Advertisement

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

02:08 AM Dec 26, 2024 | Team Udayavani |

ಬೆಳಗಾವಿ: ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಐತಿಹಾಸಿಕ ಕಾರ್ಯಕ್ರಮ. ಇದರ ಭಾಗವಾಗಿ ಬೆಳಗಾವಿಯ ಸಿಪಿಎಡ್‌ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿರುವ ಸ್ಥಳಕ್ಕೆ ಮಹಾತ್ಮ ಗಾಂಧಿ ನವನಗರ ಎಂದು ನಾಮಕರಣ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ ಎಂಬ ಘೋಷಣೆ ಮಾಡಿದ್ದೇವೆ. ಡಿ. 26ರಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ಗಾಂಧಿ ಬಾವಿ (ಪಂಪ ಸರೋವರ) ಬಳಿ ನಡೆಯಲಿದೆ. 1924ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದಲ್ಲಿ ಮಹಾತ್ಮ ಗಾಂಧಿ ಅವರು ಅಧ್ಯಕ್ಷರಾಗಿದ್ದರು. ಇಂದು ಅದೇ ಸ್ಥಾನದಲ್ಲಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿರುವುದು ನಮ್ಮ ಹೆಮ್ಮೆ ಎಂದರು.

1924ರಲ್ಲಿ ನಡೆದ ಅಧಿವೇಶನ ಸಮಯದಲ್ಲಿ ಕರ್ನಾಟಕದವರೇ ಆದ ಗಂಗಾಧರ ದೇಶಪಾಂಡೆ ಹಾಗೂ ಜವಾಹರ್‌ ಲಾಲ್‌ ನೆಹರೂ ಅವರು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಆಗ 80 ಎಕರೆ ಜಾಗದಲ್ಲಿ ಅಧಿವೇಶನ ನಡೆದಿತ್ತು. ಈಗ ಅದೇ ಸ್ಥಳದಲ್ಲಿ ಕಾರ್ಯಕಾರಿ ಸಮಿತಿ ಸಭೆ ಮಾಡುತ್ತಿದ್ದೇವೆ ಎಂದರು.
1924ರ ಅಧಿವೇಶನದಲ್ಲಿ ನಮ್ಮ ನಾಯಕರು ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿಕೊಂಡು ದೇಶಕ್ಕೆ ಮಾರ್ಗದರ್ಶನ ನೀಡಿದ್ದರು.

ಸ್ವಾತಂತ್ರ್ಯ ತಂದು ಕೊಟ್ಟು ಮಹಾತ್ಮರಾದರು. ಇದನ್ನು ಸ್ಮರಿಸಲು ನಾವು ಕಾರ್ಯಕ್ರಮ ರೂಪಿಸಿದ್ದೇವೆ. ಇದು ಕೇವಲ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮವಲ್ಲ, ಎಲ್ಲರ ಕಾರ್ಯಕ್ರಮ. ಇಂದಿನ ಪರಿಸ್ಥಿತಿಯಲ್ಲಿ ದೇಶ ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು, ದೇಶಕ್ಕೆ ಯಾವ ರೀತಿ ಶಕ್ತಿ ತುಂಬಬೇಕು ಎಂದು ಈ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಿದ್ದೇವೆ ಎಂದರು.

ಇಂದು ಏನು ಕಾರ್ಯಕ್ರಮ?
ಡಿ. 26ರಂದು ಬೆಳಗ್ಗೆ 10 ಗಂಟೆಗೆ ವೀರಸೌಧದಲ್ಲಿ ಗಾಂಧಿ ಪುತ್ಥಳಿ ಅನಾವರಣ, ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. 10.45ಕ್ಕೆ ಖಾದಿ ಮೇಳ ಉದ್ಘಾಟನೆ. 11.15ಕ್ಕೆ ಗಂಗಾಧರ ದೇಶಪಾಂಡೆ ಅವರ ಸ್ಮಾರಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅನಾವರಣ ಮಾಡುವರು. ಅನಂತರ ಗಂಗಾಧರ ದೇಶಪಾಂಡೆ ಅವರ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಮಧ್ಯಾಹ್ನ 3 ಗಂಟೆಗೆ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ರಾತ್ರಿ 7ಕ್ಕೆ ಎಐಸಿಸಿ ಅಧ್ಯಕ್ಷರಿಂದ ಭೋಜನಕೂಟ ಏರ್ಪಡಿಸಲಾಗಿದೆ.

Advertisement

ನಾಳೆ ಏನು ಕಾರ್ಯಕ್ರಮ?
ಡಿ. 27ರಂದು ಬೆಳಗ್ಗೆ 10.30ಕ್ಕೆ ಸುವರ್ಣ ವಿಧಾನಸೌಧದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ  ಮಹಾತ್ಮ ಗಾಂಧೀಜಿ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಮುಖ್ಯಮಂತ್ರಿಗಳು ಅಧ್ಯಕ್ಷತೆ ವಹಿಸಲಿದ್ದು, ಸಭಾಧ್ಯಕ್ಷ ಯು.ಟಿ. ಖಾದರ್‌, ಸಭಾಪತಿ ಬಸವರಾಜ ಹೊರಟ್ಟಿ ಅವರ ಮುಖಂಡತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಎಲ್ಲ ಪಕ್ಷದ ನಾಯಕರು ಪಾಲ್ಗೊಳ್ಳುವರು. ಅನಂತರ 12 ಗಂಟೆಗೆ ಮುಖ್ಯಮಂತ್ರಿಗಳಿಂದ ಔತಣಕೂಟ ಆಯೋಜಿಸಲಾಗಿದೆ. ಇದಾದ ಬಳಿಕ ಮಧ್ಯಾಹ್ನ 1 ಗಂಟೆಗೆ ಸಿಪಿಎಡ್‌ ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next