ಶಿವಮೊಗ್ಗ: ಕಾಂಗ್ರೆಸ್ ನ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಪ್ರಿಯಾಂಕ ಖರ್ಗೆ ಅವರು ಬಾಯಿ ಚಪಲಕ್ಕೆ ಬೇಕಾದ್ದನ್ನು ಹೇಳುತ್ತಿದ್ದಾರೆ. ಬಿಟ್ ಕಾಯಿನ್ ಬಗ್ಗೆ ಒಂದೇ ಒಂದು ದಾಖಲೆ ತೋರಿಸಿದರೆ ನಾವು ನಿಮ್ಮನ್ನು ಮೆಚ್ಚುತ್ತೇವೆ. ಖಾಲಿ ಡಬ್ಬ ಬಾರಿಸಿದ ಹಾಗೆ ಬಾರಿಸುತ್ತಿದ್ದಾರೆ. ಬರಿ ಸಿಕ್ಕಾಪಟ್ಟೆ ಶಬ್ದ ಅಷ್ಟೇ. ತುಂಬಿದ ಕೊಡ ಯಾವಾಗಲೂ ಶಬ್ದ ಮಾಡುವುದಿಲ್ಲ. ಬಿಟ್ ಕಾಯಿನ್ ಬಿಟ್ ಕಾಯಿನ್ ಎಂದು ಸುಮ್ಮನೆ ಶಬ್ದ ಮಾಡುತ್ತಿದ್ದಾರೆ. ಇಂತಹವರು ಪ್ರಕರಣದಲ್ಲಿ ಇದ್ದಾರೆಂದು ಸ್ಪಷ್ಟವಾಗಿ ಹೇಳಿದರೆ ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಏನು ಉದ್ಯೋಗವಿಲ್ಲ. ಅದಕ್ಕೆ ಬಿಟ್ ಕಾಯಿನ್ ವಿಚಾರ ಎತ್ತುಕೊಂಡಿದ್ದಾರೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿಯ ಯಾವುದೇ ಒಬ್ಬ ನಾಯಕ, ಮಂತ್ರಿನೋ, ಮುಖ್ಯಮಂತ್ರಿನೋ, ಪದಾಧಿಕಾರಿಗಳೋ ಯಾರಾದರೂ ಒಬ್ಬರಿದ್ದಾರೆ ಎನ್ನುವುದನ್ನು ಒಂದು ಪೀಸ್ ಪೇಪರ್ ದಾಖಲೆ ತೋರಿಸಲಿ. ತೋರಿಸಿದರೆ ಅವರ ಬಗ್ಗೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಬರಿ ಪುಕ್ಸಟೆ ನಮ್ಮ ಬಳಿ ದಾಖಲೆ ಇದೆ. ನಾವು ದಾಖಲೆ ಬಿಡುಗಡೆ ಮಾಡ್ತೀವಿ. ಈ ರೀತಿ ಹೇಳಿ ಹೇಳಿ ಅವರು ಅಧಿಕಾರ ಕಳೆದುಕೊಂಡರು. ಗೌರವವನ್ನು ಕಳೆದುಕೊಳ್ಳುತ್ತಿದ್ದಾರೆ. ಬಿಟ್ ಕಾಯನ್ ಬಗ್ಗೆ ನಮಗೆ ಯಾವ ಮುಲಾಜು ಇಲ್ಲ ಎಂದರು.
ಪರಿಷತ್ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ 25 ಸ್ಥಾನಗಳಿಗೆ ಪರಿಷತ್ ಚುನಾವಣೆ ನಡೆಯುತ್ತಿದೆ. ಈಗಾಗಲೇ ಅಭ್ಯರ್ಥಿ ಆಯ್ಕೆ ಬಗ್ಗೆ ಕಟೀಲ್ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ. ಅಭ್ಯರ್ಥಿಗಳ ಪಟ್ಟಿ ಹೆಚ್ಚು ಕಡಿಮೆ ಫೈನಲ್ ಮಾಡಿ ತೀರ್ಮಾನ ತೆಗೆದುಕೊಂಡಿದ್ದೇವೆ. ಅಧ್ಯಕ್ಷರು, ಸಿಎಂ ಚರ್ಚೆ ಮಾಡಿ ಕೇಂದ್ರದ ನಾಯಕರಿಗೆ ಕಳುಹಿಸುತ್ತಾರೆ. ಕೇಂದ್ರದ ನಾಯಕರು ಇಂದು ಅಥವಾ ನಾಳೆ ಪಟ್ಟಿ ಬಿಡುಗಡೆ ಮಾಡುತ್ತಾರೆ ಎಂದರು.
