಪಡಿಸುವುದು ಮತ್ತು ಕಾರ್ಯಕರ್ತರನ್ನು ಪುನರ್ ಸಂಘಟಿಸುವುದು. ಜನತೆಗೆ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ತಿಳಿಯಪಡಿಸುವುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಉಸ್ತುವಾರಿ ರಣಜೀತ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸರಕಾರದ ಸಚಿವರು, ರಾಜ್ಯದ ಶಾಸಕರು, ವಿಧಾನ ಪರಿಷತ್ ಸದಸ್ಯರು ಸಹಿತ ಪಕ್ಷದ ರಾಷ್ಟ್ರ, ರಾಜ್ಯ ಮಟ್ಟದ ನಾಯಕರು, ಪ್ರಮುಖರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಲೋಕಸಭೆಗೆ ಸ್ಪರ್ಧೆ ; ಪಕ್ಷದ ತೀರ್ಮಾನಕ್ಕೆ ಬದ್ಧ: ಲೋಕಸಭೆಗೆ ಸ್ಪರ್ಧಿಸುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ನನಗೆ ಇಂತಹ ಕ್ಷೇತ್ರವನ್ನು ನೀಡಿ ಎಂದು ಕೇಳಿಲ್ಲ. ಅಭ್ಯರ್ಥಿಯೆಂದು ಹೇಳಿಕೊಂಡು ಬಂದಿಲ್ಲ. ಅವಕಾಶ ಮಾಡಿಕೊಡುವುದು ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನವಾಗಲಿದೆ. ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಎರಡೂ ಜಿಲ್ಲೆಗಳಲ್ಲಿಯೂ ಕೆಲಸ ಮಾಡಿದ್ದೇನೆ. ಮಂಗಳೂರು ಲೋಕಸಭಾ ಕ್ಷೇತ್ರದಲ್ಲೂ ಕೆಲಸ ಮಾಡಿದ ಅನುಭವವಿದ್ದು ಪಕ್ಷದ ಯಾವುದೇ ತೀರ್ಮಾನಕ್ಕೂ ನಾನು ಬದ್ಧನಾಗಿದ್ದೇನೆ ಎಂದರು.
ಹಿಂದಿನ ಸರಕಾರದ ಸಾಲದ ಹೊರೆ : ಕಾಂಗ್ರೆಸ್ ಸರಕಾರದ ಗ್ಯಾರಂಟಿ ಸ್ಕೀಮ್‌ನಿಂದಾಗಿ ಯಾವುದೇ ರೀತಿಯಲ್ಲಿ ಅನುದಾನ ಕೊರತೆಯಾಗಿಲ್ಲ. ಹಿಂದಿನ ಬೊಮ್ಮಾಯಿ ಸರಕಾರದ ಅವಽಯಲ್ಲಿ ಮಂಡಿಸಿದ ಬಜೆಟ್‌ಗೆ ಅನುಗುಣವಾಗಿ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ. ಹಿಂದಿನ ಸರಕಾರದ ಅವಽಯ 1.50 ಲಕ್ಷ ಕೋಟಿ ರೂಪಾಯಿ ಸಾಲದ ಹೊರೆ ಸಿದ್ಧರಾಮಯ್ಯ ಸರಕಾರದ ಮೇಲಿದ್ದು ಅದನ್ನು ನಿಭಾಯಿಸುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆಯಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಗ್ಯಾರಂಟಿ ಸ್ಕೀಂಗಾಗಿ 800 ಕೋ. ರೂ. ವಿನಯೋಗ: ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ 800 ಕೋಟಿ ರೂಪಾಯಿ ವಿನಿಯೋಗವಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕೆ ಕರಾವಳಿಯ ಶಾಸಕರು ಪೂರಕವಾಗಿ ಸ್ಪಂಧಿಸಿಲ್ಲ. ಆದರೂ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲಾಗಿದ್ದು ಫಲಾನುಭವಿಗಳಿಗೆ ಇದರ ಸಂಪೂರ್ಣ ಪ್ರಯೋಜನ ದೊರಕಿದೆ. ಮುಂದೆ ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ನಡೆಸಲಿದ್ದೇವೆ. ಬಿಟ್ಟು ಹೋಗಿರುವ ಫಲಾನುಭವಿಗಳ ಪಟ್ಟಿಮಾಡಿಕೊಂಡು ಎಲ್ಲರಿಗೂ ಗ್ಯಾರಂಟಿ ಸ್ಕೀಂಗಳನ್ನು ತಲುಪಿಸಲಿದ್ದೇವೆ ಎಂದರು.
ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ಬ್ಲಾಕ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಉತ್ತರ ಬ್ಲಾಕ್ ಅಧ್ಯಕ್ಷ ಸಂತೋಷ್ ಕುಲಾಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಶ್ವಿನಿ ಬಂಗೇರ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಪುರ್ಟಾಡೋ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.