Advertisement

Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ

02:36 AM Dec 24, 2024 | Team Udayavani |

ಬೆಳಗಾವಿ: ಕಾಂಗ್ರೆಸ್‌ ಪಕ್ಷದ ಅಧ್ಯಕ್ಷನಾಗಿ ನಾನಿನ್ನೂ ಬದುಕಿದ್ದೇನೆ. ನಾನಿನ್ನೂ ಸತ್ತಿಲ್ಲ. ಬಿಜೆಪಿಯವರ ಯಾವ ಪ್ರತಿಭಟನೆಗೂ ನಾನು ಹೆದರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಬೆಳಗಾವಿಯಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದೆ. ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆ ಎಂದರೆ ನಾನು ಹೆದರುವುದಿಲ್ಲ. ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿ ಇನ್ನೂ ಬದುಕಿದ್ದಾನೆ ಎಂದರು.

ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಹೋರಾಟ ನಡೆಸಿದ್ದಾರೆ. ಅಂಥ ಐತಿಹಾಸಿಕ ಕಾರ್ಯಕ್ರಮ 1924ರಲ್ಲಿ ನಡೆದಾಗ ಗಾಂಧೀಜಿ ಅಧ್ಯಕ್ಷರಾಗಿದ್ದರು. ಸ್ವಾತಂತ್ರ್ಯ ಹೋರಾಟದ ವೇಳೆ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ನೀಡಿದ್ದಾರೆ. ಇದೆಲ್ಲವೂ ಅವರ ನೇತೃತ್ವದ ಹೋರಾಟದ ಫಲ. ಇದನ್ನು ಉಳಿಸಿಕೊಂಡು ಸರಿಯಾದ ರೀತಿಯಲ್ಲಿ ಜಾರಿಯಲ್ಲಿಡಬೇಕು. ಗಾಂಧೀಜಿ ಅವರನ್ನು ದಿನನಿತ್ಯ ನೆನೆಯಬೇಕು ಎಂಬ ಕಾರಣಕ್ಕೆ ಅವರ ಭಾವಚಿತ್ರವನ್ನು ನೋಟುಗಳ ಮೇಲೆ ಮುದ್ರಿಸಲಾಗಿದೆ. ಮಹಾತ್ಮ ಎಂಬ ಹೆಸರು ಪಡೆದ ನಾಯಕನ ಸ್ಮರಣೆ ಮಾಡುವ ಆಚರಣೆ ವೇಳೆ ಪ್ರತಿಭಟನೆ ಮಾಡುತ್ತೇವೆ ಎಂದರೆ ನಾವು ಹೆದರುತ್ತೇವಾ ಎಂದರು.

ಡಿ. 27ರ ಬಳಿಕ ಉತ್ತರಿಸುವೆ
ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರನ್ನು ಫೇಕ್‌ ಎನ್‌ಕೌಂಟರ್‌ ಮಾಡುವ ಷಡ್ಯಂತ್ರ ನಡೆದಿತ್ತು ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ಉತ್ತರಿಸುವುದಿಲ್ಲ. ಅದಕ್ಕೆ ಗೃಹ ಸಚಿವರು, ಪೊಲೀಸರು ಉತ್ತರ ನೀಡುತ್ತಾರೆ. ಸಿ.ಟಿ. ರವಿ ಅಶ್ಲೀಲ ಪದ ಬಳಕೆ ಮಾಡಿದ್ದರ ಬಗ್ಗೆ ಬಿಜೆಪಿಯವರು ಏನೂ ಪ್ರತಿಕ್ರಿಯಿಸುತ್ತಿಲ್ಲ. ಡಿ. 27ರ ಕಾರ್ಯಕ್ರಮ ಮುಗಿದ ಬಳಿಕ ಮಾತನಾಡುತ್ತೇನೆ. ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣದಲ್ಲಿ ಉತ್ತರಿಸುತ್ತೇನೆ ಎಂದರು.

ಕೆಲಸಗಳೇ ಮಾಡದಿದ್ದರೆ ತಪ್ಪುಗಳೇ ಇರೋದಿಲ್ಲ
ಬಲಿಷ್ಠರಾಗಿದ್ದಷ್ಟು ಹೆಚ್ಚು ಶತ್ರುಗಳು. ಕಡಿಮೆ ಶಕ್ತಿಶಾಲಿಯಾದರೆ ಕಡಿಮೆ ಶತ್ರುಗಳು, ದುರ್ಬಲರಾಗಿದ್ದರೆ ಯಾವುದೇ ಶತ್ರುಗಳಿರುವುದಿಲ್ಲ. ಹೆಚ್ಚು ಕೆಲಸ ಮಾಡಿದಷ್ಟು ಹೆಚ್ಚು ತಪ್ಪುಗಳು, ಕಡಿಮೆ ಕೆಲಸ ಮಾಡಿದಷ್ಟು ಕಡಿಮೆ ತಪ್ಪುಗಳು, ಕೆಲಸಗಳೇ ಮಾಡದಿದ್ದರೆ ತಪ್ಪುಗಳೇ ಇರುವುದಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next