ಇದನ್ನೂ ಓದಿ:ಮಹಿಳೆ ಮತ್ತು ಆಕೆಯ ಮಗಳ ಮೇಲೆ ಸಾಮೂಹಿಕ ರೇಪ್ ಕೇಸ್; ಮಾಜಿ ಸಚಿವ ಪ್ರಜಾಪತಿಗೆ ಜೀವಾವಧಿ
ಪರಿಷತ್ ಗೆ ಪುತ್ರ ಕಾಂತೇಶ್ ಸ್ಪರ್ಧೆ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮಂತ್ರಿ ಆಗಿರುವ ಕಾರಣ ಪುತ್ರ ಕಾಂತೇಶ್ ಸ್ಪರ್ಧೆ ಮಾಡುವುದು ಬೇಡವೆಂದು ತೀರ್ಮಾನ ತೆಗೆದುಕೊಂಡಿದ್ದೇನೆ. ನಾನು ಮಂತ್ರಿಯಾಗಿರುವ ಸಂದರ್ಭದಲ್ಲಿ ಅವನು ಎಂಎಲ್ ಎ, ಎಂಎಲ್ ಸಿ ಆಗಕೂಡದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗಾಗಿ ಕಾಂತೇಶ್ ನ ಹೆಸರು ಬೇಡ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಈ ನನ್ನ ಅಭಿಪ್ರಾಯವನ್ನು ಪಕ್ಷದ ವರಿಷ್ಠರು ಒಪ್ಪುತ್ತಾರೆ ಎಂದು ಭಾವಿಸುತ್ತೇನೆ. ಆದರೆ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೋ, ಅದಕ್ಕೆ ಯಾವತ್ತು ಬದ್ದ. ನನ್ನ ಮಗನ ಹೆಸರನ್ನು ಬಿಟ್ಟು ಬೇರೆ ಹೆಸರನ್ನು ಚರ್ಚೆ ಮಾಡಿದ್ದೇವೆ ಎಂದು ಈಶ್ವರಪ್ಪ ಹೇಳಿದರು.
ಪುತ್ರ ವಿಧಾನಸಭೆ ಮೇಲೆ ಕಣ್ಣಿಟ್ಟಿದ್ದಾರಾ ಎಂಬ ವಿಚಾರಕ್ಕೆ ಮಾತನಾಡಿದ ಅವರು, ಗೊತ್ತಿಲ್ಲ, ಯಾಕೆ ಆಗಬಾರದು ಎಂದರು.
ಕಳೆದ ಬಾರಿ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯ ಶಾಸಕರು ಕಡಿಮೆಯಿದ್ದರು. ಜಿಲ್ಲೆಯಲ್ಲಿ ಗ್ರಾ.ಪಂ. ಸದಸ್ಯರು, ಚುನಾಯಿತ ಜನಪ್ರತಿನಿಧಿಗಳ ಕಡಿಮೆಯಿದ್ದರು. ಆಗಾಗಿ ಕ್ಷೇತ್ರ ಕಳೆದುಕೊಂಡಿದ್ದೇವು. ಈ ಬಾರಿ ಶಿವಮೊಗ್ಗ ಸೇರಿ ರಾಜ್ಯದಲ್ಲಿ ಅತಿ ಹೆಚ್ಚು ಎಂಎಲ್ ಎ, ಎಂಪಿ ಗೆದ್ದುಕೊಂಡಿದ್ದೇವೆ. ಗ್ರಾ.ಪಂ. ಅತಿ ಹೆಚ್ಚು ಗೆದ್ದಿದ್ದೇವೆ. ಈ ಬಾರಿ ಪರಿಷತ್ ನಲ್ಲಿ ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಇಲ್ಲಿಯವರೆಗೆ ಬಿಜೆಪಿಗೆ ವಿಧಾನಸಭೆಯಲ್ಲಿ ಬಹುಮತ ಇತ್ತು. ಪರಿಷತ್ ನಲ್ಲಿ ಪೂರ್ಣ ಬಹುಮತ ಇರಲಿಲ್ಲ. 25 ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿರುವುದರಿಂದ ಈ ಬಾರಿ ಅತಿ ಹೆಚ್ಚು ಸ್ಥಾನ ಪಡೆಯುವ ಮೂಲಕ ಪರಿಷತ್ ನಲ್ಲಿ ಸಹ ಬಹುಮತ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.