Advertisement

ಸಿಎಂ, ಕೆಪಿಸಿಸಿ ಅಧ್ಯಕ್ಷರ ವಿರುದ್ಧವೇ ದೂರು; ಕೈ ಉಸ್ತುವಾರಿಗೆ ಶಾಕ್!

05:14 PM May 08, 2017 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿರುದ್ಧವೇ ಕೆಪಿಸಿಸಿ ಪದಾಧಿಕಾರಿಗಳು, ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರ ಬಳಿ ದೂರು ನೀಡಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಮೂಗುದಾರ ಹಾಕುವಂತೆ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ನೇತೃತ್ವದಲ್ಲಿ ನಡೆದ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹದ ವೇಳೆ,  ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ವಿರುದ್ಧವೇ ದೂರುಗಳ ಸುರಿಮಳೆಯಾಗಿತ್ತು.

ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಪ್ತರಿಗೆ ಮಾತ್ರ ಮಣೆ ಹಾಕಿದ್ದಾರೆ. ಅಲ್ಲದೇ ನಿಗಮ, ಮಂಡಳಿ ನೇಮಕಕ್ಕೆ ಅನಗತ್ಯ ವಿಳಂಬ ಮಾಡಿದರು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿಲ್ಲ. ಪಕ್ಷದ ಸಂಘಟನೆಗೂ ಸರ್ಕಾರ ಹಾಗೂ ಸಿಎಂ ಸಾಥ್ ಕೊಟ್ಟಿಲ್ಲ ಎಂದು ದೂರಿದ ಕಾಂಗ್ರೆಸ್ ಪದಾಧಿಕಾರಿಗಳು, ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎಂದು ಹೇಳುವುದು ಬೇಡ. ಸಾಮೂಹಿಕ ನಾಯಕತ್ವದಲ್ಲಿ ಹೋದರೆ ಪಕ್ಷಕ್ಕೆ ಅನುಕೂಲ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾದ ಜಿ.ಪರಮೇಶ್ವರ ಅವರನ್ನು ಕೂಡಲೇ ಬದಲಾವಣೆ ಮಾಡಬೇಕು. ಎರಡೂ ಸ್ಥಾನಗಳನ್ನು ನಿಭಾಯಿಸಲು ಅವರಿಗೆ ಕಷ್ಟವಾಗುತ್ತಿದೆ. ಸಚಿವ ಸಂಪುಟದಲ್ಲಿ ಇರುವುದರಿಂದ ರಾಜ್ಯ ಸರ್ಕಾರದ ತಪ್ಪು ನಿರ್ಧಾರಗಳ ಬಗ್ಗೆಯೂ ಅವರು ತುಟಿ ಬಿಚ್ಚುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರ ವಿರುದ್ಧವೂ ಕಾರ್ಯಕರ್ತರು ದೂರನ್ನು ನೀಡಿದರು.

ಬಳಿಕ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು, ಒಬ್ಬೊಬ್ಬರೇ ಪದಾಧಿಕಾರಿಗಳನ್ನು ಕರೆದು ಜಿಲ್ಲಾವಾರು, ತಾಲೂಕುವಾರು ಪಕ್ಷದ ಸ್ಥಿತಿಗತಿ, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಜಾತಿವಾರು ಲೆಕ್ಕಚಾರ, ಜೆಡಿಎಸ್, ಬಿಜೆಪಿ ಪ್ರಾಬಲ್ಯ ಇರುವ ಜಿಲ್ಲೆಯ ಬಗ್ಗೆ ವಿವರಗಳನ್ನು ಕಲೆ ಹಾಕಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next